ಅಂಕೋಲಾ ಬಂಡಿಹಬ್ಬದ ಪೂರ್ವಭಾವಿ ತಯಾರಿ: ಸಂಪ್ರದಾಯಂತೆ ನಡೆದ ದೇವರು ಕರೆಯುವ ಶಾಸ್ತ್ರ ದಾರಿಯುದ್ದಕ್ಕೂ

ಅಸಂಖ್ಯ ಭಕ್ತರಿಂದ ಆರತಿ ಸೇವೆ

ಅಂಕೋಲಾ: ನಾಡಿನ ಪ್ರಸಿದ್ಧ ಬಂಡಿ ಹಬ್ಬಗಳಲ್ಲಿ ಒಂದಾಗಿರುವ ಅಂಕೋಲಾ ಬಂಡಿಹಬ್ಬ ಮೇ 23 ರಂದು ನಡೆಯಲಿದ್ದು, ಅದರ ಪೂರ್ವಭಾವಿಯಾಗಿ ದೇವರ ಕರೆಯುವ ಕಾರ್ಯಕ್ರಮ ಸಂಪ್ರದಾಯ ಬದ್ಧವಾಗಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ಕಾಳಮ್ಮ ದೇವಸ್ಥಾನದ ಎದುರು ಮಂಡಿಯೂರುವ ಕಳಸ ದೇವರನ್ನು ಸಾವಿರಾರು ಭಕ್ತರು ಕಣ್ತುಂಬಿಸಿಕೊoಡರು.

ಕನ್ನಡ ಕರಾವಳಿಯ ವಿಶಿಷ್ಟ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಪದ್ಧತಿಗಳಲ್ಲಿ ಬಂಡಿ ಹಬ್ಬವೂ ಒಂದಾಗಿದೆ. ವಿಶ್ವ ಪ್ರಸಿದ್ಧಿ ಪಡೆದ ಶ್ರೀಶಾಂತಾದುರ್ಗಾ (ಭೂಮಿತಾಯಿ) ದೇವಿಯ ಬಂಡಿ ಹಬ್ಬ ವನ್ನು ಅಂಕೋಲಾ ಬಂಡಿ ಹಬ್ಬ ಎಂದೇ ಕರೆಯಲಾಗುತ್ತಿದ್ದು ಈ ವರ್ಷ ಮೇ 23 ರಂದು ನಡೆಯಲಿದೆ. ಅಕ್ಷಯ ತೃತೀಯ ದಿಂದ ಆರಂಭವಾಗಿ 14 ದಿನಗಳವರೆಗೆ ನಡೆಯುವ ಈ ಆಚರಣೆಯ ಮಧ್ಯೆ 10 ನೇ ದಿನ ನಡೆಯುವ ಬಂಡಿ ಹಬ್ಬದ ವಿಶೇಷತೆಗಳೆಲ್ಲೊಂದಾದ ದೇವರು ಕರೆಯುವ ಶಾಸ್ತ್ರ ಮೇ 20 ರ ಸೋಮವಾರ ಸಕಲ ಧಾರ್ಮಿಕ ಸಂಪ್ರದಾಯಗಳೊoದಿಗೆ ಸಡಗರ ಸಂಭ್ರಮದಿoದ ನಡೆಯಿತು.

ದೇವಾಲಯದಿಂದ ವಾದ್ಯ ಮೇಳಗಳೊಂದಿಗೆ ಶ್ರೀ ದೇವರ ಕಳಸದ ಮೆರವಣಿಗೆ ನಡೆಯಿತು. ಈ ವೇಳೆ ಭಕ್ತರು ದೊಡ್ಡ ದೊಡ್ಡ ಹೂಹಾರ ಮಾಲೆಗಳನ್ನು ಸಮರ್ಪಿಸಿ,ಆರತಿ ಸೇವೆ ನೀಡಿ ತಮ್ಮ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸಿದರು. ನಂತರ ಗದ್ದೆ ಬಯಲು ಪ್ರದೇಶ ದಾಟಿ ಹನುಮಟ್ಟಾ ವಂದಿಗೆ ಮಾರ್ಗವಾಗಿ ತೆರಳಿ ಅಲ್ಲಿ ಭಕ್ತರಿಂದ ಪೂಜಾ ಸೇವೆಗಳನ್ನು ಸ್ವೀಕರಿಸಿ ಬೊಮ್ಮಯ್ಯ ದೇವರ ಗುಡಿಗೆ ತೆರಳಿ ಶ್ರೀ ಬೊಮ್ಮಯ್ಯ ದೇವರನ್ನು ಹಬ್ಬಕ್ಕೆ ಕರೆಯುವ ಸಂಪ್ರದಾಯ ನಡೆಸಲಾಯಿತು.

ನಂತರ ಕೆರೆಕಟ್ಟೆ ಮೂಲಕ ವಾಪಸ್ಸಾಗಿ ಕಾಳಮ್ಮ ದೇವರ (ಮಹಾಕಾಳಿ) ಎದುರು ಮಂಡಿಯೂರಿ ಸಾಂಪ್ರದಾಯಿಕ ಕರೆ ನೀಡಿತು.ಇದಕ್ಕಾಗಿಯೇ ಕಾದು ನೆರೆದಿದ್ದ ಸಾವಿರಾರು ಭಕ್ತರು,ಮೈ ರೋಮಾಂಚನಗೊಳಿಸುವ ಈ ದೃಶ್ಯವನ್ನು ಕಣ್ತುಂಬಿಸಿಕೊoಡು ಧನ್ಯತೆ ಮೆರೆದರು. ದೇವರ ಕಳಸ ಮಂಡಿಯೂರುವ ಶುಭ ಘಳಿಗೆಯಲ್ಲಿ ಭಕ್ತರ ಹರ್ಷೋದ್ಗಾರ,ಕರತಾಡನದ ನಡುವೆ ಜಾತ್ರೆಯ ವಾತಾವರಣ ಕಂಡುಬoತು.ದಾರಿಯುದ್ದಕ್ಕೂ ಅಸಂಖ್ಯ ಭಕ್ತರು ಆರತಿ ಸೇವೆ,ವಿಶೇಷ ಹೂಹಾರ ಸಮರ್ಪಿಸಿ ಭೂಮಿ ತಾಯಿಯಲ್ಲಿ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿಕೊಂಡರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version