ಭೀಕರ ರಸ್ತೆ ಅಪಘಾತ: ಕಾರು ಬಡಿದು ಪಾದಾಚಾರಿ ಮಹಿಳೆ

ಅಂಕೋಲಾ : ತಾಲೂಕಿನ ಅವರ್ಸಾದಲ್ಲಿ ಹಾದು ಹೋಗಿರುವ ರಾ.ಹೆ. 66 ರಲ್ಲಿ ಬೆಳಗಿನ ಜಾವ ಸಂಭಂದಿಸಿದ ಭೀಕರ ರಸ್ತೆ ಅಪಘಾತವೊಂದರಲ್ಲಿ XUV 500 ವಾಹನವೊಂದು ಪಾದಾಚಾರಿ ಮಹಿಳೆಗೆ ಜೋರಾಗಿ ಬಡಿದ ಪರಿಣಾಮ, ಮಹಿಳೆ ಸ್ಥಳದಲ್ಲೇ ಮೃತ ಪಟ್ಟಿದ್ದಾಳೆ. ಡೋಂಗ್ರಿ ಪಂಚಾಯತ್ ಹೆಗ್ಗರಣಿ ಮೂಲದ ದೀಪಾ (ಶಾಲಿನಿ ) ಅಶೋಕ ನಾಯ್ಕ ( 52) ಮೃತ ದುರ್ದೈವಿ ಆಗಿದ್ದು,ಈ ಮಹಿಳೆ ತನ್ನ ಹೆಣ್ಣು ಮಕ್ಕಳ ಜೊತೆ ಅವರ್ಸಾದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದು, ದಿನ ನಿತ್ಯದಂತೆ ಮಾರ್ನಿಂಗ್ ವಾಕ್ ಇಲ್ಲವೇ ಇನ್ನಿತರೇ ಕಾರಣಗಳಿಂದ ಹೆದ್ದಾರಿ ಅಂಚಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಗೋವಾದ ಟ್ರಿಪ್ ಮುಗಿಸಿ ಗೋಕರ್ಣ ಕಡೆ ತೆರಳುತ್ತಿದ್ದರು ಎನ್ನಲಾದ ಕೋಲಾರ – ಮುಳಬಾಗಲು ಮತ್ತಿತರೆಡೆಯ ಪ್ರವಾಸಿಗ ಯುವಕರಿದ್ದ XUV 500 ವಾಹನ ಚಾಲಕನ ನಿಯಂತ್ರಣ ತಪ್ಪಿ ಪಾದಾಚಾರಿ ಮಹಿಳೆಗೆ ಜೋರಾಗಿ ಡಿಕ್ಕಿ ಪಡೆಸಿದ್ದಲ್ಲದೇ, ಹೆದ್ದಾರಿ ಅಂಚಿನ ಪುಟಪಾತ್ ದಾಟಿ ಪಕ್ಕದ ಪ್ರದೇಶಕ್ಕೆ ನುಗ್ಗಿದ್ದು, ಅಪಘಾತದ ತೀವೃತೆಗೆ ಮಹಿಳೆಗೆ ತೀವೃ ಗಾಯ ನೋವುಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.

