ಕುಮಟಾ: ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಅನೇಕ ಅಭಿವೃದ್ಧಿ ಕಾರ್ಯಗಳ ಮೂಲಕ ಹಾಗೂ ತಮ್ಮ ಸರಳ ವ್ಯಕ್ತಿತ್ವದ ಮೂಲಕ ಜನ ಮೆಚ್ಚುಗೆ ಪಡೆದಿದ್ದ ಮಾಜಿ ಶಾಸಕರಾದ ಶಾರದಾ ಮೋಹನ ಶೆಟ್ಟಿ ಅವರು ಕಾರಣಾಂತರಗಳಿoದ ಕಳೆದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ತಮ್ಮ ನಿವಾಸದಲ್ಲಿ ಕರೆದ ಸುದ್ಧಿಗೋಷ್ಠಿಯಲ್ಲಿ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದರು.
ಅದಾದ ದಿನದಿಂದ ಶಾರದಾ ಮೋಹನ ಶೆಟ್ಟಿ ಅವರು ರಾಜಕೀಯವಾಗಿ ಎಲ್ಲಿಯೂ ಸಹ ಕಾಣಿಸಿಕೊಂಡಿರಲಿಲ್ಲ. ಇದೀಗ ಪುನಃ ಶಾರದಾ ಮೋಹನ ಶೆಟ್ಟಿ ಅವರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದು, ಬೆಂಗಳೂರಿನ ಕೆ.ಪಿ.ಸಿ.ಸಿ ಕಚೇರಿಯಲ್ಲಿ ಮುಖ್ಯ ಮಂತ್ರಿಗಳಾದ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯ ಮಂತ್ರಿಗಳಾದ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಕಾಂಗ್ರೆಸ್ ಪಾಳಯ ಸೇರಿಕೊಂಡಿದ್ದಾರೆ.
ಕಳೆದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕೊನೆಯ ಹಂತದಲ್ಲಿ ಕಾಂಗ್ರೆಸ್ ಪಕ್ಷವು ಶಾರದಾ ಮೋಹನ ಶೆಟ್ಟಿಯವರಿಗೆ ಟಿಕೆಟ್ ಕೊಡದೆ ನಿರಾಕರಿಸಿತ್ತು. ಇದರಿಂದ ಬೇಸರಗೊಂಡ ರಾಜಕೀಯ ನಿವೃತ್ತಿ ಘೋಷಣೆ ಮಾಡಿ ಅದರಂತೆ ಶಾಂತವಾಗಿ, ರಾಜಕೀಯವಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ರಾಜ್ಯದಲ್ಲಿ ಬಿ.ಜೆ.ಪಿ ಅಧಿಕಾರದಲ್ಲಿರುವಾಗಲೂ ಶಾರದಾ ಶೆಟ್ಟಿ ಅವರು ಮಾಜಿ ಶಾಸಕರಾಗಿಯೇ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡಿಕೊಂಡು ಕಾಂಗ್ರೆಸ್ ಪಕ್ಷವನ್ನು ಕುಮಟಾ ಕ್ಷೇತ್ರದ ಮಟ್ಟಿಗೆ ಗಟ್ಟಿಗೊಳಿಸಿದ್ದರು.
ಆದರೆ ಪಕ್ಷ ಕೊನೆಯ ಕ್ಷಣದಲ್ಲಿ ಕೈ ಬಿಟ್ಟ ಕಾರಣ ಈ ಎಲ್ಲಾ ಬೆಳವಣಿಗೆಗಳು ನಡೆದಿದ್ದವು. ಇದೀಗ ಪುನಃ ಶಾರದಾ ಶೆಟ್ಟಿ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ. ಅಲ್ಲದೇ ಮೇ 3 ರಂದು ಕುಮಟಾಕ್ಕೆ ಸ್ವತಃ ಸಿ.ಎಂ ಸಿದ್ದರಾಮಯ್ಯ ಅವರೇ ಆಗಮಿಸಲಿದ್ದು, ಈ ವೇಳೆ ಶಾರದಾ ಶೆಟ್ಟಿ ಅವರು ಮತ್ತೊಮ್ಮೆ ಅಧಿಕೃತವಾಗಿ ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ, ಕುಮಟಾ