ಜೆಸಿಬಿ ಕೆಲಸದ ವೇಳೆ ನಾಗರಹಾವಿಗೆ ಗಾಯ: ಹೊಲಿಗೆ ಹಾಕಿ ಜೀವ ಉಳಿಸುವ ಪ್ರಯತ್ನ: ಕಾರ್ಯಾಚರಣೆ ನೋಡಿ

ಅಂಕೋಲಾ: ಕುರಿ , ನಾಯಿ, ಪಶು ಪಕ್ಷಿಗಳಿಗೆ ಪಶುವೈದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮತ್ತು ಶುಶ್ರೂಷೆ ನೀಡುವುದು ಸಾಮಾನ್ಯ. ಆದರೆ ಬಲು ಅಪರೂಪ ಎಂಬಂತೆ ಈ ಪಶು ವೈದ್ಯ ಆಸ್ಪತ್ರೆಯಲ್ಲಿ ಜೆಸಿಬಿ ಯಂತ್ರದಿಂದ ಗಾಯಗೊಂಡಿದ್ದ ದೊಡ್ಡ ಗಾತ್ರದ ನಾಗರ ಹಾವಿಗೂ ಹೊಲಿಗೆ ಹಾಕಿ, ಊರಗ ಸಂರಕ್ಷನ ಮಾರ್ಗದರ್ಶನದಲ್ಲಿ ಹಾವಿನ ಜೀವ ಉಳಿಸುವ ಪ್ರಯತ್ನ ಮಾಡಲಾಗಿದೆ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಪಶು ವೈದ್ಯ ಆಸ್ಪತ್ರೆಯಲ್ಲಿ ಕೋಳಿ, ಕುರಿ, ನಾಯಿ, ಆಕಳು, ಎಮ್ಮೆ ಮತ್ತಿತರ ಸಾಕು ಪ್ರಾಣಿಗಳು ಮತ್ತು ಸಂದರ್ಭಕ್ಕನುಗುಣವಾಗಿ ನಾಡಿನ ಹಾಗೂ ಕಾಡಿನ ಬೇರೆ ಬೇರೆ ಪಶು ಪಕ್ಷಿಗಳಿಗೆ ಚಿಕಿತ್ಸೆ ಮತ್ತು ಶುಶ್ರೂಷೆ ನೀಡಲಾಗುತ್ತಿದೆ.

ಇಲ್ಲೊಂದು ಬಲು ಅಪರೂಪದ ಘಟನೆ ಎಂಬಂತೆ, ಅಂಕೋಲಾ ಪಟ್ಟಣ ವ್ಯಾಪ್ತಿಯ ಪಶು ವೈದ್ಯ ಆಸ್ಪತ್ರೆಯಲ್ಲಿ ಉರಗ ಸಂರಕ್ಷಕ ರೋರ್ವರ ಕೋರಿಕೆ, ಸಹಕಾರ ಮತ್ತು ಮಾರ್ಗದರ್ಶನ ನದ ಮೇರೆಗೆ ನಾಗರ ಹಾವಿಗೂ ಚಿಕಿತ್ಸೆ ನೀಡಿ ತಮ್ಮ ಸೇವಾ ಮನೋಭಾವನೆ ಮೂಲಕ ವೈದ್ಯರು ಮತ್ತು ಸಿಬ್ಬಂದಿಗಳು ಇತರರಿಗೂ ಮಾದರಿ ಆಗಿದ್ದಾರೆ.

