ಕಾವೇರುತ್ತಿದೆ ಉಪ ಚುನಾವಣೆ ಕಣ : ವಾರ್ಡ್ ನಂ 15 ರಲ್ಲಿ ಮೂವರು ಮಹಿಳೆಯರು ಮತ್ತು ವಾರ್ಡ್ ನಂ 16 ರಲ್ಲಿ ಮೂವರು ಪುರುಷರ ನಡುವೆ ತ್ರಿಕೋನ ಸ್ಪರ್ಧೆ

ಅಂಕೋಲಾ: ಪುರಸಭೆಯ 2 ವಾರ್ಡಗಳ ಸದಸ್ಯತ್ವ ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತಿತರ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಂತಿಮವಾಗಿ ವಾರ್ಡ್ ನಂ 15 ರಲ್ಲಿ ಮೂವರು ಮಹಿಳೆಯರು ಮತ್ತು ವಾರ್ಡ್ ನಂ 16 ರಲ್ಲಿ ಮೂವರು ಪುರುಷರು ಸ್ಪರ್ಧಾ ಕಣದಲ್ಲಿದ್ದು, ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಈ ಹಿಂದೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಜೈರಾಭಿ ಆಶ್ಪಾಕ್ ಬೇಂಗ್ರೆ ( ವಾರ್ಡ ನಂ 15) ಮತ್ತು ವಿಶ್ವನಾಥ ನಾಯ್ಕ (ವಾರ್ಡ ನಂ 16 ) ಇವರು,ಇತ್ತೀಚಿಗೆ ನಡೆದಿದ್ದ ರಾಜ್ಯ ವಿಧಾನಸಭೆಯ ಚುನಾವಣೆ ಪೂರ್ವ ,ತಮ್ಮ ಪುರಸಭಾ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ತೊರೆದು ನಂತರ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಇದರಿಂದ ಪುರಸಭೆಯಲ್ಲಿ ತೆರವಾಗಿದ್ದ ಈ ಎರಡೂ ವಾರ್ಡಗಳ ಸದಸ್ಯತ್ವ ಸ್ಥಾನ ತುಂಬಲು ಡಿ. 27 ರಂದು ಉಪ ಚುನಾವಣೆ ನಡೆಯಲಿದ್ದು ಡಿ 30 ರಂದು ಫಲಿತಾಂಶ ಪ್ರಕಟವಾಗಂದೆ.. ಈ ಬಾರಿ ವಾರ್ಡ್ ನಂ 15 ರಿಂದ ಜೈರಾಭಿ ಅಶ್ಪಾಕ್ ಬೇಂಗ್ರೆ (ಬಿ ಜೆ ಪಿ ),ನಾಜನಿನ್ ಮನ್ಸೂರ್ ಸೈಯದ್ ( ಕಾಂಗ್ರೆಸ್ ), ಶಾಂತಿ ಯಾನೆ ಕವಿತಾ ಗಣಪತಿ ನಾಯ್ಕ (ಪಕ್ಷೇತರ ) ರಾಗಿ ಸ್ಪರ್ಧಿಸಿದ್ದು ಈ ಮೂವರು ಮಹಿಳಾ ಮಣಿಗಳ ನಡುವಿನ ಸ್ಪರ್ಧೆಯಲ್ಲಿ ಮತದಾರರು ಯಾರ ಪರ ಹೆಚ್ಚಿನ ಒಲವು ತೋರಲಿದ್ದಾರೆ ಕಾದು ನೋಡಬೇಕಿದೆ.

