ಪ್ರೀತಿಯಿಂದ ಕೆಲಸ ಮಾಡಲು ಆಗುವುದಾದರೆ ಇರಿ: ಇಲ್ಲದಿದ್ದರೆ ನಾನೇ ಟ್ರಾನ್ಸಪರ್ ಮಾಡಿಸುತ್ತೇನೆ: ಸಚಿವರ ಖಡಕ್ ಎಚ್ಚರಿಕೆ

ಹೊನ್ನಾವರ: ನಮ್ಮನ್ನು ಆಯ್ಕೆ ಮಾಡಿರುವುದು ಕೆಲಸ ಮಾಡಿಕೊಡಲು, ನಿಮ್ಮದೇ ಆದ ವ್ಯವಸ್ಥೆ ಮಾಡಿಕೊಳ್ಳುವುದಕ್ಕಲ್ಲ. ನಿಮ್ಮ ವರ್ತನೆ ನಮ್ಮ ಗಮನಕ್ಕೂ, ಜನಸಾಮಾನ್ಯರ ಗಮನಕ್ಕೂ ಬಂದಿದೆ. ಪ್ರೀತಿಯಿಂದ ಕೆಲಸ ಮಾಡಲು ಆಗುವುದಾದರೆ ಇರಿ, ಇಲ್ಲದಿದ್ದರೆ ನಾನೇ ಟ್ರಾನ್ಸಪರ್ ಮಾಡಿಸುತ್ತೇನೆ ಎಂದು ಅಧಿಕಾರಿ ವರ್ಗಕ್ಕೆ ತ್ರೈಮಾಸಿಕ ಸಭೆಯಲ್ಲಿ ಸಚಿವರಾದ ಮಂಕಾಳ ವೈದ್ಯ ರವರು ಖಡಕ್ ಎಚ್ಚರಿಕೆ ನೀಡಿದರು.

ತಾಲೂಕಾ ಪಂಚಾಯತ ಸಭಾಭವನದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿಮ್ಮ ಕೆಲಸ ನೀವೆ ಮಾಡಬೇಕು ನಾವು ಆದೇಶ ಮಾಡಬಹುದು, ನಿಮ್ಮ ಕೆಲಸ ಮಾಡದಿದ್ದರೆ ಯಾರೇ ಹೇಳಿದರೂ ಜಿಲ್ಲೆಯಲ್ಲಿ ಇಟ್ಟುಕೊಳ್ಳುವುದಿಲ್ಲ. ಅನುದಾನ ತರುವುದು ನಮ್ಮ ಕೆಲಸ, ಜನರ ಕೆಲಸ ಮಾಡಿಕೊಡುವುದು ನಿಮ್ಮ ಕೆಲಸ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು. ಬಂದ ಅನುದಾನ ಖಾಲಿ ಮಾಡದೇ ರಾಜಕಾರಣ ಮಾಡುತ್ತಿರುವ ಇಲಾಖೆಯು ಇದೆ. ರಾಜಕಾರಣ ಮಾಡಲು ನಾವಿದ್ದೇನೆ ಎಂದು ಚಾಟೀ ಬೀಸಿದರು.

ಆರೋಗ್ಯ ಇಲಾಖೆಯ ಚರ್ಚೆಯಡಿ ಡೆಂಗ್ಯೂ ಗ್ರಾಮೀಣ ಭಾಗದಲ್ಲಿ ಅದರಲ್ಲೂ ಹೆಚ್ಚಿನ ಫಾರೆಸ್ಟ ಪ್ರದೇಶದಲ್ಲಿ ಕಂಡುಬರುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದರು. ಜಾಗೃತಿ ಮೂಡಿಸುವಂತೆ ಸೂಚಿಸಿದರು. ಗ್ರಾಮೀಣ ಮಟ್ಟದಲ್ಲಿ ಕಸ ವಿಲೇವಾರಿ ವಾಹನದ ಮೂಲಕ ಜಾಗೃತಿ ಮೂಡಿಸಲು ಹಲವು ವಾಹನಗಳಿಗೆ ಚಾಲಕರೆ ಇಲ್ಲ. ಮಂಕಿ ಪ.ಪಂ. ವ್ಯಾಪ್ತಿಗೆ ಎಡು ವರ್ಷದ ಹಿಂದೆ ವಾಹನ ಬಂದರು ಚಾಲಕರಿಲ್ಲ. ಇಂತಹ ವ್ಯವಸ್ಥೆಯಿಂದ ನಾವು ಹೊರಬರಬೇಕಿದೆ. ಗ್ರಾ.ಪಂ. ಮಟ್ಟದಲ್ಲಿ ಫಾಗಿಂಗ್ ವ್ಯವಸ್ಥೆ ಕಲ್ಪಿಸಲು ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಸಲಹೆ ನೀಡಿದರು.

