ಮತ್ತೇರಿಸುವ ಮದ್ಯದಿಂದಲೇ ಈ ದೇವರಿಗೆ ಅಭಿಷೇಕ: ಬೀಡಿ-ಸಿಗರೇಟ್‌ನಿಂದಲೇ ಆರತಿ: ಖಾಪ್ರಿ ದೇವರ ವಿಶೇಷತೆ ನೋಡಿ

ಕಾರವಾರ: ಒಂದೆಡೆ ದೇವರಿಗೆ ಅರ್ಪಿಸಲು ಬಗೆ ಬಗೆಯ ಮದ್ಯವನ್ನ ಕೈಯಲ್ಲಿ ಹಿಡಿದು ನಿಂತಿರುವ ಭಕ್ತರು. ಇನ್ನೊಂದೆಡೆ ಥರ-ಥರಹದ ಬಾಟಲಿಯಲ್ಲಿ ತಂದoತಹ ಮತ್ತೇರಿಸುವ ಮದ್ಯವನ್ನ ದೇವರಿಗೆ ಅಭಿಷೇಕ ಮಾಡುತ್ತಿರುವ ಅರ್ಚಕರು. ಮತ್ತೊಂದೆಡೆ ದೇವಸ್ಥಾನ ಎದುರು ಕ್ಯಾಂಡಲ್‌ಗಳನ್ನ ದೇವರಿಗೆ ಬೆಳಗುತ್ತಿರುವ ಭಕ್ತರು. ಅರೇ ಇದೇನಪ್ಪಾ ಹೀಗೂ ದೇವರನ್ನ ಆರಾಧಿಸ್ತಾರಾ ಅಂತಾ ಆಶ್ಚರ್ಯ ಆಗ್ತಿದ್ಯಾ. ಹೌದು ಈ ದೃಶ್ಯಗಳ ಕಂಡು ಬಂದಿದ್ದು ಉತ್ತರಕನ್ನಡ ಜಿಲ್ಲೆಯ ಕಾರವಾರದ ಕೋಡಿಭಾಗದಲ್ಲಿ ನಡೆಯುವ ಖಾಪ್ರಿ ದೇವರ ಜಾತ್ರೆಯಲ್ಲಿ.

ಸಾಮಾನ್ಯವಾಗಿ ಜಾತ್ರೆಗಳಲ್ಲಿ ದೇವರಿಗೆ ಹಣ್ಣು ಹಂಪಲುಗಳನ್ನು ನೈವೇದ್ಯ ಮಾಡುತ್ತಾರೆ. ಇದಲ್ಲದೇ ಹಾಲಿನ ಅಭಿಷೇಕ, ಎಣ್ಣೆ, ಬೆಣ್ಣೆಯ ನೈವೇದ್ಯ ಸಹ ಮಾಡಲಾಗುತ್ತದೆ. ಆದರೆ ಈ ಖಾಪ್ರಿ ದೇವರ ಜಾತ್ರೆ ಮಾತ್ರ ಕೊಂಚ ವಿಭಿನ್ನವಾಗಿ ನಡೆಯುತ್ತೆ. ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಸಾವಿರಾರು ಭಕ್ತರು ಆಗಮಿಸಿ ಖಾಪ್ರಿ ದೇವರಿಗೆ ಪೂಜೆಯನ್ನ ಸಲ್ಲಿಸುತ್ತಾರೆ.

ಮತ್ತೇರಿಸುವ ಮದ್ಯದಿಂದಲೇ ಈ ದೇವರಿಗೆ ಅಭಿಷೇಕ : ಬೀಡಿ-ಸಿಗರೇಟ್‌ನಿಂದಲೇ ಆರತಿ :ಇಲ್ಲಿ ವಿಭಿನ್ನವಾಗಿ ನಡೆಯುತ್ತೆ ಪೂಜೆ

ಹರಕೆಯನ್ನ ಇಟ್ಟುಕೊಂಡು ಬಂದoತಹ ಭಕ್ತರು ಸಿಗರೇಟು, ಕ್ಯಾಂಡಲ್‌ನಿoದ ಆರತಿಯನ್ನ ಮಾಡೋದರ ಜೊತೆಗೆ ಮಧ್ಯದಿಂದಲೇ ದೇವರಿಗೆ ಅಭಿಷೇಕವನ್ನ ಸಹ ಮಾಡ್ತಾರೆ. ಇದಲ್ಲದೇ ದೇವರಿಗೆ ಕೋಳಿ ಬಲಿಯನ್ನ ಕೊಟ್ಟು ರಕ್ತದಿಂದ ಸಹ ನೈವೇದ್ಯ ಮಾಡಲಾಗುತ್ತದೆ. ಖಾಪ್ರಿ ದೇವರು ಶಕ್ತಿ ದೇವರು ಆಗಿರುವುದರಿಂದ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಈ ರೀತಿಯ ಹರಕೆಯನ್ನ ಮಾಡಲಾಗುತ್ತದೆ ಅಂತಾರೆ ಭಕ್ತರು…

