ಬೆಂಕಿ ಜ್ವಾಲೆಗೆ ಕೆಂಪಾಗಿರುವ ಕೆಂಡದ ರಾಶಿ : ದೇವರ ಪೆಟ್ಟಿಗೆಯನ್ನು ತಲೆ ಹೊತ್ತು ಮೇಲೆ ಕೆಂಡದ ರಾಶಿ ಹಾಯುತ್ತಿರುವ ಗುನಗರು

ಕಾರವಾರ: ಒಂದೆಡೆ ಬೆಂಕಿ ಜ್ವಾಲೆಗೆ ಕೆಂಪಾಗಿರುವ ಕೆಂಡವನ್ನು ರಾಶಿ ಮಾಡುತ್ತಿರುವ ಜನರು. ಇನ್ನೊಂದೆಡೆ ದೇವರು ಹಾಗೂ ದೇವರ ಪೆಟ್ಟಿಗೆಯನ್ನು ತಲೆ ಮೇಲೆ ಹೊತ್ತು ಬೆಂಕಿಯನ್ನು ಸುತ್ತುತ್ತಾ ಕೆಂಡದ ರಾಶಿ ಹಾಯುತ್ತಿರುವ ಗುನಗರು. ಮತ್ತೊಂದೆಡೆ ಈ ಭಕ್ತಿ ಪರಾಕಾಷ್ಠೆಯನ್ನು ಕಣ್ತುಂಬಿಕ್ಕೊಳ್ಳುತ್ತಿರೋ ಭಕ್ತರು. ಈ ದೃಶ್ಯಗಳು ಕಂಡುಬoದಿದ್ದು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಬಿಳಗಿ ಸಮೀಪದ ಕಟ್ಟೆಕೈ ಗ್ರಾಮದಲ್ಲಿ.

ರೈತರು ಬೆಳೆದ ಹೊಸ ಬೆಳೆಗಳನ್ನು ತಾವು ಬಳಸುವ ಮೊದಲು ದೇವರಿಗೆ ನೈವೇದ್ಯ ಮಾಡುವ ನಿಟ್ಟಿನಲ್ಲಿ ಆಚರಿಸುವ ವಿಶಿಷ್ಟ ರೀತಿಯ ಹಾಲಬ್ಬವೊಂದು ಸಿದ್ದಾಪುರ ಕಟ್ಟೆಕೈ ಗ್ರಾಮದಲ್ಲಿ ನಡೆಯಿತು. ಹೊಸಕ್ಕಿ ಹಬ್ಬ ಇಲ್ಲವೇ ಹಾಲಬ್ಬ ಎಂದೇ ಕರೆಸಿಕೊಳ್ಳುವ ಈ ಹಬ್ಬವನ್ನು ತಲೆ ತಲಾಂತರಗಳಿoದ ಆಚರಿಸಲಾಗುತ್ತದೆ.

ಅದರಂತೆ ಕಳೆದ ಮೂರು ದಿನಗಳಿಂದ ಆಚರಿಸಲಾಗುವ ಹಬ್ಬವನ್ನು ಮೊದಲ ದಿನ ಮಹಾಸತಿ ದೇವಾಲಯದಿಂದ ದೇವರನ್ನು ಹುಲಿದೇವರ ಮನೆಗೆ ತಂದು ಪೂಜೆ ಸಲ್ಲಿಸಿದ ಗ್ರಾಮಸ್ಥರು, ತಾವು ಬೆಳೆದ ಹೊಸ ಬೆಳೆಗಳನ್ನು ದೇವರಿಗೆ ನೈವೇದ್ಯ ಮಾಡಿದ್ರು. ಎರಡನೇ ದಿನ ಬ್ರಹ್ಮದೇವರ ಕಾನಿನಲ್ಲಿ ಕೆಂಡದ ಸೇವೆಗೆ ಸಿದ್ಧತೆ ಮಾಡಿಕೊಂಡ ಗ್ರಾಮಸ್ಥರು ಸಂಜೆ ಹೊತ್ತಿಗೆ ದೇವರನ್ನು ಅರಣ್ಯಕ್ಕೆ ಕೊಂಡೊಯ್ದು ಜಾಗರಣ ನಡೆಸಿದ್ರು.

