ಅಂಕೋಲಾ: ಪಟ್ಟಣದ ಅಜ್ಜಿಕಟ್ಟಾದಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಲಾಗಿರುವ ಮಸೀದಿಯಲ್ಲಿ ಧ್ವನಿವರ್ಧಕ ಬಳಸಲು ಅನುಮತಿ ನೀಡಬಾರದು ಎಂದು, ಕೆಲ ಪ್ರಮುಖರು ಸ್ಥಳೀಯ ನಾಗರಿಕರ ಪರವಾಗಿ ಅಂಕೋಲಾ ತಹಶೀಲ್ಧಾರರಿಗೆ, ಪುರಸಭೆ ಮುಖ್ಯಾಧಿಕಾರಿಗೆ ಮತ್ತು ಪೊಲೀಸ್ ನಿರೀಕ್ಷಕರಿಗೆ ಮನವಿ ನೀಡಿ ಶಾಂತತಾ ಭಂಗವಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ.
ಅಜ್ಜಿಕಟ್ಟಾದಲ್ಲಿ ಮಸ್ಜದ್ ಎ ಮಹಮ್ಮದಿ ಎಂಬ ಅನಧಿಕೃತ ಮಸೀದಿ ನಡೆಸಲಾಗುತ್ತಿದ್ದು ಅಕ್ಕ ಪಕ್ಕದಲ್ಲಿ ಹಲವಾರು ಮನೆಗಳಲ್ಲಿ ಇದ್ದು ವೃದ್ಧರೇ ಹೆಚ್ಚಿದ್ದು, ಹೃದಯ ಸಂಬಂಧಿ ಮತ್ತಿತರ ಕಾಯಿಲೆ ಇರುವವರೂ ಇದ್ದು , ಹತ್ತಿರದಲ್ಲಿ ಧ್ವನಿವರ್ಧಕ ಬಳಸುವುದರಿಂದ ಅವರಿಗೆ ತೊಂದರೆ ಆಗುತ್ತಿದ್ದು ಅನಧಿಕೃತ ಮಸೀದಿಯಲ್ಲಿ ಧ್ವನಿವರ್ಧಕ ಬಳಕೆಗೆ ಅವಕಾಶ ನೀಡಬಾರದು ಮತ್ತು ಮಸೀದಿ ಕಾರ್ಯಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಗ್ರಂಥಾಲಯ, ಅರೇಬಿಕ್ ಶಾಲೆ ಮತ್ತು ಪ್ರಾರ್ಥನಾ ಮಂದಿರ ನಿರ್ಮಾಣಕ್ಕೆ ಪುರಸಭೆ ವತಿಯಿಂದ ಅನಾಕ್ಷೇಪಣಾ ಪತ್ರ ನೀಡುವ ಸಂದರ್ಭದಲ್ಲಿ ಧ್ವನಿವರ್ಧಕ ಬಳಸಬಾರದು ಎಂಬ ಷರತ್ತುಗಳನ್ನು ವಿಧಿಸಿ, ಸಾರ್ವಜನಿಕರಿಂದ ತಕರಾರು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿ ಅನುಮತಿ ನೀಡಲಾಗಿದೆ ಎನ್ನಲಾಗಿದೆ. ಈ ಹಿಂದೆಯೂ ಸ್ಥಳೀಯರು ಪೊಲೀಸ್ ಇಲಾಖೆಗೆ ಮನವಿಪತ್ರ ನೀಡಿದ್ದು, ಮಸೀದಿಯ 10 ಮೀಟರ್ ಅಂತರದಲ್ಲಿ ಅಜ್ಜಿಕಟ್ಟಾ ಪ್ರಾಥಮಿಕ ಶಾಲೆ ಸಹ ಇರುವುದರಿಂದ ಧ್ವನಿವರ್ಧಕ ಬಳಕೆಗೆ ಅನುಮತಿ ನೀಡಬಾರದು ಎಂದು ವಿನಂತಿಸಿದ್ದರೆಂದು ತಿಳಿಸಲಾಗಿದೆ.
ಅಜ್ಜಿಕಟ್ಟಾದ ವಿಷ್ಣು ನಾಗಪ್ಪ ನಾಯ್ಕ, ರವೀಂದ್ರ ನಾಯ್ಕ, ಓನಮ ಶೆಟ್ಟಿ, ವಿನೋದ ನಾಯ್ಕ, ಅಜಯ ನಾಯ್ಕ, ಸಂತೋಷ ಇಳಿಗೇರ, ವಿನಾಯಕ ನಾಯ್ಕ, ನಾಗರಾಜ ನಾಯ್ಕ, ನಿಹಾಲ್ ಶೇಣ್ವಿ ಮೊದಲಾದವರು ಸ್ಥಳೀಯ ನಾಗರಿಕರ ಪರವಾಗಿ ಅಧಿಕಾರಿಗಳಿಗೆ ಮನವಿ ನೀಡಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