ಕಳೆದ ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದ ಜೈರಾಭಿ ಬೇಂಗ್ರೆಗೆ ಈ ಬಾರಿ ಗೆಲುವು ಸುಲಭ ಸಾಧ್ಯವಲ್ಲ ಎನ್ನುವ ಮಾತು ಸಾರ್ವಜನಿಕ ವಲಯದಿಂದ ಕೇಳಿಬಂದಂತಿದೆ. ಸಕಾರಣವಿಲ್ಲದೇ ಮೂಲ ಪಕ್ಷ ತೊರೆದದ್ದು, ಪಕ್ಷಾಂತರದ ಬಳಿಕ ಬಿ ಜಿ ಪಿ ಯಿಂದ ಮತ್ತೆ ಟಿಕೆಟ್ ಗಿಟ್ಟಿಸಿಕೊಂಡು ಸ್ಪರ್ಧಿಸಿರುವುದು, ಪಕ್ಷದಲ್ಲಿ ಈ ಮೊದಲಿನಿಂದಲೂ ಗುರುತಿಸಿಕೊಂಡು ಸ್ಪರ್ಧಾ ಆಕಾಂಕ್ಷಿಗಳಾಗಿದ್ದ ಕೆಲ ಮುಖಂಡರ ಆಸೆಗೆ ತಣ್ಣೀರೆರೆಚಿದಂತಾಗಿದೆ. ಅಲ್ಲದೇ ಬಿಜೆಪಿ ಪಕ್ಷದಲ್ಲಿ ವಲಸೆ ಬಂದವರಿಗೆ ಹೆಚ್ಚಿನ ಮಣೆ ಹಾಕುತ್ತಿರುವ ಕೆಲ ನಾಯಕ- ನಾಯಕಿಯರ ನಡೆಗೆ ಒಳಗಿಂದ ಒಳಗೆ ಅಸಮಧಾನಗೊಂಡಿರುವ ಕೆಲ ಅತೃಪ್ತರು, ತಟಸ್ಥ ಧೋರಣೆ ತಾಳಿದರೆ ,ಇಲ್ಲವೇ ಪಕ್ಷದ ವಿರುದ್ಧ ಕೆಲಸ ಮಾಡಿದರೆ ಇದು ಜೈರಾಭಿ ಬೆಂಗ್ರೆ ಗೆಲುವಿನ ಆಸೆಗೆ ಹಿನ್ನಡೆ ಆಗುವ ಸಾಧ್ಯತೆ ಇದೆ.

ಇದರ ಜೊತೆಯಲ್ಲಿಯೇ ಕೆಲವೊಮ್ಮೆ ರಾಜಕೀಯ ಕಾರಣಳಿಂದ ಜಾತಿ-ಧರ್ಮ ಆಧಾರಿತ ರಣನೀತಿ ರೂಪಿಸಲಾಗುತ್ತಿದ್ದು, ರಾಷ್ಟ್ರೀಯ ಎರಡು ಪಕ್ಷಗಳ ವಿರುದ್ಧ, ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು, ಸ್ಥಳೀಯ ಪ್ರಭಾವಿ ಮಾಜಿ ಜನಪ್ರತಿನಿಧಿಯೊಬ್ಬರು ತೆರೆ ಮರೆಯಲ್ಲಿ ನಿಂತು ರಾಜಕೀಯ ತಂತ್ರಗಾರಿಕೆ,ಮಾರ್ಗದರ್ಶನ ನೀಡಿ, ಸ್ಥಳೀಯ ಕಲಾವಿದ ಮತ್ತು ಕೆಲ ಯುವಕರು ಮತ್ತು ಸಾಮಾಜಿಕ ಕಾರ್ಯಕರ್ತರೋರ್ವರ ಗುಂಪಿಗೆ ಸಂಪೂರ್ಣ ಆಶೀರ್ವಾದದ ಭರವಸೆ ನೀಡಿ, ಅವರ ಮೂಲಕ ಅಂಗನವಾಡಿ ನಿವೃತ್ತ ಶಿಕ್ಷಕಿ ಓರ್ವರನ್ನು ಪಕ್ಷೇತರರಾಗಿ ಕಣಕ್ಕಿಳಿಸಿದರೇ? ಎಂಬ ಮಾತು ಅಲ್ಲಲ್ಲಿ ಕೇಳಿ ಬಂದಿದೆ. ಈ ಮೂಲಕ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಪಕ್ಷೇತರ ಅಭ್ಯರ್ಥಿ ತೀವ್ರ ಪೈಪೋಟಿ ನೀಡುವುದು ಗ್ಯಾರಂಟಿ ಎಂಬಂತಾಗಿದೆ.

