ಅಂಕೋಲಾ: ದಿನದಿಂದ ದಿನಕ್ಕೆ ಬಿಸಿಲಿನ ತಾಪದೊಂದಿಗೆ ಚುನಾವಣಾ ಕಾವು ಏರುತ್ತಿದ್ದು,ಕಾಂಗ್ರೆಸ್ ಮತ್ತು ಬಿಜೆಪಿ ಈ ಎರಡೂ ರಾಜಕೀಯ ಪಕ್ಷಗಳು ಮತದಾರರ ಮನ ಮುಟ್ಟಲು ನಿರಂತರ ಪ್ರಚಾರದಲ್ಲಿ ತೊಡಗಿಕೊಂಡಿವೆ. ತಾಲೂಕಿನ ಮಟ್ಟಿಗೆ ಹೇಳುವುದಾದರೆ,ಈ ಹಿಂದೆ ವಿಧಾನಸಭೆಗೆ ಸಂಬಂಧಿಸಿದಂತೆ ಇದೇ ಕ್ಷೇತ್ರದಲ್ಲಿ ಶಾಸಕರಾಗಿ ತ್ರಿ ವಿಕ್ರಮ ಸಾಧನೆ ಮಾಡಿ, ತಮ್ಮ ರಾಜಕೀಯ ಮೈಲಿಗಲ್ಲು ಏರುತ್ತ ಹೋಗಿದ್ದ ಕಾಗೇರಿಯವರು,ಬದಲಾದ ಭೌಗೋಳಿಕ ಕ್ಷೇತ್ರ ವಿಂಗಡಣೆಯಲ್ಲಿ,ಸಿರ್ಸಿ ಸಿದ್ದಾಪುರ ಕ್ಷೇತ್ರ ಪ್ರತಿನಿಧಿಸಿ ಅಲ್ಲಿಯೂ ಹ್ಯಾಟ್ರಿಕ್ ಸಾಧನೆ ಮಾಡಿ ಗಮನ ಸೆಳೆದಿದ್ದರು.
ಈಗ ಅವರು ಲೋಕಸಭಾ ಚುನಾವಣೆಯಲ್ಲಿ ಅದೃಷ್ಟ ಪರಿಶೀಲಿಸುವಂಥಾಗಿದ್ದು, ಮೋದಿ ನಾಮ ಬಲದೊಂದಿಗೆ, ತಮ್ಮ ರಾಜಕೀಯದ ಮೂಲ ( ಗಟ್ಟಿ) ನೆಲ ಅಂಕೋಲಾದಲ್ಲಿ,ಅದೇ ಉತ್ಸಾಹ ಮತ್ತು ಭರವಸೆಯಿಂದ ಮತ ಯಾಚಿಸುತ್ತಿರುವಂತೆ ಕಂಡು ಬಂದಿದೆ.ಭಾರತೀಯ ಜನತಾ ಪಕ್ಷದ ಆಡಳಿತದ ಕುರಿತು ದೇಶಾದ್ಯಂತ ಜನರ ವಿಶ್ವಾಸ ಹೆಚ್ಚಿದ್ದು ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ದೇಶದ ಜನ ಸಂಕಲ್ಪ ಮಾಡಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದರು.
