ಅಂಕೋಲಾ: ಬಹು ಕೋಟಿ ವೆಚ್ಚದಲ್ಲಿ ಅಂಕೋಲಾ ತಾಲೂಕಿನಲ್ಲಿ ಬಸ್ ನಿಲ್ದಾಣ ನಿರ್ಮಿಸಲಾಗಿದ್ದು ಹೆಸರು ಮತ್ತು ಮೇಲ್ನೋಟಕಷ್ಟೇ ಇದು ಹೈಟೆಕ್ ಬಸ್ ನಿಲ್ದಾಣ ಎನ್ನುವಂತಾಗಿದೆ.ಶುಚಿತ್ವ ನಿರ್ವಹಣೆ ಕೊರತೆ ,ಮತ್ತಿತರ ಕಾರಣಗಳಿಂದ ಬಸ್ ನಿಲ್ದಾಣದ ಆವರಣ ಗಬ್ಬೆದ್ದು ನಾರುತ್ತಿದ್ದು,ಆಡಳಿತ ವ್ಯವಸ್ಥೆಯನ್ನು ಅಣಕಿಸುವಂತಿದೆ.ಆರಂಭದಿಂದಲೂ ಒಂದಲ್ಲ ಒಂದು ರೀತಿ ಸಮಸ್ಯೆಗಳ ಮೂಲಕ ಇಲ್ಲಿನ ಬಸ್ ನಿಲ್ದಾಣದ ಕಾಮಗಾರಿ ಜನರ ಆಕ್ರೋಶಕ್ಕೆ ಕಾರಣವಾಗುತ್ತಲೇ ಬಂದಿತ್ತು.
ಈ ನಡುವೆ ಬಸ್ ನಿಲ್ದಾಣದ ಕ್ಯಾಂಟೀನ್,ಇತರೆ ಅಂಗಡಿ ಮಳಿಗೆಗಳು ಮತ್ತಿತರ ಕಟ್ಟಡಗಳಿಂದ ಬಾಡಿಗೆ ಆದಾಯಕ್ಕೆ ಹೆಚ್ಚು ಒತ್ತು ನೀಡಿದಂತಿರುವ ಸಾರಿಗೆ ಸಂಸ್ಥೆ,ಕ್ಯಾಂಟೀನ್ ಮತ್ತಿತರಡೆಯ ತ್ಯಾಜ್ಯ ನೀರು ವಿಲೇವಾರಿಗೆ ಇಂಗು ಗುಂಡಿ,ಸೇಫ್ಟಿ ಟ್ಯಾಂಕ್ ನಿರ್ಮಿಸದೇ,ಪೈಪ್ ಲೈನ್ ಅಳವಡಿಸಿ ದೂರ ದೂರದಲ್ಲಿ ಸಣ್ಣ ಸಣ್ಣ ಚೇಂಬರ್ ನಿರ್ಮಿಸಿ ಕೈ ತೊಳೆದುಕೊಂಡಂತಿದೆ. ಇದರಿಂದ ಈ ಭಾಗದ ತ್ಯಾಜ್ಯ ನೀರನ್ನು ಒಂದೆಡೆ ಸಂಗ್ರಹಿಸಿ, ಪುರಸಭೆಯ ಸೆಸ್ ಟ್ಯಾಂಕ್ ಮೂಲಕ ಹೊರಹಾಕಲು ಇಲ್ಲವೇ ಇತರೇ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ಸಾಧ್ಯವಾಗದೇ, ಚೆಂಬರ್ ತುಂಬಿ ತುಳುಕಿ, ಹೊಲಸು ನೀರು ಹೊರ ನುಗ್ಗಿ ಬಸ್ ನಿಲ್ದಾಣದ ಪ್ರವೇಶ ದ್ವಾರ ಮತ್ತಿತರೆಡೆ ಹರಿದನ ಬರುತ್ತಿದ್ದು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ದುರ್ವಾಸನೆಗೆ ಕಾರಣವಾಗಿದೆ.
ಬಸ್ ನಿಲ್ದಾಣದ ಆವರಣದಲ್ಲಿ ಶುಚಿತ್ವ ನಿರ್ವಹಣೆ ಕೊರತೆಯಿಂದ ಅಲ್ಲಲ್ಲಿ ಕಸ ತ್ಯಾಜ್ಯಗಳ ರಾಶಿ ರಾಶಿಯೇ ಕಂಡು ಬರುತ್ತಿದೆಯಲ್ಲದೇ, ಬಿಯರ್ ಮದ್ಯದ ಬಾಟಲಿಗಳು ಕಂಡು ಬಂದು ಆಡಳಿತ ವ್ಯವಸ್ಥೆ ಅಣಕಿಸುವಂತಿದೆ. ಸಾಲದೆಂಬಂತೆ ಬಸ್ ನಿಲ್ದಾಣದ ಒಳ ಪ್ರವೇಶ ದ್ವಾರದ ವರೆಗೂ ಹೊಲಸು ನೀರು ಹರಿದು ಬರುತ್ತಿರುವುದರಿಂದ, ವಾಹನಗಳ ಒಡಾಟದ ವೇಳೆ ಕೆಲ ಪಾದಾಚಾರಿಗಳಿಗೆ ಮತ್ತಿತರರಿಗೆ ಹೊಲಸು ನೀರು ಸಿಡಿದು, ಅದರ ದುರ್ವಾಸನೆಯಿಂದ ಮತ್ತು ಬಟ್ಟೆಗಳಿಗಾದ ಕಲೆಯಿಂದ ದಿನನಿತ್ಯದ ತಮ್ಮ ಕೆಲಸ ಕಾರ್ಯ, ಶಾಲಾ ಕಾಲೇಜಿಗೆ ಹೋಗಿ ಬರಲು ಪರದಾಡಿದ್ದಾರೆ ಎನ್ನಲಾಗಿದೆ.
ಬಸ್ ನಿಲ್ದಾಣದ ಎದುರಿನ ರಸ್ತೆ ಮತ್ತು ಚರಂಡಿಗಳಿಗೂ ಹೊಲಸು ನೀರು ಹರಿದು ಬಂದಿತ್ತು.ಸಾರ್ವಜನಿಕರು ಇಲ್ಲಿನ ಅವ್ಯವಸ್ಥೆ ಬಗ್ಗೆ ಮಾಧ್ಯಮದವರ ಗಮನಕ್ಕೆ ತರುತ್ತಿದ್ದಂತೆ ಎಚ್ಚೆತ್ತುಕೊಂಡ ನಿಲ್ದಾಣದ ಅಧಿಕಾರಿಗಳು ಚೇಂಬರ್ ನೀರು ನಿರ್ವಹಣೆಗೆ ಸ್ವಲ್ಪ ಮಟ್ಟಿಗೆ ಪ್ರಯತ್ನ ನಡೆಸಿದ್ದಾರಾದರೂ, ಅದರಿಂದ ಸಂಪೂರ್ಣ ವ್ಯವಸ್ಥೆ ಸರಿಪಡಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಹೊಲಸು ನೀರು ಹರಿಯುವ ಸ್ಥಳದ ಅಕ್ಕ ಪಕ್ಕದಲ್ಲಿ ಹಲವಾರು ಜನರು ತಮ್ಮ ವಾಹನಗಳನ್ನು ಪಾರ್ಕ್ ಮಾಡುತ್ತಾರಲ್ಲದೇ, ದಿನ ನಿತ್ಯ ಬಂದು ಹೋಗುವ ಸಾವಿರಾರು ಪ್ರಯಾಣಿಕರು, ಬಸ ನಿಲ್ದಾಣದ ಆವರಣದಲ್ಲಿರುವ ಅಂಗಡಿಕಾರರು ಮತ್ತಿತರರು ಮೂಗು ಮುಚ್ಚಿಕೊಂಡು ಅಸಹ್ಯಕರ ವಾತಾವರಣವನ್ನು ಸಹಿಸಿಕೊಳ್ಳಬೇಕಾಗಿದೆ. ಇತ್ತೀಚೆಗೆ ತಾಲೂಕಿನಲ್ಲಿ ಡೆಂಗ್ಯೂ ಮತ್ತಿತರ ಕಾಯಿಲೆಗಳು ಹೆಚ್ಚುತ್ತಿರುವುದು ಕಂಡು ಬಂದಿದ್ದು ಬಸ್ ನಿಲ್ದಾಣದ ಈ ಸ್ಥಿತಿ ಸೊಳ್ಳೆಗಳ ಉತ್ಪತ್ತಿಗೆ ಕೊಡುಗೆ ನೀಡುವ ಮೂಲಕ ಮರಣಾಂತಿಕ ಕಾಯಿಲೆಗಳಿಗೆ ಆಹ್ವಾನ ನೀಡುವಂತಿದೆ.