ಉತ್ತಮ ಸಂಸ್ಕಾರ ಯತ ಕುಟುಂಬದಿಂದ ಬಂದ ಶಾಂತಿ ಯಾನೆ ಕವಿತಾ ಗಣಪತಿ ನಾಯ್ಕ,ಸುತ್ತಮುತ್ತಲಿನ ಎಲ್ಲ ಗ್ರಾಮಸ್ಥರೊಂದಿಗೆ ಈ ಮೊದಲಿನಿಂದಲೂ ಪ್ರೀತಿ ಮತ್ತು ಉತ್ತಮ ಬಾಂಧ್ಯವ್ಯ ಹೊಂದಿದ್ದು, ಚಿರಪರಿಚಿತರಾಗಿದ್ದಾರೆ. ಈ ಬಾರಿ ಸ್ಥಳೀಯ ಮತ್ತು ಉತ್ತಮರಿಗೆ ಅವಕಾಶ ಸಿಗಬೇಕೆನ್ನುವ ಹಂಬಲ ಹಲವರದ್ದಾಗಿದ್ದು ಸದ್ಯದ ಪರಿಸ್ಥಿತಿಯಲ್ಲಿ ಪ್ರಭಲ ಸ್ಪರ್ಧಿಯಾಗಿ,ಮತ ಗಳಿಕೆಯಲ್ಲಿಯೂ ಮೊದಲ ಇಲ್ಲವೇ ಎರಡನೇ ಸ್ಥಾನ ಪಡೆಯುವ ಸಾಧ್ಯತೆಗಳು ಹೆಚ್ಚಿದೆ ಎನ್ನಲಾಗಿದೆ.

ಇನ್ನು ಕಾಂಗ್ರೆಸ್ ಪಕ್ಷದಿಂದ ಹೊಸ ಮುಖವಾಗಿ ಕಣಕ್ಕಿಳಿಯಿತ್ತಿರುವ ನಾಜನಿನ್ ಮನ್ಸೂರ್ ಸೈಯದ್ ಉತ್ತಮ ಕೌಟಂಬಿಕ ಮತ್ತು ಸೇವಾ ಹಿನ್ನಲೆಯಿಂದ ಬಂದಿದ್ದು, ಕಾಂಗ್ರೆಸ್ ನ ಗಟ್ಟಿ ನೆಲ ಮುಲ್ಲಾವಾಡ ಮತ್ತಿತರೆಡೆಯ ಬಹುತೇಕ ಮತಗಳನ್ನು ತಮ್ಮದಾಗಿಸಿಕೊಳ್ಳುವ ಲಕ್ಷಣಗಳಿವೆ. ಕೈ ಕೊಟ್ಟ ಈ ಮೊದಲಿನ ಸದಸ್ಯೆ ವಿರುದ್ಧದ ಅಸಮಾಧಾನ, ಸ್ಥಳೀಯ ಮಟ್ಟದ ಕಾಂಗ್ರೆಸ್ ನಾಯಕರ ಸಂಘಟಿತ ಪ್ರಯತ್ನ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಮಹಿಳೆಯರ, ಕೌಟುಂಬಿಕ ಅಭಿವೃದ್ಧಿಗೆ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು,ಕೈ ಹಿಡಿಯುವ ಲಕ್ಷಣಗಳಿದ್ದು,ಸ್ಥಳೀಯ ಶಾಸಕರು ಕಾಂಗ್ರೆಸ್ ನವರೇ ಆಗಿರುವುದು ಗೆಲುವಿನ ಹತ್ತಿರದಲ್ಲಿ ತಂದು ನಿಲ್ಲಿಸಿದಂತೆ.ಕೊನೆಯವರೆಗೂ ಎದುರಾಳಿಗಳ ತಂತ್ರಕ್ಕೆ ಪ್ರತಿ ತಂತ್ರ ರೂಪಿಸಿದರೆ ಗೆಲುವು ದೊರೆಯುವ ಸಾಧ್ಯತೆಗಳು ಹೆಚ್ಚಿವೆ .