ತಾಲೂಕಿನ ಗ್ರಾಮೀಣ ಪ್ರದೇಶ ಒಂದರ ಖಾಸಗಿ ಜಮೀನಿನಲ್ಲಿ ಜೆಸಿಬಿ ಯಂತ್ರ ಬಳಸಿ ಕೆಲಸ ಮಾಡುತ್ತಿದ್ದ ವೇಳೆ, ಆಕಸ್ಮಿಕವಾಗಿ ಅಲ್ಲಿಯೇ ಇದ್ದ ನಾಗರ ಹಾವೊಂದು ಗಾಯಗೊಂಡಿದೆ. ಅದನ್ನು ಗಮನಿಸಿದ ಸ್ಥಳೀಯರು ಉರಗ ಸಂರಕ್ಷಕ ಅವರ್ನಾದ ಮಹೇಶ ನಾಯ್ಕ ಅವರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಮಹೇಶ ನಾಯ್ಕ, ಗಾಯಗೊಂಡು ನಿತ್ರಾಣವಾಗಿದ್ದ ಹಾವಿಗೆ ಸ್ಥಳೀಯರ ಸಹಕಾರದಲ್ಲಿ ನೀರು ಕುಡಿಸಿ, ಲಘು ಉಪಚಾರ ನೀಡಿದ್ದಾರೆ.

ನಂತರ ತಾವು ತಂದ ಚೀಲದಲ್ಲಿ ಹಾವನ್ನು ಸುರಕ್ಷಿತವಾಗಿ ಹಾಕಿಕೊಂಡು ತಮ್ಮ ಜೊತೆ ತೆಗೆದುಕೊಂಡು ಹೋಗಿದ್ದಾರೆ.ಆ ಬಳಿಕ ಅದನ್ನು ಅಂಕೋಲಾ ಪಶುವೈದ್ಯ ಆಸ್ಪತ್ರೆಗೆ ಒಯ್ದು, ಟೇಬಲ್ ಮೇಲಿಟ್ಟು, ಚೀಲ ಬಿಡಿಸಿ ಹಾವು ಹೊರ ಬರುವಂತೆ ಮಾಡಿದ್ದಾರೆ. ನಂತರ, ಪ್ಲಾಸ್ಟಿಕ ಪೈಪ್ ನಲ್ಲಿ ಹಾವು ನಿಧಾನವಾಗಿ ಮುಖ ತೂರಿಸಿ ಮುಂದೆ ಹೋಗುವಂತೆ ಮಾಡಿ, ಸ್ಥಳೀಯ ಸಿಬ್ಬಂದಿಗಳ ಜೊತೆ ತಾವೂ ಕೈ ಜೋಡಿಸಿ, ವೈದ್ಯರು ಹಾವಿನ ಗಾಯವಾದ ಭಾಗ ಶುಚಿ ಗೊಳಿಸಿ, ಹೊಲಿಗೆ ಹಾಕಿ, ಮುಲಾಂ ಲೇಪಿಸಲು ಸಹಕರಿಸಿದ್ದಾರೆ.

ಈ ಚಿಕಿತ್ಸಾ ಪ್ರಕ್ರಿಯೆಗೆ ಸುಮಾರು 20-30 ನಿಮಿಷ ಕಾಲಾವಧಿ ತೆಗೆದುಕೊಂಡಿದೆ. ಆದರೂ ವಿಷಕಾರಿ ನಾಗರ ಪ್ರತಿರೋಧ ತೋರದೇ, ತನ್ನ ಜೀವ ರಕ್ಷಣೆಯ ಉದ್ದೇಶಕ್ಕೆ ಇವರು ಹೀಗೆ ಮಾಡುತ್ತಿದ್ದಾರೆ ಎಂಬುದು ಅರಿತೋ ಏನೋ ಎಂಬಂತೆ ಬುಸ್ ಎನ್ನದೇ, ಹೆಡೆ ಎತ್ತದೇ, ತೆವಳದೇ ತಾನು ಸಹ ಚಿಕಿತ್ಸೆಗೆ ಒಗ್ಗಿ ಕೊಂಡಂತಿದೆ.

