ಕೈಕೊಟ್ಟ ಮತಯಂತ್ರ: ಮತದಾನ ಪ್ರಕ್ರಿಯೆ ತಾಸಿಗೂ ಹೆಚ್ಚು ಕಾಲ ವಿಳಂಬ

ಅಂಕೋಲಾ: ಕೈಕೊಟ್ಟ ಮತಯಂತ್ರದಿಂದ ಮತದಾನ ಪ್ರಕ್ರಿಯೆ ತಾಸಿಗೂ ಹೆಚ್ಚು ಕಾಲ ವಿಳಂಬವಾದ ಘಟನೆ, ತಾಲೂಕಿನ ಬೇಳಾ ಬಂದರ ಶಾಲೆಯ ಮತಗಟ್ಟೆಯಲ್ಲಿ ನಡೆದಿದೆ. ತಾಲೂಕಿನ ಮಾದರಿ ಮತಗಟ್ಟೆಯಲ್ಲಿ ಒಂದಾದ ಈ ಮತದಾನ ಕೇಂದ್ರವನ್ನು ಮದುವೆ ಮನೆಯಂತೆ ಶೃಂಗಾರ ಮಾಡಲಾಗಿದ್ದು, ನಿಗದಿಯಂತೆ ಬೆಳಿಗ್ಗೆ 7.00 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಬೇಕಿತ್ತು.

ಆದರೆ ಈ ವೇಳೆ ಮತಯಂತ್ರ ಕೈ ಕೊಟ್ಟಿದ್ದರಿಂದ, ಮತದಾನ ಕೇಂದ್ರ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕ್ಷಣಕಾಲ ಗಾಬರಿಗೊಂಡು ಮತಯಂತ್ರ ಸರಿಪಡಿಸಲು ಮುಂದಾದರೂ ಸಾಧ್ಯವಾಗದೇ, ನಂತರ ಈ ವಿಷಯವನ್ನು ಮೇರಾಧಿಕಾರಿಗಳ ಗಮನಕ್ಕೆ ತಂದರು ಎನ್ನಲಾಗಿದೆ. ಆ ಬಳಿಕ ತಹಶೀಲ್ದಾರ ಮತ್ತಿತರ ಅಧಿಕಾರಿಗಳು ಬಂದು ಪರಿಶೀಲಿಸಿ,ಪರಿಣಿತರನ್ನು ಕರೆಯಿಸಿ ಮತಯಂತ್ರ ಸರಿಪಡಿಸುವುದರೊಳಗೆ ಒಂದು ತಾಸು ಕಳೆದು ಹೋಗಿತ್ತು.

ಹೀಗಾಗಿ ಬೆಳಿಗ್ಗೆಯೇ ಬಂದು ಮತದಾನ ಮುಗಿಸಿ ತಮ್ಮ ಬೇರೆ ಬೇರೆ ಕೆಲಸ ಕಾರ್ಯಕ್ಕೆ ಹೋಗಬೇಕೆಂದಿದ್ದ ಕೆಲ ಮತದಾರರು,ನಿರಾಶೆ ಹೊಂದಿ,ಮತದಾನ ಕೇಂದ್ರದಿಂದ ಮರಳಿರುವುದು ಕಂಡು ಬಂತು. ಬೆಳಿಗ್ಗೆ 8 ಗಂಟೆ ನಂತರ ಮತ್ತೆ ಯಂತ್ರ ಸರಿಪಡಿಸಿ,ಮತದಾನಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version