ಹೆಸ್ಕಾಂ ಇಲಾಖೆ ಬಗ್ಗೆ ತುಂಬಾ ದೂರುಗಳು ಬರುತ್ತಿವೆ: ಶಾಸಕ ದಿನಕರ ಶೆಟ್ಟಿ ಅಸಮಾಧಾನ : ಜನಸ್ಪಂದನಾ ಸಭೆಯಲ್ಲಿ ಅಧಿಕಾರಿಗಳಿಗೆ ತರಾಟೆ

ಕುಮಟಾ: ತಾಲೂಕಾ ಆಡಳಿತ, ತಾಲೂಕಾ ಪಂಚಾಯತ ಹಾಗೂ ಪುರಸಭೆ ಕುಮಟಾ ರವರ ಆಶ್ರಯದಲ್ಲಿ ಹಾಗೂ ತಾಲೂಕಿನ ಎಲ್ಲಾ ಇಲಾಖೆಗಳ ಸಹಯೋಗದೊಂದಿಗೆ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರಶೆಟ್ಟಿಯವರ ಅಧ್ಯಕ್ಷತೆಯಲ್ಲಿ ತಾಲೂಕಾ ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಕುಮಟಾದ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರಶೆಟ್ಟಿಯವರು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.

ನಂತರ ಕೃಷಿ ಚಟುವಟಿಕೆ ವೇಳೆ ಆಕಸ್ಮಿಕವಾಗಿ ಮರಣ ಹೊಂದಿದ ಮೃತರ ಕುಟುಂಬಕ್ಕೆ ತಲಾ ಎರಡು ಲಕ್ಷ ರೂ ಗಳನ್ನು ಕ್ರಷಿ ಇಲಾಖೆಯಿಂದ ನೀಡಲಾಯಿತು. ನಂತರ ನಡೆದ ಸಭೆಯಲ್ಲಿ ಹೆಸ್ಕಾಂ ಇಲಾಖೆಯ ಕುರಿತು ಚರ್ಚೆಗಳು ನಡೆದು ಇಲಾಖೆಯ ವೈಪಲ್ಯದ ಕುರಿತು ಅನೇಕ ದೂರುಗಳು ಕೇಳಿ ಬಂದವು. ಈ ವೇಳೆ ಶಾಸಕರು ಹೆಸ್ಕಾಂ ಇಲಾಖೆಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಜಂಗಲ್ ಕಟಿಂಗ್ ಮಾಡದೆ ಇರುವುದೇ ಈ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣವಾಗಿದ್ದು, ಪ್ರತಿಯೊಬ್ಬರು ಕೂಡ ನಿಮ್ಮ ಇಲಾಖೆಯ ಬಗ್ಗೆ ದೂರನ್ನು ನಿಡುತ್ತಿದ್ದಾರೆ ಎಂದು ತಿಳಿಸಿ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸುವಂತೆ ಎಚ್ಚರಿಕೆ ನೀಡಿದರು.

ಕುಮಟಾ ಸರಕಾರಿ ಆಸ್ಪತ್ತೆçಯಲ್ಲಿ ರೋಟರಿಯವರು ಕೋಟ್ಯಾಂತರ ರೂ ಉಪಕರಣಗಳನ್ನು ನೀಡಿದರೂ ಸಹ ಉಪಯೋಗ ಆಗುತ್ತಿಲ್ಲ. ಆಸ್ಪತ್ರೆಯಲ್ಲಿ ಲ್ಯಾಬ್‌ನ ಎಲ್ಲಾ ಉಪಕರಣಗಳಿದ್ದರೂ ಟೆಕ್‌ನಿಶಿಯನ್ ಇಲ್ಲದೆ ತೊಂದರೆ ಆಗುತ್ತಿದೆ. ಸರಿಯಾಗಿ ವೈದ್ಯರು ಲಭ್ಯರಿರುವುದಿಲ್ಲ ಇದೆಲ್ಲವುದರ ಬಗ್ಗೆ ಗಮನ ಹರಿಸಿ ಸಮಸ್ಯೆಗಳನ್ನು ಬಗೆಹರಿಸುವಂತೆ ಗಣೇಶ ಬಟ್‌ರವರು ಕೇಳಿಕೊಂಡರು. ಇದಕ್ಕೆ ಉತ್ತರಿಸಿದ ಶಾಸಕರು ನಮ್ಮ ಆಸ್ಪತ್ರೆಗೆ ವೈದ್ಯರುಗಳು ಬರಲು ಸಿದ್ದರಿಲ್ಲ. ಇದರ ಬಗ್ಗೆ ಬಹಳಷ್ಟು ಪ್ರಯತ್ನವನ್ನು ಮಾಡುತ್ತಿದ್ದೇನೆ ಎಂದು ತಿಳಿಸಿದರು.

ದೀವಗಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಶಾಲಾ ಕಾಲೆಜು ಮಕ್ಕಳಿಗೆ ಶಿರಗುಂಜಿ ಮಳವಳ್ಳಿಗೆ 3:45 ಕ್ಕೆ ಬಸ್ ಬೀಡುವಂತೆ ತಿಳಿಸಿದಾಗ ಅದಕ್ಕೆ ಉತ್ತರಿಸಿದ ಸಾರಿಗೆ ಇಲಾಖೆಯ ಅಧಿಕಾರಿಗಳು ಶಿರಸಿ ವಿಭಾಗದ ಕಛೇರಿಯಿಂದ ಅನುಮತಿ ಬಂದಿದ್ದು, ನಾಳೆ ಇಂದಲೇ ಬಸ್ ಬಿಡುವ ಬಗ್ಗೆ ತಿಳಿಸಿದರು. ತೊರ್ಕೆ ಗ್ರಾಮ ಪಂಚಾಯತ ಸದಸ್ಯರಾದ ಸವಿತಾ ಹರಿಕಾಂತ ಅವರು ದಾರಿದೀಪದ ಬಗ್ಗೆ 10 ಕಂಬಗಳನ್ನು ಒದಗಿಸಿಕೊಡುವಂತೆ ಕೇಳಿದಾಗ ಪಂಚಾಯತ ವ್ಯಾಪ್ತಿಯಾಗಿದ್ದರಿಂದ ಗಾಂ.ಪoಚಾಯತದವರೇ ಈ ಕೆಲಸವನ್ನು ಮಾಡಬೇಕಾಗುತ್ತದೆ ಎಂದು ಹೆಸ್ಕಾಂ ಅಧಿಕಾರಿಗಳಾದ ರಾಜೇಶ ಮಡಿವಾಳ ತಿಳಿಸಿದರು. ನಂತರ ಸಲ್ಲಿಸಿದ್ದ ಅರ್ಜಿಗಳ ಸಮಸ್ಯೆಗಳನ್ನು ಕುರಿತು ಚರ್ಚೆಗಳು ನಡೆದವು.

ಸಭೆಯಲ್ಲಿ ತಹಶೀಲ್ದಾರರಾದ ಪ್ರವೀಣ ಕರಾಂಡೆ, ತಾಲೂಕಾ ಪಂಚಾಯತ ಆಡಳಿತಾಧಿಕಾರಿಗಳಾದ ಆರ್.ಎಲ್.ಭಟ್ ಪುರಸಭಾ ಮುಖ್ಯಾಧಿಕಾರಿಗಳಾದ ವಿದ್ಯಾದರ ಕಲಾದಗಿ, ಸಿ.ಪಿ.ಆಯ್ ತಿಮ್ಮಪ್ಪ ನಾಯ್ಕ್ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ನಾಗೇಶ ದೀವಗಿ, ಕುಮಟಾ

Exit mobile version