Important
Trending

ಕೋವಿಡ್ ಮುಗಿದರೂ ಓಡಾಡದ ರೈಲು: ದಾಂಡೇಲಿಗೆ ಪುನಃ ರೈಲು ಬಿಡಲು ಒತ್ತಾಯ:ನಾಲ್ಕು ವರ್ಷದಿಂದ ಪ್ರಯಾಣಿಕರ ಒದ್ದಾಟ

ದಾಂಡೇಲಿ: ಪ್ರವಾಸೋದ್ಯಮದ ಮೂಲಕ ಇಡೀ ದೇಶದ ಗಮನ ಸೆಳೆದಿರುವ ಉತ್ತರಕನ್ನಡ ಜಿಲ್ಲೆಯ ದಾಂಡೇಲಿಗೆ ಕಳೆದ ನಾಲ್ಕು ವರ್ಷದ ಹಿಂದೆ ರೈಲ್ವೆ ಸಂಪರ್ಕವನ್ನು ಮಾಡಲಾಗಿತ್ತು. ಪ್ರತಿನಿತ್ಯ ಓಡಾಡುತ್ತಿದ್ದ ರೈಲನ್ನು ಲಾಕ್ ಡೌನ್ ಆದ ನಂತರ ಬಂದ್ ಮಾಡಲಾಗಿತ್ತು. ಆದರೆ ಕೊರೋನಾ ಮುಗಿದು ಜನಜೀವನ ಎಂದಿನoತೆ ಆದ ನಂತರವೂ ರೈಲ್ವೆ ಮಾತ್ರ ಮತ್ತೆ ಪ್ರಾರಂಭವಾಗದೇ ಜನರು ಪರದಾಡುವಂತಾಗಿದ್ದು ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ದಾಂಡೇಲಿ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಪ್ರದೇಶ. ಕಾಳಿ ನದಿಯ ದಡದಲ್ಲಿರುವ ದಾಂಡೇಲಿಯಲ್ಲಿ ಪ್ರವಾಸೋದ್ಯಮ ದೊಡ್ಡ ಮಟ್ಟದಲ್ಲಿಯೇ ಬೆಳೆದಿದ್ದು ದೇಶವಿದೇಶದ ಪ್ರವಾಸಿಗರು ದಾಂಡೇಲಿಯ ಪ್ರಕೃತಿ ಸವಿಯಲು ಆಗಮಿಸುತ್ತಾರೆ. ಇನ್ನು ಧಾರವಾಡ ಮಾರ್ಗದಿಂದ ದಾಂಡೇಲಿಗೆ ಆಗಮಿಸುವ ಪ್ರವಾಸಿಗರಿಗೆ ಹಾಗೂ ಕೆಲಸದ ನಿಮಿತ್ತ ಬೆಂಗಳೂರು ಸೇರಿದಂತೆ ವಿವಿಧೆಡೆ ಸಂಚರಿಸುವ ದಾಂಡೇಲಿ ಭಾಗದ ಸಾರ್ವಜನಿಕರಿಗೆ ಉಪಯೋಗ ಆಗುವ ನಿಟ್ಟಿನಲ್ಲಿ 2019ರಲ್ಲಿ ದಾಂಡೇಲಿಯ ಅಂಬೇವಾಡಿಯ ವರೆಗೆ ರೈಲು ಸಂಚಾರವನ್ನ ಪ್ರಾರಂಭ ಮಾಡಲಾಗಿತ್ತು.

ಅಂದಿನ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ಸುರೇಶ್ ಅಂಗಡಿ ಧಾರವಾಡದ ಅಳ್ನಾವರದಿಂದ ದಾಂಡೇಲಿಯ ಅಂಬೇವಾಡಿಯ ವರೆಗೆ ರೈಲ್ವೆ ಮಾರ್ಗಕ್ಕೆ ಚಾಲನೆ ನೀಡಿದ್ದರು. ಆದರೆ ಕೇವಲ ಎರಡೇ ತಿಂಗಳು ಸಂಚಾರ ಮಾಡಿದ ರೈಲು ಮತ್ತೆ ನಿಂತು ಹೋಗಿದ್ದು ಈವರೆಗೂ ಪ್ರಾರಂಭವಾಗಿಲ್ಲ. ನಮಗೆ ಧಾರವಾಡದವರೆ ರೈಲು ಪುನಃ ಪ್ರಾರಂಭಿಸುವುದರ ಜೊತೆಗೆ ಬೆಂಗಳೂರು ರೈಲನ್ನು ದಾಂಡೇಲಿವರೆಗೂ ವಿಸ್ತರಣೆ ಮಾಡಬೇಕು ಎಂದು ಸ್ಥಳೀಯರಾದ ಅಕ್ರಮ್ ಖಾನ್ ಆಗ್ರಹಿಸಿದ್ದಾರೆ.

ಇನ್ನು ಜಿಲ್ಲೆಯಲ್ಲಿ ಸ್ವತಂತ್ರ ಪೂರ್ವದಲ್ಲಿಯೇ ದಾಂಡೇಲಿಗೆ ರೈಲ್ವೆ ಸಂಪರ್ಕವಿತ್ತು. ಆದರೆ ಈಗ ದಾಂಡೇಲಿಗೆ ರೈಲ್ವೆ ಸಂಪರ್ಕವೇ ಇಲ್ಲದಂತಾಗಿದೆ. ಹಲವಾರು ವರ್ಷದ ಹೋರಾಟ ಪರಿಣಾಮ ದಾಂಡೇಲಿಗೆ ಮತ್ತೆ ರೈಲ್ವೆ ಸಂಪರ್ಕ ಮಾಡಿದ್ದರು ನಂತರ ಕೋವಿಡ್ ಬಂದ ಕಾರಣ ರೈಲ್ವೆ ಸಂಪರ್ಕ ಬಂದ್ ಮಾಡಲಾಗಿತ್ತು. ಇದಾದ ನಂತರ ಹಲವು ಬಾರಿ ರೈಲ್ವೆಯನ್ನ ಮತ್ತೆ ಪ್ರಾರಂಭ ಮಾಡುವಂತೆ ಒತ್ತಾಯ ಮಾಡಿದರು ಯಾರು ಸ್ಪಂಧನೆ ಮಾಡುತ್ತಿಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯ. ಇನ್ನು ದಾಂಡೇಲಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದು ಪ್ರವಾಸಿಗರ ಅನುಕೂಲಕ್ಕಾದರು ಬೆಂಗಳೂರಿನಿoದ ದಾಂಡೇಲಿ ವರೆಗೆ ರೈಲ್ವೆ ಸಂಪರ್ಕ ಪ್ರಾರಂಭ ಮಾಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.

ವಿಸ್ಮಯ ನ್ಯೂಸ್, ಕಾರವಾರ

Back to top button