ಇಲ್ಲಿ ಬಿಜೆಪಿ ಅವರಿಗೆ ಎದುರಾಳಿಯಾಗುವುದಕ್ಕಿಂತ ಪಕ್ಷೇತರ ಅಭ್ಯರ್ಥಿಯೇ ನೇರ ಸ್ಪರ್ಧೆ ಒಡ್ಡುವ ಸಾಧ್ಯತೆಗಳು ಅಧಿಕವಾಗಿದೆ ಎನ್ನಲಾಗಿದೆ. ಆದರೂ ಮಹಿಳಾ ಮಣಿಗಳಲ್ಲಿ ಗೆಲುವಿನ ಮುಕುಟ ಯಾರಿಗೆ ಎನ್ನುವುದು ನಿಗೂಢವಾದಂತಿದೆ. ಇನ್ನು ತೀವೃ ಜಿದ್ದಾ ಜಿದ್ದಿಯಿಂದ ಕೂಡಿದಂತಿರುವ ವಾರ್ಡ್ ನಂ 16 ರಲ್ಲಿ ಮೂವರು ಪುರುಷ ಅಭ್ಯರ್ಥಿಗಳು ಪ್ರಭಲ ಒಂದೇ ಜಾತಿಯವರಾಗಿರುವುದು ವಿಶೇಷವಾಗಿದ್ದು, ಇತರೆ ಜಾತಿ, ಧರ್ಮಧ ಓಟುಗಳು ಬಹಳಷ್ಟಿದ್ದು, ಇಲ್ಲಿಯೂ ತ್ರಿಕೋನ ಸಮರ ಏರ್ಪಟ್ಟು ಓಟುಗಳು ಓಡೆದು ಹಂಚಿಕೆಯಾಗುವ ಸಾಧ್ಯತೆ ಇದ್ದಂತಿದೆ. ವಿಶ್ವನಾಥ ತುಕ್ಕಪ್ಪ ನಾಯ್ಕ ( ಬಿ ಜೆ ಪಿ ), ಉಮೇಶ ಗೋವಿಂದ ನಾಯ್ಕ (ಕಾಂಗ್ರೆಸ್ ), ಪ್ರಕಾಶ ಕಾಂತಾರಾಮ ನಾಯ್ಕ (ಪಕ್ಷೇತರ) ತಮ್ಮ ಉಮೇದು ವಾರಿಕೆ ಸಲ್ಲಿಸಿದ್ದು, ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ತನ್ನದೇ ಆದ ಸ್ಪ -ಸಾಮರ್ಥ್ಯ, ಈ ಹಿಂದೆ ಎರಡು ಬಾರಿ ವಾರ್ಡ್ ಸದಸ್ಯರಾಗಿ ಆಯ್ಕೆಯಾಗಿರುವ ಅನುಭವ, ತಾಯಿಯೂ ಈ ಹಿಂದೆ ಪಟ್ಟಣ ಪಂಚಾಯತ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಹಿನ್ನಲೆ, ಹತ್ತಾರು ಸಾಮಾಜಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಚಿರಪರಿಚಿತರಾಗಿರುವುದು, ಕುಟುಂಬದ ಮತ್ತು ಗೆಳೆಯರ ಹಾಗೂ ಹಿತೈಷಿಗಳ ಬೆಂಬಲ, ಮೋದಿ ಹೆಸರಲ್ಲಿ ಬಿ. ಜಿ. ಪಿ. ಪರವಾಗಿರುವ ಕೆಲ ಕಟ್ಟಾ ಕಾರ್ಯಕರ್ತರು, ಮಾಜಿ ಶಾಸಕಿಯ ಕೃಪಾಶೀರ್ವಾದ ವಿಶ್ವನಾಥ ಅವರಿಗೆ ಪ್ಲಸ್ ಪಾಯಿಂಟ್ ಎನ್ನಲಾಗಿದೆ.

