Important
Trending

ಮನೆಯ ತೋಟದ ಬಳಿ ಕಾಣಿಸಿಕೊಂಡು ಆತಂಕ ಮೂಡಿಸಿದ್ದ ಬೃಹತ್ ಕಾಳಿಂಗ ಸರ್ಪ

ಅಂಕೋಲಾ: ಕನಕನಹಳ್ಳಿಯ ಮನೆಯೊಂದರ ತೋಟದ ಬಳಿ ಕಾಣಿಸಿಕೊಂಡು, ತೋಟದ ಮಾಲಕರು ಮತ್ತು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದ ಸುಮಾರು 12 ಅಡಿಗೂ ಹೆಚ್ಚು ಉದ್ದದ ಬೃಹತ್ ಕಾಳಿಂಗ ಸರ್ಪವನ್ನು ಸೆರೆಹಿಡಿದ ಉರಗ ಸಂರಕ್ಷಕ ಸೂರಜ್ ಶೆಟ್ಟಿ, ಸ್ಥಳೀಯರ ಆತಂಕ ದೂರ ಮಾಡಿದ್ದಾರೆ.

ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾ ಪಂ ವ್ಯಾಪ್ತಿಯ ಕನಕನಹಳ್ಳಿಯ ಸಂತೋಷ ಪಟಗಾರ ಎಂಬುವವರ ಮನೆಯ ತೋಟದ ಬಳಿ ಕಾಣಿಸಿಕೊಂಡು ಆತಂಕ ಮೂಡಿಸಿದ್ದ ಸುಮಾರು 12 ಅಡಿಗೂ ಹೆಚ್ಚು ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಸೆರೆಹಿಡಿಯುವ ಮೂಲಕ, ಹತ್ತಿರದ ಯಲ್ಲಾಪುರ – ಅರಬೈಲ್ ನ ಉರಗ ಸಂರಕ್ಷಕ ಸೂರಜ್ ಶೆಟ್ಟಿ, ಸ್ಥಳೀಯರ ಆತಂಕ ದೂರ ಮಾಡಿದ್ದಾರೆ.

ಕಳೆದ 3 – 4 ದಿನಗಳ ಹಿಂದೆ ಕನಕನಹಳ್ಳಿ, ಕಲ್ಲೇಶ್ವರ ಸುತ್ತಮುತ್ತಲಿನ ಪ್ರದೇಶದಲ್ಲಿ ಓಡಾಡುತ್ತಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪ ಸ್ಥಳೀಯರಲ್ಲಿ ಆತಂಕವನ್ನು ಉಂಟು ಮಾಡಿತ್ತು. ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದು, ಕಾಳಿಂಗನ ಸೆರೆಗೆ , ಹತ್ತಿರದ ಯಲ್ಲಾಪುರ – ಅರೆಬೈಲ್ ನ ಉರಗ ಸಂರಕ್ಷಕ ಸೂರಜ್ ಶೆಟ್ಟಿ ಅವರ ಸಹಕಾರ ಕೋರಲಾಗಿತ್ತು.

ಸ್ಥಳಕ್ಕೆ ಬಂದ ಸೂರಜ ಶೆಟ್ಟಿ ಕಾಳಿಂಗದ ರಕ್ಷಣಾ ಕಾರ್ಯಕ್ಕೆ ಮುಂದಾಗಿ, ಯಶಸ್ವಿ ಕಾರ್ಯಾಚರಣೆ ನಡೆಸಿ ಸ್ಥಳೀಯರ ಆತಂಕ ದೂರ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಬೇಸಿಗೆ ತಾಪಮಾನ ಬದಲಾವಣೆ ಮತ್ತಿತರ ಕಾರಣಗಳಿಂದ ಹಾವುಗಳು ಕಾಳಿಂಗ ಸರ್ಪಗಳು ಓಡಾಡುತ್ತಿರುತ್ತವೆ. ಸಾರ್ವಜನಿಕರು ಅನಗತ್ಯ ಆತಂಕ ಗೊಂಡು ಅದನ್ನು ಸಾಯಿಸಲು ಯತ್ನಿಸದೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ತಮ್ಮಂಥ ಉರಗ ರಕ್ಷಣಾ ತಂಡದವರನ್ನು ಕರೆಯಿಸಿ, ಅವುಗಳು ಬದುಕಲು ಅವಕಾಶ ಮಾಡಿ ಕೊಡಬೇಕೆಂದರು.

ಸ್ಥಳೀಯ ಅರಣ್ಯ ರಕ್ಷಕ ಗೋಪಾಲಕೃಷ್ಣ ನಾಯಕ, ಪ್ರಮುಖರಾದ ಸತೀಶ ಭಟ್ಟ, ಬೊಮ್ಮಯ್ಯ ನಾಯ್ಕ, ಪ್ರಕಾಶ ನಾಯ್ಕ, ರಘುನಾಥ ನಾಯ್ಕ ಹಾಗೂ ಸ್ಥಳೀಯರು ಸಹಕರಿಸಿದರು . ನಂತರ ಕಾಳಿಂಗ ಸರ್ಪವನ್ನು ಸಾಗಿಸಿ ಸುರಕ್ಷಿತ ಅರಣ್ಯ ಪ್ರದೇಶದಲ್ಲಿ ಬಿಟ್ಟು ಬರಲಾಯಿತು. ಉರಗ ಸಂರಕ್ಷಕನ ಈ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ಮಾತುಗಳು ಕೇಳಿ ಬಂದಿವೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button