Important
Trending

ಅಕ್ರಮ ಮರಳು ದಂಧೆಕೋರರಿಗೆ ಬಿಸಿ ಮುಟ್ಟಿಸಿದ ಅಧಿಕಾರಿಗಳು : 861 ಮೆಟ್ರಿಕ್ ಅಕ್ರಮ ಮರಳು ವಶ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಇತಿಹಾಸದಲ್ಲಿಯೇ ಮೊದಲು ಎಂಬoತೆ ಒಂದೇ ರಾತ್ರಿಯಲ್ಲಿ ನಡೆದ ಅತಿ ದೊಡ್ಡ ದಾಳಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳಿಂದ 861 ಮೆಟ್ರಿಕ್ ಅಕ್ರಮ ಮರಳನ್ನು ವಶಪಡಿಸಿಕೊಳ್ಳಲಾಗಿದೆ. ಹೌದೂ.. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನಿ ಅಧಿಕಾರಿಗಳು ರಾತ್ರಿಯ ವೇಳೆ ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ದಾಳಿ ನಡೆಸಿ 861 ಮೆಟ್ರಿಕ್ ಟನ್ ಅಕ್ರಮ ಮರಳು ವಶಪಡಿಸಿಕೊಂಡಿದ್ದು, ಇದು ಉತ್ತರ ಕನ್ನಡ ಜಿಲ್ಲೆಯ ಇತಿಹಾಸದಲ್ಲಿಯೇ ಒಂದೇ ದಿನ ನಡೆದ ಅತಿ ದೊಡ್ಡ ದಾಳಿ ಎಂದು ಭಾವಿಸಲಾಗಿದೆ. ಅದೂ ಕೂಡ ಮಹಿಳಾ ಅಧಿಕಾರಿ ತಡ ರಾತ್ರಿ ಈ ಕಾರ್ಯಾಚರಣೆ ನಡೆಸಿರುವುದು ವಿಶೇಷವಾಗಿದೆ.

ನಡುರಾತ್ರಿಯಲ್ಲಿ ಮಹಿಳಾ ಅಧಿಕಾರಿಯಿಂದ ನಡೆದ ದಿಟ್ಟ ಕಾರ್ಯಾಚರಣೆ ಸಾರ್ವಜನಿಕರ ವ್ಯಾಪಕ ಪ್ರಶಂಸೆಗೆ ಕಾರಣವಾದರೆ, ಅಕ್ರಮ ಮರಳಿನ ದಂಧೇಕೋರರ ಮೇಲೆ ಸತತ ದಾಳಿ ನಡೆಸುತ್ತಿರುವ ಈ ಮಹಿಳಾ ಅಧಿಕಾರಿಯ ವರ್ಗಾವಣೆಗೆ ಪ್ರಯತ್ನಿಸುತ್ತಿರುವವರ ಹಿನ್ನೆಡೆಗೆ ಕಾರಣವಾಗಿದೆ.

ಸದ್ಯ ಮಾರ್ಕೆಟ್‌ನಲ್ಲಿ ಒಂದು ಟಿಪ್ಪರ್ ಮರಳು ಕಾಳಸಂತೆಯಲ್ಲಿ 27 ಸಾವಿರ ರೂಗಳಿಗೆ ಮಾರಾಟವಾಗುತ್ತಿದೆ. ಗಣಿ ಮತ್ತು ಭೂ ವಿಜ್ಞಾನಿಗಳು ವಶಪಡಿಸಿಕೊಂಡ 861 ಮೆಟ್ರಿಕ್ ಟನ್ ಮರಳು 86 ಟಿಪ್ಪರ್ ಲೋಡ್‌ಗಳಷ್ಟಿದ್ದು, ಅಕ್ರಮ ದಂಧೇಕೋರರು ಈ ಮರಳನ್ನು ಮಾರಾಟ ಮಾಡಿದ್ದರೆ 23.24 ಲಕ್ಷ ರು ಲಾಭ ಗಳಿಸುತ್ತಿದ್ದರು ಎಂದು ಅಂದಾಜಿಸಲಾಗಿದೆ.

ಸರಕಾರಿ ದರದಲ್ಲಿ ಈ ಮರಳನ್ನು ಲೋಕೋಪಯೋಗಿ ಇಲಾಖೆಯವರಿಗೆ ನೀಡಿದರೂ ಸುಮಾರು 10 ಲಕ್ಷ ರು ಆದಾಯ ಸರಕಾರಕ್ಕೆ ಬರಲಿದೆ. ಕುಮಟಾದಲ್ಲಿ ರಾತ್ರಿ ವಾಟ್ಸಾಪ್ ದೂರು ಆಧರಿಸಿ ದಾಳಿ ನಡೆಸಿದ ಮಹಿಳಾ ಅಧಿಕಾರಿ ಆಶಾ ಅವರು ಕುಮಟಾದ ಮಿರ್ಜಾನ್ ತಾರಿಬಾಗಿಲಿನ ಬಳಿ ಅಕ್ರಮವಾಗಿ ಸಂಗ್ರಹಿಸಿಟ್ಟ 180 ಮೆಟ್ರಿಕ್ ಟನ್ ಮರಳು ವಶಪಡಿಸಿಕೊಂಡಿದ್ದಾರೆ. ಅದೇ ರೀತಿ ಕುಮಟಾದಲ್ಲಿ ದಾಳಿ ಮುಗಿಸಿ ಮರಳಿ ಬರುವ ಸಂದರ್ಭದಲ್ಲಿ ರಾತ್ರಿ ವೇಳೆ ಬಂದ ಇನ್ನೊಂದು ದೂರವಾಣಿ ಕರೆ ಅನುಸರಿಸಿ ಹೊನ್ನಾವರ ಬಳಕೂರು ಬಳಿ ಅಕ್ರಮವಾಗಿ ಸಂಗ್ರಹಿಸಿಟ್ಟ 681 ಮೆಟ್ರಿಕ್ಟನ್ ಮರಳನ್ನು ವಶಪಡಿಸಿಕೊಂಡಿದ್ದಾರೆ.

ಬ್ಯರೋ ರಿಪೋರ್ಟ್, ವಿಸ್ಮಯ ನ್ಯೂಸ್.

Back to top button