ತಾಲೂಕಿನ ಪಟ್ಟಣ ಹಾಗೂ ಗ್ರಾಮಾಂತರ ಭಾಗಗಳ ಹಲವೆಡೆ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಉತ್ತರ ಕನ್ನಡ, ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ವಿಶೇಷ ಕೊಡುಗೆ ನೀಡುತ್ತಾ ಬಂದಿದ್ದು ಈ ಬಾರಿಯೂ ದಾಖಲೆಯೊಂದಿಗೆ ಗೆಲುವು ಸಾಧಿಸುವ ಸಂಪೂರ್ಣ ವಿಶ್ವಾಸವಿದೆ ಎಂದರು. ದೇಶದ ರಕ್ಷಣೆ, ಅಭಿವೃದ್ಧಿ ಕೇವಲ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ದೇಶದ ಜನತೆ ಮನಗಂಡಿದ್ದಾರೆ ಉತ್ತರ ಕನ್ನಡ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಖಚಿತ ಎಂದು ಹೇಳಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮತ್ತು ಮಾಜಿ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಮಾತ್ರ ಬಾಕಿ ಇದ್ದು ಪಕ್ಷದ ಅಭ್ಯರ್ಥಿ ಕಾಗೇರಿಯವರ ಗೆಲುವಿಗೆ ಸಮರೋಪಾದಿಯಲ್ಲಿ ಕೆಲಸ ಮಾಡುವ ಮೂಲಕ ನರೇಂದ್ರ ಮೋದಿ ಅವರು ಪ್ರಧಾನಿಯಾಗಲು ಕೊಡುಗೆ ನೀಡಬೇಕಿದೆ ಎಂದರು.
ಬಿಜೆಪಿ ಸರ್ಕಾರ ಅಧಿಕಾರದಲ್ಲಿ ರಾಮನಗುಳಿ ಸೇತುವೆ ಸೇರಿದಂತೆ ಪಟ್ಟಣ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಮಾಡಿರುವ ನೂರಾರು ಅಭಿವೃದ್ಧಿ ಕೆಲಸಗಳು ಕಣ್ಣಿಗೆ ಕಾಣುತ್ತಿದ್ದು, ರಸ್ತೆ ಮತ್ತಿತರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಅಪಾರ ಕೊಡುಗೆ ನೀಡಿದೆ ಎಂದರು.
ಪಕ್ಷದ ಪ್ರಮುಖರಾದ ಭಾಸ್ಕರ ನಾರ್ವೇಕರ, ನಾಗರಾಜ ನಾಯಕ, ಗೋಪಾಲಕೃಷ್ಣ ವೈದ್ಯ, ರಾಜೇಂದ್ರ ನಾಯ್ಕ, ಸಂಜಯ ನಾಯ್ಕ, ಚಂದ್ರಕಾಂತ ನಾಯ್ಕ, ಜಗದೀಶ ಮೊಗಟಾ, ಸುಬ್ರಹಣ್ಯ, ಸೇರಿದಂತೆ ಹಿರಿ-ಕಿರಿಯ ಮುಖಂಡರು, ಕಾರ್ಯಕರ್ತ ರಿದ್ದರು.
ಬಡಗೇರಿಯ ಪದ್ಮಶ್ರೀ ಸುಕ್ರಿ ಗೌಡ ಅವರ ಮನೆಗೆ ತೆರಳಿ,ಆಶೀರ್ವಾದ ಪಡೆದ ಕಾಗೇರಿ ಅವರು, ಹತ್ತಿರದ ಮೀನು ಮಾರುಕಟ್ಟೆ ಬಳಿ ತೆರಳಿ,ಎಲ್ಲರನ್ನೂ ಆತ್ಮೀಯವಾಗಿ ಮಾತನಾಡಿಸಿ ಅಲ್ಲಿಯೂ ಮತ ಬೇಟೆಗೆ ಮುಂದಾದರು. ಬೆಳಂಬಾರದ ಕಾರ್ಯಕ್ರಮ ಒಂದರಲ್ಲಿ ರೂಪಾಲಿ ನಾಯ್ಕ ಅವರ ಶ್ರಮ ಮತ್ತು ಸಾಧನೆಯನ್ನು ಕೊಂಡಾಡಿದ ಅವರು,ತಾನೂ ಸಹ ಈ ಹಿಂದೆ ಇದೇ ತಾಲೂಕಿನ ಶಾಸಕನಾಗಿದ್ದನ್ನು ಹೆಮ್ಮೆಯಿಂದ ಸ್ಮರಿಸಿಕೊಂಡರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