ಶಿಕ್ಷಣ ಇಲಾಖೆಗೆ 36 ಲಕ್ಷ ಅನುದಾನ ಬಂದಿದ್ದು, ಹೆಚ್ಚುವರಿಯಾಗಿ ತುರ್ತು ರಿಪೇರಿಗೆ ಹಣವು ಕೂಡಾ ಇದ್ದು ಇದನ್ನು ವಿನಿಯೋಗಿಸಿಕೊಳ್ಳಲಾಗುವುದು ಎಂದು ಬಿಇಒ ಜಿಎಸ್ ನಾಯ್ಕ ಸಭೆಯಲ್ಲಿ ಹೇಳಿದರು.ಶಿಕ್ಷಣ,ಆರೋಗ್ಯಕ್ಕೆ ಯಾವುದೇ ಕೊರತೆ ಆಗದಂತೆ ಎಚ್ಚರ ವಹಿಸಿ ಎಂದು ಸಚಿವರು ಸೂಚಿಸಿದರು. ಕೃಷಿ ಇಲಾಖೆ ಚರ್ಚೆಯಲ್ಲಿ,ಗೊಬ್ಬರದ ಕುರಿತು ರಾಜ್ಯದಲ್ಲಿ ಈ ಹಿಂದೆ ಗೋಲಿಬಾರ್ ನಡೆದ ಉದಾಹರಣೆ ಇದ್ದು, ಯಾವುದೇ ಗೊಬ್ಬರ ಹಾಗೂ ಬೀಜದ ಕೊರತೆಯಾಗದಂತೆ ನೋಡಿಕೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಆರು ವರ್ಷದ ಹಿಂದಿನ ರೂಟ್ ಮ್ಯಾಪ್ ನಂತೆ ಸಾರಿಗೆ ಬಸ್ ಸಂಚರಿಸಬೇಕು. ಬಸ್ ಹಾಗೂ ತಾತ್ಕಾಲಿಕ ಡ್ರೈವರ್ ನೇಮಕವಾಗಿದೆ.

ಶಾಲಾ ವಿದ್ಯಾರ್ಥಿಗಳ ಸಮಸ್ಯೆ ಆಗದ ಇರುವಂತೆ ಬಸ್ ಬಿಡುವಂತೆ ಆದೇಶಿಸಿದರು. ನಿಮ್ಮ ಇಲಾಖೆ ನಮಗೆ ದೊಡ್ಡ ಸಮಸ್ಯೆ ಆಗಿ ತಲೆ ಬಿಸಿ ಉಂಟು ಮಾಡಿದೆ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಸಕಾಲಕ್ಕೆ ಅರ್ಜಿ ವಿಲೇವಾರಿ ಆಗಿ ಫಲಾನುಭವಿಗಳಿಗೆ ಯೋಜನೆಯ ಪ್ರಯೋಜನ ಸಿಗುವಂತೆ ಆಗಬೇಕು ಎಂದು ಎಚ್ಚರಿಸಿದರು.

ವಿವಿಧ ಇಲಾಖೆ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಸರಕಾರಿ ಫ್ರೌಡಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಪ್ರಥಮ, ದ್ವಿತೀಯ, ಹಾಗೂ ತೃತೀಯ ಅಂಕಗಳಿಸಿದ ತಾಲೂಕಿನ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಭಟ್ಕಳ ಉಪವಿಭಾಗಧಿಕಾರಿಗಳಾದ ಡಾ.ನಯನಾ ಎಸ್, ಜಿ.ಪಂ.ಯೋಜನಾಧಿಕಾರಿಗಳು ವಿನೋಧ ಅಣ್ವೇಕರ್, ತಹಶೀಲ್ದಾರ ರವಿರಾಜ ದಿಕ್ಷೀತ್, ತಾಪಂ ಬಿ. ಇ.ಓ ಜಿ.ಎಸ್.ನಾಯ್ಕ ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ

Exit mobile version