ಸಿದ್ದಾಪುರ ತಾಲೂಕಿನಲ್ಲಿ ಮೂವರಲ್ಲಿ ಮಂಗನ ಕಾಯಿಲೆ ಪತ್ತೆ: ಶಾಸಕ ಭೀಮಣ್ಣ ನಾಯ್ಕ ತುರ್ತು ಸಭೆ: ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಸೂಚನೆ

ಸಿದ್ದಾಪುರ: ತಾಲೂಕಿನ ಮೂವರಿಗೆ ಮಂಗನ ಕಾಯಿಲೆ ಪತ್ತೆಯಾದ ಹಿನ್ನೆಲೆಯಲ್ಲಿ ಶಾಸಕ ಭೀಮಣ್ಣ ನಾಯ್ಕ ತುರ್ತು ಸಭೆ ನಡೆಸಿ ಗಂಭೀರವಾಗಿ ಪರಿಗಣಿಸಿ ರೋಗ ಉಲ್ಬಣಗೊಳದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಾಲೂಕಾ ಆಡಳಿತ ಸೌಧದಲ್ಲಿ ಆರೋಗ್ಯ ಇಲಾಖೆ ಹಾಗೂ ಸಂಬoಧಪಟ್ಟ ನೊಡೆಲ್ ಅಧಿಕಾರಿಗಳ ಸಭೆ ನಡೆಸಿ ಮಂಗನ ಕಾಯಿಲೆ ಕುರಿತು ಗ್ರಾಮೀಣ ಭಾಗದ ಜನರಿಗೆ ಸಂಪೂರ್ಣ ಅರಿವು ಮೂಡಿಸಿ, ಅರಣ್ಯ ಇಲಾಖೆ ಸಿಬ್ಬಂದಿ, ಗ್ರಾಮ ಪಂಚಾಯ್ತಿ ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿ ಕಾಡಿಗೆ ಹೋಗುವಾಗ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಬೇಕು. ಅಲಲ್ಲಿ ಶಿಬಿರ ನಡೆಸಿ ಸರಿಯಾದ ಸಲಹೆ ನೀಡಬೇಕು.

ಶಾಲೆಗೆ ಹೋಗುವ ಮಕ್ಕಳಿಗೂ ಕೂಡ ಸುರಕ್ಷತಾ ಕ್ರಮದೊಂದಿಗೆ ಹೋಗುವಂತೆ ತಿಳಿಸಬೇಕು. ಬೇಸಿಗೆ ಅಂತ್ಯದವರೆಗೆ ಸಂಬAoಧಿಸಿದ ಅಧಿಕಾರಿಗಳು ರಜೆ ಮೇಲೆ ತೆರಳದಂತೆ ನೋಡಿಕೊಳ್ಳಿ. ಆರೋಗ್ಯ ಇಲಾಖೆಯ ವೈದ್ಯರು ಹಾಗೂ ಸಿಬ್ಬಂದಿಗಳು ಎರಡು ತಂಡವಾಗಿ ಗ್ರಾಮೀಣ ಭಾಗಕ್ಕೆ ತೆರಳಿ ಜಾಗೃತಿ ಶಿಬಿರ ನಡೆಸಿ ಅರಿವು ಮೂಡಿಸಬೇಕು ಎಂದ ಅವರು, ರೋಗಿಗಳ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಸರ್ಕಾರದಿಂದ ಭರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ನೀರಜ್ ಬಿ.ವಿ. ಮಾತನಾಡಿ, ಮಂಗನ ಕಾಯಿಲೆಯನ್ನು ಜಿಲ್ಲಾ ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ಕಾಯಿಲೆ ಪತ್ತೆಯಾದ ಸ್ಥಳಕ್ಕೆ ತೆರಳಿ ಜನರಿಗೆ ಅರಿವು ಮೂಡಿಸಲಾಗಿದೆ. ತಾಲೂಕಾ ಆರೋಗ್ಯಾಧಿಕಾರಿ ಹಾಗೂ ಸಿಬ್ಬಂದಿಗಳ ತಂಡ ಜಾಗೃತಿ ಶಿಬಿರ ನಡೆಸಿ ರೋಗದ ಲಕ್ಷಣ ಹಾಗೂ ಸುರಕ್ಷತಾ ಕ್ರಮಗಳ ಕುರಿತು ಮಾಹಿತಿ ನೀಡಲಿದೆ ಎಂದರು.

ತಾಲೂಕಾ ಆರೋಗ್ಯಾಧಿಕಾರಿ ಲಕ್ಷ್ಮೀಕಾಂತ ನಾಯ್ಕ ಮಾಹಿತಿ ನೀಡಿ, ಸಿದ್ದಾಪುರ ತಾಲೂಕಿನಲ್ಲಿ 2019 ರಿಂದ ಮಂಗನ ಕಾಯಿಲೆ ಪ್ರಾರಂಭವಾಗಿದೆ. ಕಳೆದ ವರ್ಷ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಈ ಬಾರಿ ಮೂರು ಕೇಸ್ ಪತ್ತೆಯಾಗಿವೆ. ಲಸಿಕೆ ಪಡೆಯದಿರುವ ಜನರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಮಂಗ ಸತ್ತರೆ ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. 34 ಜನರ ಸ್ಯಾಂಪಲ್ ತೆಗೆದಿದ್ದು, ಮೂರು ಜನರಿಗೆ ಕೆ.ಎಫ್.ಡಿ ದೃಢಪಟ್ಟಿದೆ. ಎಲ್ಲರೂ ಆರೋಗ್ಯವಾಗಿದ್ದಾರೆ ಎಂದರು.

ವಿಸ್ಮಯ ನ್ಯೂಸ್, ಸಿದ್ದಾಪುರ

Exit mobile version