ಪಶುವೈದ್ಯ ಆಸ್ಪತ್ರೆಯಲ್ಲಿ ಕಂಡು ಬಂದ ಬಲೂ ಅಪರೂಪದ ಘಟನೆಗೆ ಹಲವು ಸಾರ್ವಜನಿಕರು ಸಾಕ್ಷಿಯಾದರು. ಅಂಕೋಲಾ ಪಶುವೈದ್ಯ ಆಸ್ಪತ್ರೆಯಲ್ಲಿ ವೈದ್ಯರ ಮತ್ತು ಸಿಬ್ಬಂದಿಗಳ ಕೊರತೆಯ ನಡುವೆಯೂ ಈ ಹಿಂದಿನಿಂದಲೂ ಉತ್ತಮ ಸೇವಾ ಕಾರ್ಯ ಕೈಗೊಳ್ಳುತ್ತಾ ಬರಲಾಗಿದ್ದು,ಅವರ ಈ ಸೇವಾ ಕಾರ್ಯಕ್ಕೆ ಈಗಾಗಲೇ ಸ್ಥಳೀಯ ಹಲವು ರೈತರು ಮತ್ತು ಶಾಸಕ ಸತೀಶ್ ಸೈಲ್,ಸಾಮಾಜಿಕ ಕಾರ್ಯಕರ್ತ ಸುರೇಶ ನಾಯಕ ಅಲಗೇರಿ ಮತ್ತಿತರರು ಪ್ರಶಂಸೆ ವ್ಯಕ್ತಪಡಿಸಿದ್ದನ್ನು ಸ್ಮರಿಸಬಹುದಾಗಿದೆ.

ಅಂತೆಯೇ ಈ ರೈತ ಮಿತ್ರ ಹಾಗೂ ಹಲವರ ಪಾಲಿಗೆ ಪೂಜನೀಯ ಭಾವನೆ ಮತ್ತು ನಂಬಿಕೆ ಉಳ್ಳ ನಾಗರ ಹಾವಿಗೂ ಚಿಕಿತ್ಸೆ ನೀಡಿಸಲು ಮುಂದಾಗಿ,ಎಲ್ಲಾ ಜೀವಿಗಳಿಗೂ ಜೀವಿಸುವ ಹಕ್ಕಿದೆ ಎಂಬ ಸಂದೇಶ ಸಾರಿದ ಉರಗ ಸಂರಕ್ಷಕ ಅವರ್ಸಾದ ಮಹೇಶ್ ನಾಯ್ಕ,ಹಾವು ಗಾಯಗೊಂಡ ಘಟನೆ ಮತ್ತು ಅದಕ್ಕೆ ಈಗ ನಡೆಯುತ್ತಿರುವ ಚಿಕಿತ್ಸೆ ಮತ್ತು ಅರಣ್ಯ ಇಲಾಖೆ ಮಾರ್ಗದರ್ಶನದಲ್ಲಿ ಹಾವಿನ ಜೀವ ರಕ್ಷಣೆಗಾಗಿ ಮುಂದಿನ ಕಾರ್ಯಯೋಜನೆಗಳ ಬಗ್ಗೆ ವಿವರಿಸಿದರು. ಒಟ್ಟಿನಲ್ಲಿ ಅಂಕೋಲಾ ಪಶುವೈದ್ಯ ಆಸ್ಪತ್ರೆಯ ಶ್ರೀನಿವಾಸ್ ಪಾಟೀಲ್, ರಾಘವ, ಅವಿನಾಶ, ಶ್ಯಾಮ ಮತ್ತಿತರರ ಸೇವೆ ಹಾಗೂ ಉರಗ ಸಂರಕ್ಷಕ ಮಹೇಶ ನಾಯ್ಕರ ವಿಶೇಷ ಪ್ರಯತ್ನ ಮತ್ತು ಸಹಕಾರಕ್ಕೆ ತಾಲೂಕಿನ ಪ್ರಜ್ಞಾವಂತ ಜನತೆ ಮೆಚ್ಚುಗೆ ಸೂಚಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version