ಶರಾವತಿ ನದಿ ತೀರದ ಜನರಿಗೆ ಎರಡನೇ ಎಚ್ಚರಿಕೆ: ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಮಾಹಿತಿ

ಹೊನ್ನಾವರ: ಲಿಂಗನಮಕ್ಕಿ ಜಲಾಶಯದ ಪ್ರದೇಶದಲ್ಲಿ ಸತತವಾಗಿ ಮಳೆ ಪ್ರಮಾಣ ಜಾಸ್ತಿಯಾಗಿದ್ದು, ನೀರಿನ ಒಳಹರಿವು ಪ್ರಮಾಣದ ಮಟ್ಟ ದಿನೇ ದಿನೇ ಜಾಸ್ತಿಯಾಗಿರುವ ಪರಿಣಾಮ ಕೆಪಿಸಿಎಲ್ ಎರಡನೇ ಮುನ್ನೆಚ್ಚರಿಕೆಯ ಪತ್ರವನ್ನು ಹೊರಡಿಸಿದೆ. ಲಿಂಗನಮಕ್ಕಿ ಜಲಾಶಯದ ಭಾಗಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಆಗುತ್ತಿರುವ ಪರಿಣಾಮ ಸಾಕಷ್ಟು ಪ್ರಮಾಣದಲ್ಲಿ ಲಿಂಗನಮಕ್ಕಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟವು ದಿನದಿನೇ ಏರುತ್ತಿದೆ.

ಜಲಾಶಯದ ಗರಿಷ್ಠ ಮಟ್ಟವು 1819.00 ಅಡಿಗಳಾಗಿದ್ದು, ಇಂದು 27/07/2024 ರ ಬೆಳಗ್ಗೆ 8.00 ಗಂಟೆಗೆ ಜಲಾಶಯದ ನೀರಿನ ಮಟ್ಟ 1807.00 ಅಡಿಗಳಾಗಿರುತ್ತದೆ. ಸುಮಾರು 75 ಸಾವಿರ ಕ್ಯೂಸೆಕ್ ಗಳಿಗಿಂತಲೂ ಹೆಚ್ಚಿನ ಪ್ರಮಾಣದ ನೀರು ಲಿಂಗನಮಕ್ಕಿ ಜಲಾಶಯಕ್ಕೆ ಹರಿದು ಬರುತ್ತಿದ್ದು, ಇದೇ ರೀತಿಯಲ್ಲಿ ಜಲಾಶಯಕ್ಕೆ ಬರುವ ನೀರಿನ ಹರಿವು ಮುಂದುವರೆದ ಪಕ್ಷದಲ್ಲಿ ಜಲಾಶಯವು ಶೀಘ್ರದಲ್ಲಿ ಗರಿಷ್ಠ ಮಟ್ಟವನ್ನು ತಲುಪುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಅಣೆಕಟ್ಟೆಯ ಸುರಕ್ಷತಾ ದೃಷ್ಠಿಯಿಂದ ಹೆಚ್ಚುವರಿ ನೀರನ್ನು ಜಲಾಶಯದಿಂದ ಯಾವುದೇ ಸಮಯದಲ್ಲಿ ಹೊರಬಿಡಲಾಗುವುದು ಎಂದು ಎರಡನೇ ಮುನ್ನೆಚ್ಚರಿಕೆಯ ಪತ್ರವನ್ನು ಕೆಪಿಸಿಎಲ್ ಹೊರಡಿಸಿದೆ.

ಲಿಂಗನಮಕ್ಕಿ ಜಲಾಶಯದಿಂದ ಬಿಟ್ಟ ಎಲ್ಲಾ ನೀರು ಗೇರುಸೋಪ್ಪಾ ಜಲಾಶಯಕ್ಕೆ ಹರಿದು ಬರುತ್ತದೆ. ಲಿಂಗನಮಕ್ಕಿ ಜಲಾಶಯದಿಂದ ಹರಿಬಿಟ್ಟ ಅಷ್ಟೆ ಪ್ರಮಾಣದ ನೀರನ್ನು ಗೇರುಸೋಪ್ಪಾ ಜಲಾಶಯದಲ್ಲಿ ಸಂಗ್ರಹಿಸುವ ಅವಕಾಶವಿರುವುದಿಲ್ಲ. ಆದ್ದರಿಂದ ಆಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ ನೀರನ್ನು ಹೊರಬಿಡಲಾಗುತ್ತದೆ. ಹೀಗಾಗಿ ಅಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ನದಿಯ ಪಾತ್ರದುದ್ದಕ್ಕೂ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಜನ, ಜಾನುವಾರು ವಗೈರೆಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿಕೊಳ್ಳಬೇಕೆoದು ಎರಡನೇ ಮುನ್ನೆಚ್ಚರಿಕೆಯ ಸೂಚನೆಯನ್ನು ನೀಡಿದೆ.

ವಿಸ್ಮಯ ನ್ಯೂಸ್, ವಿವೇಕ್ ಶೇಟ್ ಹೊನ್ನಾವರ

Exit mobile version