ವಿಳಂಬವಾಗಲಿದೆ ಮಾವಿನ ಹಣ್ಣಿನ ಮಾರುಕಟ್ಟೆ ಪ್ರವೇಶ: ಯಾಕೆ ನೋಡಿ?

ಕುಮಟಾ: ಹವಾಮಾನ ವೈಪರಿತ್ಯದ ಕಾರಣದಿಂದಾಗಿ ಈ ಬಾರಿ ಉತ್ತರ ಕನ್ನಡ ಜಿಲ್ಲೆಯಲ್ಲಿ ನಿಗದಿತ ಸಮಯಕ್ಕೆ ಮಾವಿನ ಮರಗಳಲ್ಲಿ ಹೂವುಗಳು ಬಿಡದೆ ಕಾಯಿಯ ಗೊಂಚಲುಗಳು ಕಾಣಿಸುತ್ತಿಲ್ಲ ಎನ್ನಲಾಗುತ್ತಿದೆ. ಇದರಿಂದಾಗಿ ಈ ಬಾರಿ ಹಣ್ಣುಗಳ ರಾಜ ಎಂದೆ ಪ್ರಸಿದ್ದಿ ಪಡೆದಿರುವ ಮಾವಿನ ಹಣ್ಣು ಮಾರುಕಟ್ಟೆ ಪ್ರವೇಶಿಸುವುದು ಬಹುತೇಕ ವಿಳಂಬವಾಗಲಿದೆ.

ಮಳೆಯ ಕಾರಣದಿಂದಾಗಿ ಮಾವಿನ ಹಣ್ಣು ಕೊಳೆರೋಗಕ್ಕೆ ತುತ್ತಾಗುವ ಹಾಗೂ ಬೆಲೆ ಕಳೆದು ಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಕಳೆದ ವರ್ಷ ಈ ಸಮಯದಲ್ಲಾಗಲೇ ಮಾವಿನ ಮರಗಳಲ್ಲಿ ಹೂವುಗಳು ಅರಳಿ ಕಾಯಿಯೂ ಒಂದು ಹಂತಕ್ಕೆ ಬೆಳವಣಿಗೆಯಾಗಿದ್ದವು. ಆದರೆ ಈ ಬಾರಿ ಮಾತ್ರ ಮಾರ್ಚ್ ತಿಂಗಳು ಮುಗಿಯುತ್ತಾ ಬಂದರೂ ಸಹ ಮಾವಿನ ಮರಗಳಲ್ಲಿ ಬರೀ ಹೂವುಗಳೇ ತುಂಬಿಕೊoಡಿರುವುದು ಕಾಣಿಸುತ್ತದೆ. ಕೆಲ ಮರಗಳಲ್ಲಿ ಅಲ್ಲೋಂದು, ಇಲ್ಲೊಂದು ಕಾಯಿಗಳು ಬೆಳೆದಿರುವುದು ಕಾಣ ಸಿಗುತ್ತಿದೆ.

ಇದರಿಂದಾಗಿ ಏಪ್ರಿಲ್ ತಿಂಗಳಿನಲ್ಲಿ ಮಾರುಕಟ್ಟೆ ಪ್ರವೇಶಿಸಬೇಕಾಗಿದ್ದ ಮಾವು 1 ತಿಂಗಳು ತಡವಾಗಿ ಬರುವುದರಿಂದ ರೈತರು ಮಳೆಯ ಆತಂಕವನ್ನು ಎದುರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯ ಅಂಕೋಲಾ, ಕುಮಟಾದಲ್ಲಿ ಬೆಳೆಯುವ ಕರಿ ಈಶಾಡ ಮಾವಿನ ಹಣ್ಣಿಗೆ ಭಾರೀ ಬೇಡಿಕೆ ಇದೆ. ಆದರೆ ಈ ಬಾರಿ ಇದರ ಇಳುವರಿ ಸ್ವಲ್ಪ ಕಡಿಮೆಯಾಗುವ ಸಂಭವ ಕೂಡಾ ಇದೆ ಎನ್ನಲಾಗುತ್ತಿದೆ.

ಹೂವು ತಡವಾದ ಕಾರಣ ಮೇ ಕೊನೆಯ ವಾರದಲ್ಲಿ ಮಾವಿನಹಣ್ಣು ಮಾರುಕಟ್ಟೆ ಪ್ರವೇಶಿಸಬಹುದು ಎನ್ನಲಾಗುತ್ತಿದೆ. ಆದರೆ ಮಾವಿನ ಹಣ್ಣುಗಳು ಮಳೆಗಾಲದ ಹತ್ತಿರದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡುವುರಿಂದ ಬೆಲೆ ಕಳೆದುಕೊಳ್ಳುವ ಸಂಭವವಿದೆ. ಒಮ್ಮೆ ಮಳೆಯು ವಿಳಂಬವಾದರೆ ಹಣ್ಣಿನ ದರದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಕಡಿಮೆ ಇದೆ. ಜೂನ್ ಮೊದಲ ವಾರದಲ್ಲಿಯೇ ಮಳೆ ಶುರುವಾದರೆ ಹಣ್ಣಿನ ಬೆಲೆಯಲ್ಲಿ ಇಳಿಕೆಯ ಭಯ ಜಿಲ್ಲೆಯ ಮಾವು ಬೆಳೆಗಾರರಿಗೆ ಕಾಡಲಾರಂಭಿಸಿದೆ.

ಈ ಸಂಬoದ ಕುಮಟಾ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಚೇತನ್ ನಾಯ್ಕ ಅವರು ನಮ್ಮ ವಿಸ್ಮಯ ಟಿ.ವಿ ಯೊಂದಿಗೆ ಮಾತನಾಡಿ, ನವೆಂಬರ್ ಹಾಗೂ ಡಿಸೆಂಬರ್‌ನ ವ್ಯತಿರಿಕ್ತ ಹವಾಮಾನದಿಂದಾಗಿ ಮಾವಿನ ಪ್ಲವರಿಂಗ್ ತಡವಾಗಿದೆ. ಜೊತೆಗೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಇಳುವರಿ ಕಡಿಮೆ ಇದೆ ಎನ್ನುತ್ತಾ ಜಿಲ್ಲೆಯಲ್ಲಿನ ಮಾವು ಬೆಳೆಯ ವಿಸ್ತೀರ್ಣ, ಹಾಗೂ ಬೆಳೆ ಉಳಿಸಿಕೊಳ್ಳಲು ಮುಂಚಿತವಾಗು ಕೈಗೊಳ್ಳಬಹುದಾದ ಮುಂಜಾಗೃತ ಕ್ರಮಗಳ ಕುರಿತಾಗಿ ವಿವರಣೆ ನೀಡಿದರು.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ, ಕುಮಟಾ

Exit mobile version