ಮನೆಯ ಸಮೀಪ ಅವಿತುಕೊಂಡಿದ್ದ ಬೃಹತ್ ನಾಗರ ಹಾವು: ಹೇಗಿತ್ತು ಕಾರ್ಯಾಚರಣೆ ?

ಅಂಕೋಲಾ: ಮನೆಯೊಂದರ ಕಂಪೌಂಡ್ ಗೋಡೆ ಕಟ್ಟಲು ಬಂದಿದ್ದ ಕೆಲಸಗಾರರು, ಅಲ್ಲಿನ ಹಳೆಯ ಕಲ್ಲುಗಳ ರಾಶಿಯಲ್ಲಿ ನಾಗರ ಹಾವು ಇರುವುದನ್ನು ಕಂಡು, ಹೆದರಿ ತಮ್ಮ ಕೆಲಸ ಬಿಟ್ಟು ತೆರಳಿ, ಮನೆ ಮಾಲೀಕರ ಮೂಲಕ ಉರಗ ಸಂರಕ್ಷಕನಿಗೆ ವಿಷಯ ತಿಳಿಸಿದ್ದರು.ತನ್ನ ಮಗನೊಂದಿಗೆ ಸ್ಥಳಕ್ಕೆ ಬಂದ ಮಹೇಶ್ ನಾಯ್ಕ, ಭಾರೀ ಗಾತ್ರದ ನಾಗರಹಾವನ್ನು ಹಿಡಿದು,ಸಂರಕ್ಷಿಸಿ ಸ್ಥಳೀಯರ ಆತಂಕ ದೂರ ಮಾಡಿದ್ದಾರೆ.

ಅಂಕೋಲಾ ತಾಲೂಕಿನ ಸೂರ್ವೆ ಗ್ರಾಮದ ಮನೆ ಒಂದರ ಕಾಂಪೌಂಡ್ ಗೋಡೆ ನಿರ್ಮಾಣ ಕಾರ್ಯ ನಡೆಸಲಾಗುತ್ತಿದ್ದು, ಈ ವೇಳೆ ಮನೆಯ ಹತ್ತಿರ ಇರುವ ಇನ್ನೊಂದು ಕಂಪೌಂಡನಲ್ಲಿ ಸಂಗ್ರಹಿಸಿಡಲಾಗಿದ್ದ, ಹಳೆಯ ಕಲ್ಲುಗಳ ರಾಶಿಯಿಂದ ಕೆಲವು ಕಲ್ಲುಗಳನ್ನು ಆಯ್ದುಕೊಳ್ಳಲು ಕೆಲಸಗಾರರು ಮುಂದಾಗಿದ್ದಾರೆ. ಕಲ್ಲುಗಳ ರಾಶಿಯಿಂದ ಹತ್ತಾರು ಕಲ್ಲುಗಳನ್ನು ಪಕ್ಕಕ್ಕೆ ಸರಿಸಿ, ಗೂಡ್ಸ ರಿಕ್ಷಾ ವಾಹನದ ಮೂಲಕ ಕಾಮಗಾರಿ ನಡೆಯುವ ಸ್ಥಳಕ್ಕೆ ಸಾಗಿಸಬೇಕೆನ್ನುವಷ್ಟರಲ್ಲಿ,ಕಲ್ಲಿನ ರಾಶಿಯಿಂದ ಬುಸ್ ಗುಡುವ ಶಬ್ದ ಕೇಳಿ ಬಂದಂತಿದೆ.

ಈ ವೇಳೆ ಗುದ್ದಲಿ ಮತ್ತು ಪಿಕಾಸಿಯಿಂದ ಕಲ್ಲುಗಳನ್ನು ಪಕ್ಕಕ್ಕೆ ಸರಿಸುತ್ತಿರುವಾಗ,ನಾಗರಹಾವು ಕಂಡ, ಕೆಲಸಗಾರರು ಅತಂಕಗೊಂಡು, ತಮ್ಮ ಕೆಲಸ ಹಾಗೆಯೇ ಬಿಟ್ಟು ಹೆದರುತ್ತಲೇ ಹೋಗಿ ಮನೆಯ ಮಾಲೀಕರ ಬಳಿ ಹೋಗಿ ನಡೆದ ವಿಷಯ ತಿಳಿಸಿದ್ದಾರೆ ಮನೆಯ ಮಾಲೀಕರು ಈ ವಿಷಯವನ್ನು ತಮ್ಮ ಪರಿಚಿತರ ಮೂಲಕ ಉರಗ ಸಂರಕ್ಷಕ ಅವರ್ಸಾದ ಮಹೇಶ ನಾಯ್ಕ ಅವರಿಗೆ ಕರೆ ಮಾಡಿಸಿ ತಿಳಿಸಿದ್ದಾರೆ.

