ಭಟ್ಕಳ: ಮೀನುಗಾರಿಕೆ ಎಂಬುದು ಒಂದು ಅನಿಶ್ಚಿತತೆಯಿಂದ ಕೂಡಿದ ಉದ್ಯಮ ಎಂದರೆ ತಪ್ಪಾಗಲಾರದೇನೋ, ಲಕ್ಷ ಲಕ್ಷ ಹಣ ವಿನಿಯೋಗಿಸಿ ದೋಣಿ, ಬೋಟುಗಳನ್ನು ಬಲೆಗಳನ್ನು ಖರೀದಿಸಿ, ಸಾವಿರಾರು ರೂಪಾಯಿಯ ಇಂಧನವನ್ನು ತುಂಬಿಸಿಕೊoಡು ತಮ್ಮ ಜೀವನದ ಹಂಗು ತೊರೆದು ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡುವ ಮೀನುಗಾರರಿಗೆ ಬಿಸಿಲು, ಮಳೆ, ಗಾಳಿಯ ಹಂಗಿಲ್ಲ. ಆದರೆ ಮಳೆಗಾಲ ಹತ್ತಿರ ಬರುತ್ತಿದ್ದಂತೆ ಸಮುದ್ರ ಪ್ರಕ್ಷುಭ್ಧಗೊಳ್ಳುವುದರಿಂದ ಮೀನುಗಾರಿಕೆ ನಡೆಸಲು ಸಾಧ್ಯವಾಗುವುದಿಲ್ಲ.
ಇದು ಭಟ್ಕಳದ ತೆಂಗಿನಗುoಡಿ ಮತ್ತು ಅಳ್ವೆಕೋಡಿ ಬಂದರುಗಳಲ್ಲಿ ಕಂಡುಬರುವ ದೃಶ್ಯಗಳು. ಹೌದು ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು ಭಾರತೀಯ ಹವಾಮಾನ ಇಲಾಖೆ ಮೀನುಗಾರರಿಗೆ ಮೀನುಗಾರಿಕೆಗೆ ತೆರಳದಂತೆ ಮುನ್ನೆಚ್ಚರಿಕೆ ನೀಡಿದೆ. ಈ ತಿಂಗಳು 22 ನೇ ತಾರೀಖಿನವರೆಗೂ ಇದರ ಪರಿಣಾಮ ಕಾಣಿಸಿಕೊಳ್ಳಲ್ಲಿದ್ದು ಅಲ್ಲಿಯವರೆಗೂ ಮೀನುಗಾರಿಕೆಗೆ ತೆರಳದೆ ದೆಕ್ಕೆಯಲ್ಲಿ ಬೋಟುಗಳು ಲಂಗರು ಹಾಕುವುದು ಅನಿವಾರ್ಯವಾಗಿದೆ.
22 ರ ನಂತರ ಕೇವಲ 8 ದಿನದವರೆಗೆ ಮಾತ್ರ ಮೀನುಗಾರಿಕೆಯ ಅವಧಿ ಸಿಗಲಿದ್ದು ಆ ನಂತರ ಜೂನ್ ನಿಂದ ಜುಲೈ ಕೊನೆಯವರೆಗೆ ಸಾಂಪ್ರದಾಯಿಕ ಮೀನುಗಾರಿಕೆಯ ಹೊರತಾದ ಇತರ ಮೀನುಗಾರಿಕೆಗೆ ಸಂಪೂರ್ಣ ನಿಷೇಧವಿದ್ದು, 22 ನಂತರ ಮಳೆಗಾಲದ ಪರಿಣಾಮಗಳು ಕಾಣಿಸಿಕೊಂಡರೆ ಅಲ್ಲಿಗೆ ಈ ವರ್ಷದ ಮೀನುಗಾರಿಕೆ ಮುಗಿದಂತೆಯೇ ಎಂಬುದು ಮೀನುಗಾರರ ಅಭಿಪ್ರಾಯವಾಗಿದೆ.
ಒಟ್ಟಿನಲ್ಲಿ ಮಳೆಗಾಲದ ಎರಡು ತಿಂಗಳು ಮೀನುಗಾರಿಕೆ ಸಂಪೂರ್ಣವಾಗಿ ಬಂದ್ ಆಗುವುದರಿಂದ ಆ ಸಮಯದಲ್ಲಿ ಮೀನುಗಾರರು ಬಲೆ ಸರಿಪಡಿಸುವುದು, ದೋಣಿ , ಬೋಟುಗಳ ರಿಪೇರಿ ಕಾರ್ಯ, ಮುಂತಾದವುಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಆದರೆ ಈ ಕಾರ್ಯದಲ್ಲಿ ಹೆಚ್ಚಿನ ಜನರ ಅವಶ್ಯಕತೆ ಇರದ ಕಾರಣ ಹೆಚ್ಚಿನ ಮೀನುಗಾರರು ಈ ಸಮಯದಲ್ಲಿ ಕೆಲಸ ಮಾಡದೆ ಕಳೆಯುಂತ ಪರಿಸ್ಥಿತಿ ಎದುರಾಗುತ್ತದೆ ಎಂಬುದು ಮೀನುಗಾರರ ಅಳಲಾಗಿದೆ.
ವಿಸ್ಮಯ ನ್ಯೂಸ್, ಈಶ್ವರ ನಾಯ್ಕ ಭಟ್ಕಳ