ತುರ್ತು ಕರೆಯ ಮೇರೆಗೆ 108 ಅಂಬುಲೆನ್ಸ್ ವಾಹನ ತೆರಳಿತ್ತಾದರೂ, ಮಹಿಳೆ ಮೃತ ಪಟ್ಟಿದ್ದರಿಂದ ಎನ್ ಎಚ್ ಎ ಐ (ಹೆದ್ದಾರಿ ಸುರಕ್ಷತಾ ) ವಾಹನದ ಮೂಲಕ ಮೃತ ದೇಹವನ್ನು ,ಮರ ಣೋತ್ತರ ಪರೀಕ್ಷೆಗಾಗಿ ತಾಲೂಕಾ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ. ಶಿವಾ ನಾಯ್ಕ ಮತ್ತಿತರರು ಸಹಕರಿಸಿದರು. ಅಂಕೋಲಾ ಪೋಲೀಸರು ಸಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾನೂನು ಕ್ರಮ ಮುಂದುವರೆಸಿದ್ದು, ಅಪಘಾತದ ಘಟನೆ ಕುರಿತಂತೆ ಪೋಲೀಸರಿಂದ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ಮೃತ ಮಹಿಳೆ, ಅಂಕೋಲಾದ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಓರ್ವರ ತಾಯಿ ಯಾಗಿದ್ದು,ಊರಿನ ಹಾಗೂ ಕುಟುಂಬದ ಎಲ್ಲರೊಂದಿಗೂ ಪ್ರೀತಿ ವಿಶ್ವಾಸದಿಂದ ಬಾಳಿ ಬದುಕಿದ್ದು,ಹಲವರ ಸಂಕಷ್ಟದಲ್ಲಿ ಯಜಮಾನಿಯಾಗಿ ನಿಂತು ಸಂಕಷ್ಟ ಪರಿಹಾರಕ್ಕೆ ಮುಂದಾಗುತ್ತಿದ್ದಳು ಎನ್ನಲಾಗಿದೆ.

ಅವಳ ಅಕಾಲಿಕ ನಿಧನ ಕುಟುಂಬಸ್ಥರು ಮತ್ತು ಊರವರ ತ್ರೀವ ಶೋಕಕ್ಕೆ ಕಾರಣವಾಗಿದ್ದು, ನೂರಾರು ಜನರು ಆಸ್ಪತ್ರೆ ಶವಾಗಾರದತ್ತ ಬಂದು ಮಿಡಿಯುತ್ತಿರುವ ದೃಶ್ಯ ಕಂಡುಬಂದಿದೆ.ಈ ಅಪಘಾತದ ಹೊರತಾಗಿ ಅಂಕೋಲಾ ವ್ಯಾಪ್ತಿಯ ರಾ, ಹೆ 63 ರ ರಾಮನಗುಳಿ ಮತ್ತು ಸುಂಕಸಾಳ ಬಳಿ ಪ್ರತ್ಯೇಕ ಮತ್ತೆರಡು ರಸ್ತೆ ಅಪಘಾತಗಳು ಸಂಭವಿಸಿದೆಯಲ್ಲದೇ, ರಾ ಹೆ 66 ರ ಬಾಳೆಗುಳಿ ಹತ್ತಿರ ಸೈಕಲ್ ಸವಾರನೋರ್ವನಿಗೆ ನಾಲ್ಕು ಚಕ್ರ ವಾಹನವೊಂದು ಅಪಘಾತ ಪಡಿಸಿ, ನಂತರ ಹತ್ತಿರದ ಇನ್ನೊಂದು ಸೈಕಲ್ ಸವಾರನಿಗೂ ಅಪಘಾತ ಪಡಿಸಿದ್ದು, ಪ್ರಯಾಣಿಕರ ತಂಗುದಾಣ ( ಶೆಲ್ಟರ ) ದತ್ತ ಮಗ್ಗಲು ಮುಗುಚಿ ನುಗ್ಗಿದೆ.

ಅಲಗೇರಿ ಮೂಲದ ಓರ್ವ ಸೈಕಲ್ ಸವಾರನ ತಲೆ ಮತ್ತಿತರ ಅಂಗಾಗಗಳಿಗೆ ತೀವ್ರ ಸ್ವರೂಪದ ಗಾಯ ನೋವುಗಳಾಗಿ ಚಿಂತಾ ಜನಕ ಸ್ಥಿತಿಯಲ್ಲಿದ್ದು ತಾಲೂಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಅಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಇನ್ನೋರ್ವ ಸೈಕಲ್ ಸವಾರ ಎಡಗಾಲು ಮತ್ತಿತರೆಡೆ ಗಾಯ ನೋವುಗಳಾಗಿ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಟ್ಟಿದ್ದಾನೆ. ಈ ಎಲ್ಲಾ ಪ್ರತ್ಯೇಕ ಪ್ರತ್ಯೇಕ ಅಪಘಾತದ ಘಟನೆ ಕುರಿತಂತೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version