ಮೂರನೇ ದಿನವಾದ ಇಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಗ್ರಾಮಸ್ಥರು ಬಳಿಕ ದೇವರ ಪಾಲಿಕೆಯನ್ನು ಹೊತ್ತು ಸಿದ್ದಗೊಂಡಿದ್ದ ಕೆಂಡದ ರಾಶಿಯ ಸುತ್ತ ಐದು ಸುತ್ತ ಸುತ್ತುವರಿದು ಕೆಂಡ ಹಾಯುವ ಮೂಲಕ ಭಕ್ತಿ ಪರಾಕಾಷ್ಠೆ ಮೆರೆದರು. ಇದು ಅನಾಧಿಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ವರ್ಷದಲ್ಲಿ ಒಮ್ಮೆ ಮಾತ್ರ ನಡೆಯುವ ಹಬ್ಬವನ್ನು ಗ್ರಾಮಸ್ಥರೆಲ್ಲರೂ ಸೇರಿ ಆಚರಣೆ ಮಾಡುತ್ತೇವೆ ಎನ್ನುತ್ತಾರೆ ಗ್ರಾಮದ ಗುನಗರು.

ಇನ್ನು ಕಟ್ಟೆಕೈ ಹಾಲಬ್ಬ ಎಂದರೇ ಸುತ್ತೂರಿನ ಜನರಿಗೂ ಕೂಡ ವಿಶೇಷ. ಅದರಲ್ಲಿಯೂ ಹಬ್ಬದ ದಿನ ಬರಿ ಕಾಲಿನಲ್ಲಿ ದೇವರ ಪೆಟ್ಟಿಗೆ ಹಾಗೂ ದೇವರ ಮುಖಗಳನ್ನು ಹೊತ್ತುಕ್ಕೊಂಡು ಕೆಂಡಹಾಯುವುದನ್ನು ನೋಡುವುದಕ್ಕಾಗಿಯೇ ಗ್ರಾಮಸ್ಥರಲ್ಲದೇ ಅಕ್ಕಪಕ್ಕದ ಊರಿನಿಂದ ನೂರಾರು ಮಂದಿ ಆಗಮಿಸಿದ್ದರು. ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆದ ಹಬ್ಬ ರೈತ ಮಕ್ಕಳ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ದೇವರಿಗೆ ನಡೆದುಕ್ಕೊಳ್ಳುವುದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಸ್ಥಳೀಯರು ಹಾಗೂ ಸುತ್ತಮುತ್ತಲಿನ ಊರಿನ ಜನರಲ್ಲಿದೆ. ಇದೇ ಕಾರಣದಿಂದ ಪ್ರತಿ ವರ್ಷವೂ ಹಬ್ಬದ ದಿನ ದೇವರಿಗೆ ಪೂಜೆ ಸಲ್ಲಿಸಿ ತೆರಳುತ್ತಾರೆ.

ಒಟ್ಟಾರೆ ಕಟ್ಟೆಕೈ ಗ್ರಾಮದಲ್ಲಿ ವಿಶಿಷ್ಟವಾಗಿ ನಡೆಯುವ ಹಾಲಬ್ಬವೂ ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆಯಿತು. ಮೂರು ದಿನವೂ ಸ್ಥಳೀಯವಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸುವುದರ ಜೊತೆಗೆ ತಾವು ಬೆಳೆದ ಹೊಸ ಬೆಳೆಯ ಫಲವನ್ನು ದೇವರಿಗೆ ನೈವೇದ್ಯ ಮಾಡುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು.

ವಿಸ್ಮಯ ನ್ಯೂಸ್, ಸಿದ್ದಾಪುರ

Exit mobile version