ಶೇಷಗಿರಿ ನಾಡಕರ್ಣಿ ವಿಧಿವಶ: ಮುಂಬೈ ಸರ್ಕಾರದ ಕಾಲಾವಧಿಯಲ್ಲಿ ಅಧಿಕಾರಿಯಾಗಿದ್ದ ನೇರ, ನಿಷ್ಠುರ ವ್ಯಕ್ತಿತ್ವದ ಹಿರಿಯ ಜೀವ ಇನ್ನಿಲ್ಲ

ಅಂಕೋಲಾ: ತಾಲೂಕಿನ ಶಕ್ತಿದೇವತೆ ಭೂಮಿತಾಯಿ ಎಂದೇ ಪ್ರಸಿದ್ಧವಾಗಿರುವ ಶ್ರೀಶಾಂತಾದುರ್ಗಾ ದೇವಾಲಯದ ವಹಿವಾಟಿ ಮೊಕ್ತೆಸರ್ (ಟ್ರಸ್ಟಿ) ಗಳಾಗಿ ದಕ್ಷತೆಯಿಂದ ಕಾರ್ಯ ನಿವಹಿಸುತ್ತಿದ್ದ, ಶೇಷಗಿರಿ ವಾಸುದೇವ ನಾಡಕರ್ಣಿ(87) ಹೊನ್ನೆಕೇರಿ ಅವರು ವಿಧಿವಶರಾಗಿದ್ದಾರೆ. ಅಂದಿನ ಮುಂಬೈ ಸರ್ಕಾರದಲ್ಲಿ ಚಾರಿಟಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ, ಮೂಲ ಊರು ಅಂಕೋಲಾಕ್ಕೆ ಮರಳಿ, ತಮ್ಮ ಕುಟುಂಬ ದೀರ್ಘಾವದಿಯಿಂದ ವಂಶ ಪಾರಂಪರ್ಯವಾಗಿ ನಿರ್ವಹಿಸುತ್ತ ಬಂದಿರುವ ಶ್ರೀಶಾಂತಾದುರ್ಗಾ ದೇವಿಯ ವಹಿವಾಟು ಮೊಕ್ತೇಸರರಾಗಿ ಇವರೂ ಕಾರ್ಯ ನಿವಹಿಸಿ, ತಮ್ಮ ದಕ್ಷ ಹಾಗೂ ಪ್ರಾಮಾಣಿಕ ಸೇವೆಯ ಮೂಲಕ ಗುರುತಿಸಿಕೊಂಡಿದ್ದರು.

ಶ್ರೀದೇವರ ಬಂಡಿ ಹಬ್ಬ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ನಿಂತು, ಮಾರ್ಗದರ್ಶನ ನೀಡುತ್ತ, ದೇವಸ್ಥಾನದ ಆಡಳಿತ ವ್ಯವಸ್ಥೆಯಲ್ಲಿ ತಮ್ಮ ಬಿಗು ಮತ್ತು ನಿಷ್ಠುರ ನಿಲುವಿನಿಂದ ಹಲವರ ಗೌರವಕ್ಕೆ ಪಾತ್ರರಾಗಿದ್ದರು. ಸರಳ, ಸಜ್ಜನ ಸ್ವಭಾವದವರಾಗಿದ್ದ ಅವರು ತಮ್ಮ ನೇರ ನುಡಿಯ ಮೂಲಕ ಗಮನ ಸೆಳೆದಿದ್ದು ಕಳೆದ ಎರಡು ವರ್ಷಗಳ ಹಿಂದೆ ಇವರ ನಿಸ್ಪಾರ್ಥ ಸೇವೆಯನ್ನು ಗುರುತಿಸಿ, ಸುಭಾಸ ನಾರ್ವೇಕರ ನೇತೃತ್ವದಲ್ಲಿ ಅಂಕೋಲಾ ನಾಗರಿಕರ ಪರವಾಗಿ ಮತ್ತು ದೇವಸ್ಥಾನ ಆಡಳಿತ ಮಂಡಳಿ ಪರವಾಗಿ,ಸನ್ಮಾನಿಸಿ ಗೌರವಿಸಿದ್ದನ್ನು ಸ್ಮರಿಸಬಹುದಾಗಿದೆ.

ವಯೋ ಸಹಜ ಅನಾರೋಗ್ಯದಿಂದ ಆಗಾಗ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮತ್ತು ಉಪಚಾರ ಪಡೆದುಕೊಳ್ಳುತ್ತಿದ್ದ ಇವರು, ಶನಿವಾರ ರಾತ್ರಿ ವಿಧಿವಶರಾಗಿದ್ದು, ಮಾರನೇ ದಿನ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಹಿರಿಯರಾದ ನಾಡಕರ್ಣಿ ಅವರ ನಿಧನ ವಾರ್ತೆ ಕೇಳಿದ
ತಾಲೂಕಿನ ಹಲವು ಗಣ್ಯರು, ಶ್ರೀಶಾಂತಾದುರ್ಗಾ ದೇವಾಲಯದ ಆಡಳಿತ ಮಂಡಳಿಯ ಪ್ರಮುಖರು, ಇತರರೂ ಸೇರಿ ನೂರಾರು ಜನ
ಮೃತರ ಅಂತಿಮ ದರ್ಶನ ಪಡೆದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version