ಅಂಕೋಲಾ: ರಾಷ್ಟ್ರೀಯ ಭದ್ರತೆಗೆ ಮಾರಕವಾದ ಭಯೋತ್ಪಾದಕ ಸಂಘಟನೆಯ ಜಾಲ ಜಿಲ್ಲೆಯಲ್ಲೂ ಬೇರೂರುತ್ತಿದೆಯೇ ಎಂಬ ಅನುಮಾನ ಕಾಡಲಾರಂಭಿಸಿದೆ. ಉಗ್ರ ಸಂಘಟನೆ ಲಷ್ಕರ್ -ಎ-ತೊಯ್ಬಾಗೆ ಸೇರಲು ಬೆಂಗಳೂರಿನ ಜೈಲಿನಲ್ಲಿ ಇರುವ ಖೈದಿಗಳಿಗೆ ಪ್ರಚೋದನೆ ನೀಡುತ್ತಿರುವ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು, ಪಕ್ಕದ ಜಿಲ್ಲೆಯ ಬಳಿಕ ಅಂಕೋಲಾಕ್ಕೂ ಆಗಮಿಸಿ ವಿಚಾರಣೆ ನಡೆಸಿರುವುದಾಗಿ ಸುದ್ದಿ ಅಲ್ಲಲ್ಲಿ ಕೇಳಿ ಬರಲಾರಂಭಿಸಿದೆ.
ತಾಲೂಕಿಗೆ ಆಗಮಿಸಿದ್ದರು ಎನ್ನಲಾದ ಎನ್.ಐ.ಎ ಅಧಿಕಾರಿಗಳು ಓರ್ವನ ಕುರಿತಂತೆ ಹುಡುಕಾಟ ನಡೆಸಿ ಕೆಲ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ ಎನ್ನಲಾಗುತ್ತಿದೆ. ಉಗ್ರ ಸಂಘಟನೆಯನ್ನು ಬಲಪಡಿಸುವ ಕುಕೃತ್ಯಗಳು ದೇಶದಲ್ಲಿ ನಡೆಯುತ್ತಿರುವ ಕುರಿತು ಮಾಹಿತಿ ಮೇರೆಗೆ ದೇಶದ ವಿವಿಧ ಭಾಗಗಳಲ್ಲಿ ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ದಾಳಿ ನಡೆಸಿ ವಿಚಾರಣೆ ನಡೆಸುತ್ತಿದ್ದು ರಾಜ್ಯದಲ್ಲಿಯೂ ಕೆಲವರನ್ನು ವಶಕ್ಕೆ ಪಡೆದು ಮಹತ್ವಪೂರ್ಣ ದಾಖಲೆಗಳನ್ನು ಸಂಗ್ರಹಿಸುತ್ತಿದ್ದು ರಾಜ್ಯ ರಾಜಧಾನಿ ಬೆಂಗಳೂರು, ಕರಾವಳಿ ಜಿಲ್ಲೆ ಮಂಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಇರುವ ವ್ಯಕ್ತಿಗಳ ಶೋಧಕಾರ್ಯ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಜೈಲಿನಲ್ಲಿ ಇರುವ ಖೈದಿಗಳಲ್ಲಿ ಉಗ್ರವಾದದ ಮನೋಭಾವನೆ ಬೆಳೆಸಿ ಆತ್ಮಾಹುತಿ ದಾಳಿಯಂತ ಕುಕೃತ್ಯಗಳಿಗೆ ಇಳಿಸುವುದು, ಶಸ್ತ್ರಾಸ್ತ್ರಗಳ ಪೂರೈಕೆ ಮೊದಲಾದ ದೇಶದ್ರೋಹಿ ಹಾಗೂ ವಿಧ್ವಂಸಕ ಕೃತ್ಯ ಎಸಗಲು ಪಿತೂರಿ ನಡೆಸಲಾಗುತ್ತಿರುವ ಕುರಿತು ಮಾಹಿತಿ ದೊರಕಿದೆ ಎನ್ನಲಾಗಿದೆ. ಈ ಹಿಂದೆ ರಾಜ್ಯದ ಸಿಸಿಬಿ ಪೊಲೀಸರು ಒರ್ವ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿ ಪ್ರಕರಣವನ್ನು ಎನ್. ಐ.ಎ ಗೆ ಹಸ್ತಾಂತರಿಸಿದ್ದಾರೆ ಎಂದು ತಿಳಿದು ಬಂದಿದ್ದು ತನಿಖೆಯ ಜಾಡು ಹಿಡಿದು ಅಂಕೋಲಾಕ್ಕೆ ಆಗಮಿಸಿದ ಎನ್. ಐ.ಎ ತಂಡ ,ಪ್ರಕರಣದಲ್ಲಿ ಶಾಮೀಲಾತಿ ಇದ್ದಾನೆ ಎನ್ನಲಾದ ಸ್ಥಳೀಯ ಮತ್ತು ಇತರರ ವಿಚಾರಣೆ ನಡೆಸುತ್ತಿರುವುದಾಗಿ ಹೇಳಲಾಗುತ್ತಿದ್ದು, ಈ ಕುರಿತು ಅಧಿಕೃತ ಮತ್ತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
.ಈ ಹಿಂದೆ ಬೇರೆ ಬೇರೆ ಪ್ರಕರಣಗಳಲ್ಲಿ ಜಿಲ್ಲೆಯ ಭಟ್ಕಳ ಶಿರಸಿ ಮತ್ತಿತರೆಡೆ ಐಎನ್ಎ ದಾಳಿ ಸುದ್ದಿ ಕೇಳಿ ಬಂದಿತ್ತು ಅಂತೆಯೇ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಸೆಟಲೈಟ್ ಫೋನ್ ರಿಂಗಣದ ಸುದ್ದಿ ಸದ್ದು ಮಾಡಿತ್ತು. ಅಲ್ಲದೇ ಜಿಲ್ಲೆಯ ಕಾರವಾರ ಅಂಕೋಲಾ ಭಾಗದಲ್ಲಿ ಅಣುಸ್ಥಾವರ,ನೌಕಾ ನೆಲೆ ,ವಿಮಾನ ನಿಲ್ದಾಣ,ಬಂದರು ಸೇರಿದಂತೆ ದೊಡ್ಡ ದೊಡ್ಡ ಯೋಜನೆಗಳು ನೆಲೆಗೊಳ್ಳುತ್ತಿದ್ದು ,ಭದ್ರತೆ ಮತ್ತು ಸುರಕ್ಷತೆ ದೃಷ್ಠಿಯಿಂದ ಇದು ಸೂಕ್ಷ್ಮ ಪ್ರದೇಶವಾಗಿದೆ.ಹಾಗಾಗಿ ದೇಶ ವಿದ್ರೋಹಿ ಸಂಘಟನೆಗಳು ಜಿಲ್ಲೆಯಲ್ಲಿ ಬೇರೂರಲು ಅಲ್ಲಲ್ಲಿ ತಮ್ಮ ಜಾಲ ವಿಸ್ತರಿಸಲು ಕಳ್ಳ ಸಂಚು ರೂಪಿಸಿದಂತಿದೆ ಎಂಬ ಮಾತು ಅಲ್ಲಲ್ಲಿ ಕೇಳಿ ಬಂದಂತಿದೆ
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