ಶಾಲಾ ಕೊಠಡಿಗೆ ಆಕಸ್ಮಿಕ ಬೆಂಕಿ: ಸುಟ್ಟು ಕರಕಲಾದ ಸಾಮಗ್ರಿ

ಅಂಕೋಲಾ: ತಾಲೂಕಿನ ಅಗಸೂರು ಹೊನ್ನಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕರ ಕೊಠಡಿ (ಆಫೀಸ್ ಕೊಠಡಿಗೆ) ಆಕಸ್ಮಿಕ ಬೆಂಕಿ ತಗುಲಿ ಕಾಗದ ಪತ್ರಗಳು, ಪೀಠೊಪಕರಣ ಮತ್ತಿತರ ಸಾಮಗ್ರಿಗಳು ಸುಟ್ಟು ಕರಕಲಾಗಿವೆ ಎನ್ನಲಾಗಿದೆ. ಶಾಲಾ ಆಫೀಸ್ ಕೊಠಡಿಯಿಂದ ಹೊಗೆ ಬರುತ್ತಿರುವದು ಅಲ್ಲಿ ಆಟ ಆಡುತ್ತಿದ್ದ ಮಕ್ಕಳ ಗಮನಕ್ಕೆ ಬಂದಿದ್ದು ಅವರು ಊರ ಜನರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ಧಾವಿಸಿ ಬಂದ ನೂರಾರು ಗ್ರಾಮಸ್ಥರು ಮೊದಲು ಕಿಟಕಿಯಿಂದ ನೀರು ಸಿಂಪಡಿಸಿದರೂ ಬೆಂಕಿ ಹತೋಟಿಗೆ ಬರದಿದ್ದರಿಂದ, ಬಳಿಕ ಆಫೀಸ್ ಕೊಠಡಿಯ ಬೀಗ ಒಡೆದು, ಉಸಿರುಗಟ್ಟಿಸುವ ಹೊಗೆ ಮತ್ತು ಘಾಡ ವಾಸನೆಯನ್ನು ಲೆಕ್ಕಿಸದೇ, ಧೈರ್ಯದಿಂದ ಮುನ್ನುಗ್ಗಿ ಬೆಂಕಿ ಆರಿಸಿ ಸಂಭವನೀಯ ಹೆಚ್ಚಿನ ಹಾನಿ ತಪ್ಪಿಸಿದ್ದಾರೆ.

ತಾಪಮಾನದ ಹೆಚ್ಚಳ ಇಲ್ಲವೇ ಇತರೆ ಕಾರಣಗಳಿಂದ ಶಾಲಾ ಪ್ರಯೋಗ ಶಾಲೆಯ ರಾಸಾಯನಿಕ ವಸ್ತುಗಳಿಗೆ ಶಾಖದಿಂದ ಬೆಂಕಿ ಹೊತ್ತಿ ಉರಿದಿರುವ ಸಾಧ್ಯತೆ ಕೇಳಿಬಂದಿದ್ದು, ರಾಸಾಯನಿಕ ದಹಿಸಿ ಬೆಂಕಿ ಹೊತ್ತಿಕೊಂಡಿದೆಯೇ ಅಥವಾ ಬೇರೆ ಕಾರಣಗಳಿರಬಹುದೇ ? ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬಂದಿದ್ದು,ಶಾಲಾ ರಜಾ ದಿನವಾದ್ದರಿಂದ ಮತ್ತು ಸಂಜೆಯ ವೇಳೆಗೆ ಈ ಘಟನೆ ಸಂಭವಿಸಿದ್ದರಿಂದ ಬೆಂಕಿ ಅವಘಡದ ಕುರಿತಂತೆ ನಿಖರ ಮತ್ತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version