ಪದ್ಮಶ್ರೀ ತುಳಸಿ ಗೌಡ ಆರೋಗ್ಯದಲ್ಲಿ ತಕ್ಕ ಮಟ್ಟಿಗೆ ಚೇತರಿಕೆ : ಆಸ್ಪತ್ರೆಯಿಂದ ಬಿಡುಗಡೆ: ಮನೆಗೆ ಮರಳಿದ ಹೊನ್ನಳ್ಳಿಯ ವೃಕ್ಷ ಮಾತೆ

ಅಂಕೋಲಾ : ಕಳೆದ ಕೆಲ ದಿನಗಳ ಹಿಂದಷ್ಟೇ ಹಠಾತ್ ಆರೋಗ್ಯ ಸಮಸ್ಯೆಯಿಂದ, ಒಂದು ಬದಿಯ ಕಾಲಿನ ಸ್ವಾಧೀನ ಕಳೆದುಕೊಂಡಿದ್ದ ಅಂಕೋಲಾ ತಾಲೂಕಿನ ಹೊನ್ನಳ್ಳಿಯ ತುಳಸಿ ಗೌಡ ಅವರನ್ನು ಕಾರವಾರ ಕ್ರಿಮ್ಸ್ ಗೆ ದಾಖಲಿಸಿ, ವೈದ್ಯೋಪಚಾರ ನೀಡಲಾಗಿತ್ತು. ಈ ವೇಳೆ ಸ್ವತಃ ಆಸ್ಪತ್ರೆಗೆ ಭೇಟಿ ನೀಡಿ,ಪದ್ಮಶ್ರೀಯ ಆರೋಗ್ಯ ವಿಚಾರಿಸಿದ್ದ, ಜಿಲ್ಲಾಧಿಕಾರಿಗಳಾದ ಗಂಗೂಬಾಯಿ ಮಾನಕರ, ವೃಕ್ಷ ಮಾತೆಯ ದೇಹಾರೋಗ್ಯದ ವಿಶೇಷ ತಪಾಸಣೆಗೆ ಮಣಿಪಾಲ ಆಸ್ಪತ್ರೆಗೆ ಸಾಗಿಸಲು ಅಂಬುಲೆನ್ಸ್ ವ್ಯವಸ್ಥೆ ಮಾಡಿ ಸರ್ಕಾರದ ವತಿಯಿಂದ ತಮ್ಮ ಕಳಕಳಿ ವ್ಯಕ್ತಪಡಿಸಿದ್ದರು.

ಸ್ಥಳೀಯ ಶಾಸಕ ಸತೀಶ ಸೈಲ್ ಸಹ ಸಂಬಂಧಿತ ವೈದ್ಯರೊಂದಿಗೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಿ,ವೃಕ್ಷ ಮಾತೆಯ ಆರೋಗ್ಯ ಕಾಳಜಿ ತೆಗೆದುಕೊಳ್ಳುವಂತೆ ವಿನಂತಿಸಿದ್ದರು. ಈ ನಡುವೆ ನಾಡಿನ ಕೆಲ ಮಠಾಧೀಶರು,ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು,ಸಂಘ ಸಂಸ್ಥೆಗಳ ಪ್ರಮುಖರು,ಇತರೆ ಗಣ್ಯರು ಹಾಗೂ ಪರಿಸರ ಪ್ರೇಮಿಗಳು, ತುಳಸಿ ಗೌಡ ಅವರ ಆರೋಗ್ಯ ಕಾಳಜಿ ಬಗ್ಗೆ ವಿಚಾರಿಸಿದ್ದಲ್ಲದೇ, ಹಲವರು ತುಳಸಜ್ಜಿಯ ಶೀಘ್ರ ಆರೋಗ್ಯ ಚೇತರಿಕೆಗೆ ಪ್ರಾರ್ಥಿಸಿದ್ದರು.

ಈದೀಗ ತುಳಸಿ ಗೌಡ ಅವರ ಆರೋಗ್ಯದಲ್ಲಿ ತಕ್ಕಮಟ್ಟಿಗೆ ಬೇತರಿಕೆ ಕಂಡು ಬಂದಿದ್ದು,ಮಣಿಪಾಲ್ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ, ನಂತರ ಪುನ: ಕಾರವಾರ ಕ್ರಿಮ್ಸ್ ಗೆ ಕರೆತಂದು, ಅಲ್ಲಿ ತಪಾಸಣೆ ನಡೆಸಿ, ಬಳಿಕ ಅಂಕೋಲಾದ ಹೊನ್ನಳ್ಳಿಯ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಈ ಮೂಲಕ ಆಕಸ್ಮಿಕ ಆರೋಗ್ಯ ಏರುಪೇರಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಪದ್ಮಶ್ರೀ ತುಳಸಿ ಗೌಡ,ಆರೋಗ್ಯ ಚೇತರಿಕೆಯೊಂದಿಗೆ ಮನೆಗೆ ಮರಳಿದ್ದು, ಅಜ್ಜಿಯ ಮುಖದಲ್ಲೂ ಕೊಂಚ ನೆಮ್ಮದಿ ಕಂಡುಬಂದಂತಿದೆ.

ತುಳಸಜ್ಜಿಗೆ ಹಿರಿ ಅಕ್ಕನಂತಿರುವ ಪದ್ಮಶ್ರೀ ಸಾಲು ಮರದ ತಿಮ್ಮಕ್ಕ ಮತ್ತು ಅವರ ಮಗ ಉಮೇಶ ಸಹ, ತುಳಸಜ್ಜಿ ಗುಣಮುಖರಾಗುವಂತೆ ಶುಭ ಹಾರೈಸಿದ್ಧರು. ಆಸ್ಪತ್ರೆಯಿಂದ ಹೊರ ಬಂದು ತನ್ನ ಮನೆಯ ವಾತಾವರಣದಲ್ಲಿರುವ ತುಳಸಜ್ಜಿ ಮತ್ತಷ್ಟು ಚೇತರಿಕೆ ಕಂಡು, ಈ ಹಿಂದಿನಂತೆ ಒಡಾಡುತ್ತ , ಪರಿಸರ ಜಾಗೃತಿ ಮೂಡಿಸುತ್ತಿರಲಿ ಮತ್ತು ಆ ಮೂಲಕ ತಾಲೂಕಿನ, ಜಿಲ್ಲೆಯ, ನಾಡಿನ ಹಾಗೂ ರಾಷ್ಟ್ರದ ಹಿರಿಮೆಗೆ ಮತ್ತಷ್ಟು ಕೊಡುಗೆ ನೀಡಲಿ ಎನ್ನುವುದು ಪರಿಸರ ಪ್ರೇಮಿಗಳ ಆಶಯವಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version