ಕೂಡಲೇ ಮಹೇಶ್ ನಾಯ್ಕ ಅವರು ತಮ್ಮ ಮಗ ಗಗನ್ ಜೊತೆ ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ಸ್ಥಳೀಯ ಕೆಲಸಗಾರರಿಗೆ ಧೈರ್ಯ ತುಂಬಿ, ರಾಶಿಯಲ್ಲಿದ್ದ ಕಲ್ಲುಗಳನ್ನು ನಿಧಾನವಾಗಿ ಪಕ್ಕಕ್ಕೆ ಸರಿಸುವಂತೆ ಹೇಳಿದ ಮಹೇಶ್ ನಾಯ್ಕ, ಅಲ್ಲಿಯೇ ಹಾವು ಅವಿತಿರುವುದನ್ನು ಖಚಿತಪಡಿಸಿಕೊಂಡು, ನಂತರ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಈ ವೇಳೆ ಮತ್ತೆ ಅಕ್ಕ ಪಕ್ಕದ ಕೆಲ ಕಲ್ಲುಗಳನ್ನು ಸಡಿಲಿಸಿ, ಪಕ್ಕಕ್ಕೆ ಎತ್ತಿಡುತ್ತಿರುವಾಗ ಹಾವು ಬುಸ್ ಎನ್ನುತ್ತಾ,ಸಂಧಿಯಿಂದ ಹೊರಬರಲು ಯತ್ನಿಸಿದೆ.

ಈ ವೇಳೆ ಅದನ್ನು ಚಾಕ ಚಕ್ಯತೆಯಿಂದ ಹಿಡಿದ ಮಹೇಶ್ ನಾಯ್ಕ, ಇಕ್ಕಟ್ಟಾದ ಜಾಗದಿಂದ, ಕಾಂಪೌಡ್ ಗೋಡೆ ದಾಟಿ ಮುಖ್ಯ ರಸ್ತೆಯತ್ತ ಬರುವಾಗ, ಹಾವನ್ನು ತನ್ನ ಮಗನಿಗೆ ಹಸ್ತಾಂತರಿಸಿ, ನಂತರ ತಾವು ಕಾಂಪೌಂಡ್ ದಾಟಿ ಬಂದಿದ್ದಾರೆ. ನಂತರ, ಬಿಸಿಲ ಬೇಗೆ ಮತ್ತಿತರ ಕಾರಣಗಳಿಂದ ಹಾವಿಗೆ ನೀರು ಕುಡಿಸಲು ಮುಂದಾದ ಮಹೇಶ ನಾಯ್ಕ ಕಾರ್ಯ ನೋಡುತ್ತಿದ್ದ, ಸೂರ್ವೆಯ ಹೆಣ್ಣುಮಗಳೊಬ್ಬಳು ತಾನೂ ಧೈರ್ಯ ತಂದುಕೊಂಡು, ಹಾವಿಗೆ ನೀರು ಕುಡಿಸಲು ಮುಂದಾಗಿದ್ದಾರೆ.

ಇದನ್ನು ಅಕ್ಕಪಕ್ಕದ ಕೆಲವರು ಕುತೂಹಲದಿಂದ ನೋಡಿದರೆ,ಇನ್ನು ಕೆಲವರು ಪೂಜನೀಯ ಭಾವನೆಯಿಂದ ಕರಮುಗಿದಿದ್ದಾರೆ. ನಂತರ ಮಹೇಶ ನಾಯ್ಕ ಅವರು ನಿಧಾನವಾಗಿ,ಹಾವನ್ನು ಚೀಲಕ್ಕೆ ತುಂಬುವ ಯತ್ನ ನಡೆಸಿದ್ದು, ಆರಂಭದಲ್ಲಿ ಕೊಂಚ ಪ್ರತಿರೋಧ ತೋರಿದಂತಿದ್ದ ಹಾವು,ಬುಸ್ ಗುಡುತ್ತಾ ರಸ್ತೆಯಲ್ಲಿ ಹೆಡೆಯೆತ್ತಿ ನಿಂತಿದೆ.ಮರಳಿ ಯತ್ನವ ಮಾಡಿದ ಮಹೇಶ್ ನಾಯ್ಕ , ನಂತರ ಹಾವು ಚೀಲ ಸೇರುವಂತೆ ಮಾಡಿ,ಅದನ್ನು ಸಂರಕ್ಷಿಸಿ,ಅರಣ್ಯ ಇಲಾಖೆಯ ಮಾರ್ಗದರ್ಶನದಲ್ಲಿ ಸುರಕ್ಷಿತ ಸ್ಥಳಕ್ಕೆ ಸಾಗಿಸಿದ್ದಾರೆ. ಈ ಮೂಲಕ ಸ್ಥಳೀಯ ಕೆಲಸಗಾರರ ಮತ್ತಿತರರ ಆತಂಕ ದೂರ ಮಾಡಿದ್ದಾರೆ. ಕೆಲಸಗಾರರಾದ ಸುಕ್ರು,ಗೂಡ್ಸ್ ರಿಕ್ಷಾ ಮಾಲಕ ಬೆಳಂಬಾರದ ಗೌರೀಶ ಗೌಡ ಮತ್ತಿತರರು ಕಾರ್ಯಾಚರಣೆಗೆ ಸಹಕರಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version