ಹೊನ್ನಾವರ: ಬಸ್ ನಿಲ್ದಾಣದಲ್ಲಿ ಬಸ್ ಹತ್ತುವ ವೇಳೆ ಮಹಿಳೆಯರಿಬ್ಬರ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ಕಳ್ಳರು ಎಗರಿಸಿದ ಘಟನೆ ನಡೆದಿದೆ. ಗೇರುಸೊಪ್ಪ ಮಾರ್ಗವಾಗಿ ಹಡಿನಬಾಳ ಕಡೆಗೆ ಹೋಗಲು ಬಸ್ಸು ಹತ್ತಿದ್ದ ವೇಳೆ ಮಹಿಳೆಯೊಬ್ಬಳ ಸುಮಾರು 2.50 ಲಕ್ಷ ಮೌಲ್ಯದ ಮಾಂಗಲ್ಯ ಸರವನ್ನು ಕಳ್ಳರು ಎಗರಿಸಿದ್ದಾರೆ. ಇದೇ ಸಂದರ್ಭದಲ್ಲಿ ಹೊಸಪಟ್ಟಣದ ಇನ್ನೋರ್ವ ಮಹಿಳೆ ಕೂಡ ತನ್ನ ಕೊರಳಲ್ಲಿದ್ದ ಚಿನ್ನವನ್ನು ಕಳೆದುಕೊಂಡ ಬಗ್ಗೆ ಮಾಹಿತಿ ಹೊರಬಿದ್ದಿದೆ.
ಪ್ರಥಮ ವರದಿ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಹೊನ್ನಾವರದ ಅಪರಾಧ ವಿಭಾಗದ ಪಿ. ಎಸ್. ಐ. ಗಣೇಶ ನಾಯ್ಕ ತಿಳಿಸಿ, ಹೊನ್ನಾವರ ಬಸ್ ನಿಲ್ದಾಣದಲ್ಲಿ ಸಿ. ಸಿ ಕ್ಯಾಮರಾ ಅಳವಡಿಸದೇ ನಿರ್ಲಕ್ಷ್ಯಮಾಡಲಾಗಿದೆ. ಒಂದು ವರ್ಷದ ಹಿಂದೆಯೇ ಸಿ. ಸಿ. ಕ್ಯಾಮರಾ ಅಳವಡಿಸಲು ಸಾರಿಗೆ ಸಂಸ್ಥೆಗೆ ಸೂಚಿಸಲಾಗಿದ್ದರೂ ಈ ವರೆಗೆ ಸಿ. ಸಿ. ಕ್ಯಾಮೆರಾ ಅಳವಡಿಸಿಲ್ಲ. ಬಹುಶಃ ಯಾರೋ ವೃತ್ತಿನಿರತರು ಇದರ ದುರ್ಲಾಭ ಪಡೆದಿರುವ ಸಾಧ್ಯತೆ ಇದೆ ಎಂದಿದ್ದಾರೆ. ಈ ಬಗ್ಗೆ ಜಿಲ್ಲಾ ವ್ಯವಸ್ಥಾಪಕರ ಗಮನ ಸೆಳೆದಾಗ ಸಿ. ಸಿ. ಕ್ಯಾಮೆರಾ ಅಳವಡಿಕೆಗೆ ಕೇಂದ್ರ ಕಛೇರಿ ಟೆಂಡರ್ ಪ್ರಕ್ರಿಯೆ ನಡೆಸಿದ್ದು ಆದಷ್ಟು ಬೇಗ ಸಿ. ಸಿ. ಕ್ಯಾಮೆರಾ ಅಳವಡಿಸಲು ಕೇಂದ್ರ ಕಛೇರಿಯ ಗಮನ ಸೆಳೆಯಲಾಗಿದೆ ಎಂದಿದ್ದಾರೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