ಇನ್ನು ತನ್ನದೇ ಆದ ಇತಿಹಾಸ ಹೊಂದಿರುವ ಖಾಪ್ರಿ ದೇವರು ಆಫ್ರಿಕಾ ಮೂಲದೆನ್ನಲಾಗುತ್ತದೆ. ಆಫ್ರಿಕಾ ಮೂಲದ ವ್ಯಕ್ತಿಯೊಬ್ಬ 300 ವರ್ಷಗಳ ಹಿಂದೆ ಇಲ್ಲಿಗೆ ಬಂದು ದೇವರನ್ನ ತಂದು ಪೂಜಿಸುತ್ತಿದ್ದನಂತೆ. ಆದಾದ ನಂತರ ಆತ ಕಣ್ಮರೆಯಾದ ನಂತರ ಇಲ್ಲಿನ ಪರಸಪ್ಪ ಮನೆತನದವರು ಇದೇ ಜಾಗದಲ್ಲಿ ಕೆಲಸ ಮಾಡುವಾಗ ದೇವರ ಕಲ್ಲು ಗೋಚರವಾಗಿತ್ತಂತೆ. ನಂತರ ಕನಸ್ಸಿನಲ್ಲೂ ದೇವರು ಬಂದು ತನಗೆ ಕೋಳಿ ನೈವೇದ್ಯ ಮಾಡು ಅಂತಾ ಕೇಳಿಕೊಂಡಿದ್ದರಿoದ ದೇವಸ್ಥಾನವನ್ನ ಕಟ್ಟಲಾಯಿತಂತೆ.

ಈ ಜಾತ್ರೆ ನೂರಾರು ವರ್ಷಗಳಿಂದ ನಡೆಯುತ್ತಾ ಬಂದಿದ್ದು ಪ್ರತಿ ವರ್ಷ ಇದೇ ರೀತಿ ದೇವರಿಗೆ ಫಲ ಪುಷ್ಪ, ಹಣ್ಣು ಕಾಯಿಯಯನ್ನ ಸಮರ್ಪಿಸುವ ಜೊತೆಗೆ ಸಾರಾಯಿ, ಸಿಗರೇಟ್, ಕೋಳಿ ಅರ್ಪಿಸುತ್ತಾರೆ. ಅಲ್ಲದೇ ಹೆದ್ದಾರಿಗೆ ಹೊಂದಿಕೊoಡೇ ಈ ದೇವರು ಇದ್ದು ದೇವಸ್ಥಾನವಾದ ಬಳಿಕ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಸಹ ಕಡಿಮೆಯಾಗಿದೆ ಅನ್ನೋದು ಭಕ್ತರ ಅಭಿಪ್ರಾಯ.

ಪ್ರತಿ ವರ್ಷದ ಮಾರ್ಚ್ ತಿಂಗಳಲ್ಲಿ ನಡೆಯುವ ಈ ಜಾತ್ರೆಗೆ ಕೇವಲ ಕಾರವಾರದಿಂದ ಮಾತ್ರವಲ್ಲದೇ ನೆರೆಯ ಗೋವಾ, ಮಹಾರಾಷ್ಟ್ರದಿಂದ ಸಹ ಭಕ್ತರು ಆಗಮಿಸುವ ಜೊತೆಗೆ ದೇವರಿಗೆ ಹೆಂಡ, ಸಿಗರೇಟು, ಕೋಳಿಯನ್ನ ನೀಡಿ ತಮ್ಮ ಹರಕೆಯನ್ನ ಈಡೇರಿಸಿಕೊಳ್ಳುತ್ತಾರೆ…ಒಟ್ಟಾರೇ ಕಾರವಾರದಲ್ಲಿ ನಡೆಯುವ ಸಾರಾಯಿ ಜಾತ್ರೆ ಸಾಕಷ್ಟು ವಿಶೇಷತೆಯನ್ನ ಹೊಂದಿದ್ದು ದೇವರನ್ನ ಹೀಗೂ ಆರಾಧಿಸುತ್ತಾರೆ ಅನ್ನೋದಿಕ್ಕೆ ಖಾಪ್ರಿ ದೇವರು ಸಾಕ್ಷಿಯಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Exit mobile version