Important
Trending

ಮಂಗನಕಾಯಿಲೆಗೆ ಮತ್ತಿಬ್ಬರು ಬಲಿ: ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆ

ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನಲ್ಲಿ ಮಂಗನ ಕಾಯಿಲೆಗೆ ಮತ್ತಿಬ್ಬರು ಬಲಿಯಾಗಿದ್ದು, ಈ ಮೂಲಕ ಮಂಗನ ಕಾಯಿಲೆಯಿಂದ ಮೃತಪಟ್ಟವರ ಸಂಖ್ಯೆ 4 ಕ್ಕೆ ಏರಿಕೆಯಾಗಿದೆ. ಕೆ.ಎಫ್.ಡಿ.ಯ ಹಾಟ್ ಸ್ಪಾಟ್ ಆಗಿರುವ ಸಿದ್ದಾಪುರ ತಾಲೂಕಿನಲ್ಲಿ ಮಂಗನ ಕಾಯಿಲೆಯಿಂದ ಸೋಮವಾರ ಇಬ್ಬರು ಸಾವಿಗೀಡಾಗಿದ್ದಾರೆ. ತಾಲೂಕಿನ ಕೋರ್ಲಕೈ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಕಲ್ಲೂರಿನ 65 ವರ್ಷ ಪ್ರಾಯದ ವ್ಯಕ್ತಿ ಹಾಗೂ ಹೆಗ್ಗೆಕೊಪ್ಪದ 80 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ.

ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಕಳೆದ ಎರಡು ವಾರದೊಳಗೆ ಮಂಗನ ಕಾಯಿಲೆಗೆ ನಾಲ್ವರು ಬಲಿಯಾದಂತಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿ ಮುಂಜಾಗೃತಾ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕಳೆದ 4-5 ವರ್ಷಗಳಿಂದ ಸಿದ್ದಾಪುರ ತಾಲೂಕು ಮಂಗನ ಕಾಯಿಲೆಯ ತಾಣವಾಗಿ ಪರಿವರ್ತನೆಯಾಗಿದೆ. ಕಾಯಿಲೆಗೆ ತುತ್ತಾದವರು ಹಾಗೂ ಶಂಕಿತರ ರಕ್ತದ ಮಾದರಿ ತೆಗೆದು ಪರೀಕ್ಷೆ ನಡೆಸಲು ಸಿದ್ಧಾಪುರ ಹಾಗೂ ಶಿರಸಿಯಲ್ಲಿ ಪ್ರಯೋಗಾಲಯ ಇಲ್ಲದೇ ಇರುವದರಿಂದ ದೂರದೂರಿಗೆ ಕಳುಹಿಸಿ ಅಲ್ಲಿಂದ ವರದಿ ಬರುವುದು ಐದಾರು ದಿನ ವಿಳಂಬವಾಗುತ್ತಿದೆ. ಕೆಲವೊಮ್ಮೆ ವರದಿ ಬರುವದರೊಳಗೆ ರೋಗಿ ಸಾವಿನ ಮನೆ ಸೇರುತ್ತಿದ್ದಾರೆ. ತಕ್ಷಣ ವರದಿ ಕೈಸೇರಬೇಕಾದರೆ ಸಿದ್ದಾಪುರ ಅಥವಾ ಶಿರಸಿಯಲ್ಲಿ ಲ್ಯಾಬ್ ಪ್ರಾರಂಭಿಸುವoತೆ ಸಾರ್ವಜನಿಕರಿಂದ ಒತ್ತಡ ಕೇಳಿಬರುತ್ತಿದೆ.

ಬ್ಯುರೋ ರಿಪೋರ್ಟ್, ವಿಸ್ಮಯ ನ್ಯೂಸ್

Back to top button