ಬಸ್ ನಿಲ್ದಾಣದ ಆವರಣದಲ್ಲಿ ಹೊಲಸು ನೀರು ಹರಿಯುವ ಕುರಿತು ತಾಲೂಕಿನ ಸಾರ್ವಜನಿಕರು ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದು ಸಾಮಾಜಿಕ ಕಾರ್ಯಕರ್ತ ಮತ್ತು ವಕೀಲ ಉಮೇಶ ನಾಯ್ಕ ಬಸ್ ನಿಲ್ದಾಣದ ಅಸಹ್ಯಕರ ವಾತಾವರಣದ ಕುರಿತು ತಮ್ಮ ತೀವ್ರ ಅಸಮಾಧಾನ ಹೊರ ಹಾಕಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಬಸ್ ನಿಲ್ದಾಣ ಅಸ್ವಚ್ಛತೆಯ ತಾಣವಾಗಿದ್ದು ಅಧಿಕಾರಿಗಳು ಮತ್ತು ಸಂಬಂಧಿತ ಜನಪ್ರತಿನಿಧಿಗಳು ಈ ಕುರಿತು ಗಮನ ಹರಿಸದೇ ಇದ್ದರೆ ಕಾನೂನು ಸೇವಾ ಸಮಿತಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.
ಇಲ್ಲಿ ಅಶುಚಿತ್ವದ ಕುರಿತು ಪುರಸಭೆ ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಂಬಧಿತ ಬಸ್ ನಿಲ್ದಾಣದ ವ್ಯವಸ್ಥಾಪಕರಿಗೆ ಸೂಕ್ತ ಕ್ರಮಕ್ಕೆ ಸೂಚಿಸಿರುವುದಾಗಿ ತಿಳಿದು ಬಂದಿದೆ. ಇನ್ನು ಮುಂದಾದರು ಸಂಬಂಧಿತ ಸಾರಿಗೆ ಸಂಸ್ಥೆಯವರು ಬಸ್ ನಿಲ್ದಾಣದ ಕ್ಯಾಂಟೀನ್ ಮತ್ತಿತರ ತ್ರಾಜ್ಯ ನೀರು ವಿಲೇವಾರಿಗೆ ಸೂಕ್ತ ಕ್ರಮ ಕೈಗೊಂಡುಸೂಕ್ತ ಕ್ರಮ ಕೈಗೊಂಡು,ತಮ್ಮ ಜವಾಬ್ದಾರಿ ಮೆರೆಯುವರೇ ಕಾದು ನೋಡಬೇಕಿದೆ.ಸಾರ್ವಜನಿಕರು ಮತ್ತು ಪ್ರಯಾಣಿಕರೂ ಸಹ ಕಂಡ ಕಂಡಲ್ಲಿ ಉಗಿಯದೇ, ಕಸ ತ್ಯಾಜ್ಯ ಚೆಲ್ಲದೇ ಸ್ವಚ್ಛತೆಗೆ ಸಹಕಾರ ನೀಡಬೇಕೆಂಬ ಮಾತು ಪ್ರಜ್ಞಾವಂತ ವಲಯದಿಂದ ಕೇಳಿಬಂದಿದೆ.
ಕೋಟ್ಯಾಂತರ ರೂಪಾಯಿ ವೆಚ್ಚದ ಅಂಕೋಲಾ ಬಸ್ ನಿಲ್ದಾಣ ಹೆಸರಿಗಷ್ಟೇ ಹೈಟೆಕ್ ಆಗಿದ್ದು, ಇಲ್ಲಿಯ ಕ್ಯಾಂಟೀನ್ ಮತ್ತಿತರೆಡೆಯ ತ್ಯಾಜ್ಯ ನೀರು ವಿಲೇವಾರಿಗೆ ಇಂಗುಗುಂಡಿ, ಸೇಫ್ಟಿ ಟ್ಯಾಂಕ್ ನಿರ್ಮಿಸದೇ ಪೈಪ್ ಲೈನ್ ಅಳವಡಿಸಿ ಹತ್ತಾರು ಚಿಕ್ಕ ಚಿಕ್ಕ ಚೇಂಬರ್ ಗಳಲ್ಲಿ ಸಾಗುವಂತೆ ಮಾಡಿ ಅವೈಜ್ಞಾನಿಕ ಕಾಮಗಾರಿ ನಡೆಸಿದ್ದು, ತ್ಯಾಜ್ಯ ನೀರು ಉಕ್ಕಿ ಹರಿಯುವಂತಾಗಿದ್ದು ಎಲ್ಲೆಡೆ ದುರ್ನಾಥ ಬೀರುತ್ತಾ ಸಾಂಕ್ರಾಮಿಕ ರೋಗದ ಭೀತಿ ಆವರಿಸುವಂತಾಗಿದೆ. ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಸಿ.ಸಿ ಕ್ಯಾಮರಾ ಅಳವಡಿಸಿ ಕಣ್ಗಾವಲು ಇಡುವ ಕೆಲಸವೂ ಅದೇಕೋ ವಿಳಂಬವಾಗುತ್ತಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