ಆದರೂ ಕಾಂಗ್ರೆಸ್ ಭದ್ರ ಕೋಟೆಯಂತಿರುವ ವಾರ್ಡ್ ಹಾಗೂ ಪಕ್ಷದ ಹೆಸರಿನಲ್ಲಿ ಬೆಳೆದು ಬಂದು, ಅದಾವುದೋ ಕಾರಣಕ್ಕೆ ಪಕ್ಷ ತೊರೆದು ಅನ್ಯ ಪಕ್ಷ ಸೇರಿ, ಅಲ್ಲಿನ ಕೆಲ ಆಕಾಂಕ್ಷಿಗಳನ್ನು ಬದಿಗೆ ಸರಿಸಿ, ಟಿಕೇಟ್ ಗಿಟ್ಟಿಸಿಕೊಂಡಿರುವುದರಿಂದ, ಬಿಟ್ಟು ಬಂದ ಪಕ್ಷ ಹಾಗೂ ಕಟ್ಟಿಕೊಂಡ ಹೊಸ ಪಕ್ಷದ ಕೆಲವರ ಅಸಮಾಧಾನ, ಮತ್ತೊಮ್ಮೆ ಗೆಲ್ಲಲೇ ಬೇಕೆಂದು ಹೊರಟಿರುವ ವಿಶ್ವನಾಥ ಪಾಲಿಗೆ ಸ್ವಲ್ಪ ಕಷ್ಟಕರ ಎನ್ನಲಾಗಿದೆ. ಇನ್ನು ಕಾಂಗ್ರೆಸ್ ಪಕ್ಷಕ್ಕೆ ತನ್ನ ಮೂಲಸ್ಥಾನ ಉಳಿಸಿಕೊಳ್ಳಬೇಕಾದ ಅವಶ್ಯಕತೆ ಇದ್ದು, ಹಿರಿಯ ಸಮಾಜ ಸೇವಕ , ಅಂಕೋಲಾ ಅರ್ಬನ್ ಬ್ಯಾಂಕ್ ನಿರ್ದೇಶಕ ಮತ್ತು ಹತ್ತಾರು ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಉಮೇಶ ನಾಯ್ಕ ಇವರನ್ನು ಕಣಕ್ಕಿಳಿಸಿ ಅವರ ಗೆಲುವಿನ ನಿರೀಕ್ಷೆಯಲ್ಲಿದೆ.

ಉಮೇಶ ನಾಯ್ಕ ಕುಟುಂಬ ಸದಸ್ಯರು, ಆಪ್ತ ಬಳಗ ಗೆಲುವಿನ ವಿಶ್ವಾಸದಲ್ಲಿ ಮತಯಾಚನೆಯಲ್ಲಿ ತೊಡಗಿದ್ದು, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಜಾರಿಗೆ ತಂದ ಜನಪರ ಗ್ಯಾರಂಟಿ ಯೋಜನೆಗಳು, ಕ್ಷೇತ್ರದ ಶಾಸಕರು ಕಾಂಗ್ರೆಸ್ ನವರಾಗಿರುವುದು, ವಾರ್ಡನಲ್ಲಿ ಹೊಸ ಮುಖದ ಆಯ್ಕೆ ಗೆ ಕೆಲ ಮತದಾರರು ಒಲವು ವ್ಯಕ್ತಪಡಿಸಿದಂತಿರುವುದು, ಇನ್ನಿತರೆ ಕೆಲ ಕಾರಣಗಳಿಂದ ಉಮೇಶ ನಾಯ್ಕ ಗೆಲುವಿನ ಆತ್ಮ ವಿಶ್ವಾಸದಲ್ಲಿದಂತಿದೆ. ಆದರೆ ಅದನ್ನು ಅವರು ಗೆಲುವಾಗಿ ಪರಿವರ್ತಿಸಿ ಕೊಳ್ಳುವವರೆಗೂ ಅತಿಯಾದ ಆತ್ಮ ವಿಶ್ವಾಸವೂ ಸಲ್ಲ ಎನ್ನುವವರಿದ್ದಾರೆ. ಇನ್ನು ಪಕ್ಷೇತರರಾಗಿ ಸ್ಪರ್ಧಿಸಿರುವ ಪ್ರಕಾಶ ನಾಯ್ಕ (ಪಪ್ಪು )ಈ ಬಾರಿ ಗೆಲ್ಲಲೇ ಬೇಕೆಂಬ ಉತ್ಕಟ ಯೋಜನೆ – ಯೋಚನೆ ಮಾಡಿದಂತಿದ್ದು, ಈ ಹಿಂದೆ 1-2 ಬಾರಿ ಸ್ಪರ್ಧಿಸಿ, ಒಮ್ಮೆ ಬೆರಳೆಣಿಕೆ ಮತಗಳಿಂದ ಪರಾಭವ ಹೊಂದಿದ್ದು, ವಾರ್ಡನಲ್ಲಿ ಅದರ ಅನುಕಂಪದ ಲಾಭ ಪಡೆದುಕೊಳ್ಳಲು ಸಾಧ್ಯತೆ ಇದೆ.

ತನ್ನ ಸಾಮಾಜಿಕ ಸೇವೆ, ಈ ಹಿಂದಿನ ಪಕ್ಷದ ಜೊತೆಗಿನ ಗಟ್ಟಿ ಬಾಂಧ್ಯವ, ಎದುರಾಳಿಗಳ ವಿರುದ್ಧ ವಾರ್ಡ್ ಮತದಾರರಿಗಿರುವ ಮತ್ತು ಪಕ್ಷದ ಕೆಲ ನಾಯಕರಿಗಿರುವ ಅಸಮಾಧಾನ ಮತಗಳಾಗಿ ಮಾರ್ಪಟ್ಟರೆ ಪ್ರಕಾಶನಿಗೂ ಗೆಲುವಿನ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಒಟ್ಟಿನಲ್ಲಿ ವಾರ್ಡ್ ನಂ 15 ರಿಂದ ಮೂವರು ಮಹಿಳೆಯರು, ವಾರ್ಡ್ ನಂಬರ 16 ರಿಂದ ಮೂವರು ಪುರುಷರು ಅಭ್ಯರ್ಥಿಗಳಾಗಿದ್ದು, ಆಯಾ ವಾರ್ಡನಲ್ಲಿ ಯಾರು ಹಿತವರು ನಮಗೆ ಈ ಮೂವರೊಳಗೆ ಎನ್ನುವ ಲೆಕ್ಕಾಚಾರದಲ್ಲಿ ಮತದಾರರು ಇದ್ದಂತಿದೆ.

ಮೇಲ್ಮೋಟಕ್ಕೆ ಈ ಮೇಲಿನ ಎಲ್ಲಾ ಅಂಶಗಳು ಸರಿಯಾಗಿದೆ ಎನಿಸಿದರೂ ಚುನಾವಣೆಯೂ ಕ್ರಿಕೆಟ್ ಆಟದಂತೆ ಅನಿಶ್ಚತೆಯಿಂದ ಕೂಡಿದ್ದು, ಅಂತಿಮ ಕ್ಷಣದಲ್ಲೂ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರಲಿದೆ, ಯಾರ ಗೆಲುವನ್ನೂ, ಯಾರ ಸೋಲನ್ನು ಈಗಲೇ ಸ್ಪಷ್ಟವಾಗಿ ತಿಳಿಸಲು ಕಷ್ಟ ಸಾಧ್ಯ ಎಂಬಂತಿದ್ದು, ಡಿ 27 ರ ಚುನಾವಣೆಯಲ್ಲಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಿ, ಡಿ.30ರ ಚುನಾವಣಾ ಫಲಿತಾಂಶ ಪ್ರಕಟವಾಗುವವರೆಗೆ ಎಲ್ಲರೂ ಕಾಯಲೇ ಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version