ಕಿಡಿಗೇಡಿ ಪ್ರವಾಸಿಗರ ಉಪಟಳ: ಸಾತೊಡ್ಡಿ ಜಲಪಾತ ವೀಕ್ಷಣೆ ನಿರ್ಭಂದ

ಯಲ್ಲಾಪುರ: ಜಿಲ್ಲೆಯ ಪ್ರಸಿದ್ಧ ಪ್ರವಾಸಿತಾಣಗಳಲ್ಲಿ ಒಂದಾಗಿರುವ ಯಲ್ಲಾಪುರ ತಾಲೂಕಿನ ಸಾತೊಡ್ಡಿ ಜಲಪಾತಕ್ಕೆ ಮುಂದಿನ ನಾಲ್ಕು ದಿನಗಳ ಕಾಲ ಪ್ರವಾಸಿಗರ ವೀಕ್ಷಣೆಗೆ ನಿರ್ಬಂಧಿಸಿ ಪ್ರಕಟಣೆಯನ್ನು ಹೊರಡಿಸಲಾಗಿದೆ. ಏಪ್ರಿಲ್ 12 ರಂದು ಸಾತೊಡ್ಡಿ ಜಲಪಾತದ ವೀಕ್ಷಣೆಗೆ ಬಂದಿದ್ದ ಕಿಡಿಗೇಡಿ ಪ್ರವಾಸಿಗರು ಜಲಪಾತದ ತಪ್ಪಲಿನಲ್ಲಿರುವ ಜೇನುಗೂಡಿಗೆ ಕಲ್ಲು ಹೊಡೆದ ಪರಿಣಾಮ ವೀಕ್ಷಣೆಗೆ ಬಂದಿದ್ದ 15 ಕ್ಕೂ ಹೆಚ್ಚಿನ ಪ್ರವಾಸಿಗರ ಮೇಲೆ ಜೇನು ಹುಳುಗಳು ದಾಳಿ ಮಾಡಿವೆ.

ಪರಿಣಾಮ ಹಲವು ಪ್ರವಾಸಿಗರಿಗೆ ಗಾಯಗಳಾಗಿದ್ದು, 4 ಜನರ ಪರಿಸ್ಥಿತಿ ಗಂಭೀರವಾಗಿದ್ದು ಅವರನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇದೀಗ ಶನಿವಾರ ಮತ್ತೆ ಜಲಪಾತದ ವೀಕ್ಷಣೆಗೆ ಬಂದಿದ್ದ ಪ್ರವಾಸಿಗ ಮೇಲೆ ಜೇನುಹುಳುಗಳು ಮತ್ತೆ ತೀವ್ರ ದಾಳಿ ಮಾಡಿದ್ದು ಹಲವಾರು ಪ್ರವಾಸಿಗರು ಗಾಯಗೊಂಡಿದ್ದಾರೆ. ಈ ಗಂಭೀರ ಸಮಸ್ಯೆ ಅರಿತ ತಾಲೂಕಾಡಳಿತ ಹಾಗೂ ಅರಣ್ಯ ಇಲಾಖೆಯು ಮುಂದಿನ ನಾಲ್ಕು ದಿನಗಳ ಕಾಲ ಸಾತೊಡ್ಡಿ ಜಲಪಾತದ ವೀಕ್ಷಣೆಗೆ ನಿರ್ಭಂದ ಹೊರಡಿದೆ.

ವಿಸ್ಮಯ ನ್ಯೂಸ್, ಯಲ್ಲಾಪುರ

Exit mobile version