Follow Us On

WhatsApp Group
Big News
Trending

ಗುಡ್ಡ ಕುಸಿದು ವಾರ ಆಯ್ತು: ಇನ್ನೂ ನಿದ್ದೆಯಿಂದ ಎದ್ದಿಲ್ಲ ಆಡಳಿತ

5 ಕಿಲೋಮೀಟರ್ ನಡೆದುಕೊಂಡೇ ಪೇಟೆಗೆ ಬರಬೇಕಾದ ದುಸ್ಥಿತಿ

ಭಟ್ಕಳ: ತಾಲೂಕಿನ ತಲಗೋಡ ಗೊಂಡರಕೇರಿಯಲ್ಲಿ ಗುಡ್ಡ ಕುಸಿದು ಅದಾಗಲೇ ವಾರ ಕಳೆದಿದೆ. ಗುಡ್ಡ ಕುಸಿತದ ಪರಿಣಾಮ ರಸ್ತೆಯ ಅಂಚಿನ ತಡೆಗೋಡೆ ಮುರಿದು ಬಿದ್ದಿದೆ. ಇದರಿಂದಾಗ ಸಂಭಾವ್ಯ ಹಾನಿಯನ್ನು ತಪ್ಪಿಸುವ ಸಲುವಾಗಿ ಸ್ಥಳಿಯಾಡಳಿತ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಿ ಸ್ಥಳಿಯರ ಓಡಾಟಕ್ಕೆ ಸಂಪೂರ್ಣ ನಿರ್ಬಂಧ ಹೇರಿದೆ.

ಈ ಭಾಗದಲ್ಲಿ ನೂರಾರು ಮನೆಗಳಿದ್ದು ಶಾಲೆ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಂದ ಹಿಡಿದು ಪ್ರತಿಯೊಬ್ಬರು ಪೇಟೆಗಳಿಗೆ ತೆರಳಬೇಕಾದಾಗ ಆಟೋ ರಿಕ್ಷಾಗಳು ಹತ್ತಿಕೊಂಡು ಹೋಗಬೇಕಾದರೆ ಬಂದರ್ ನಲ್ಲಿರುವ ಆಟೋ ನಿಲ್ದಾಣಕ್ಕೆ ಬಂದು ತೆರಳಬೇಕಾಗುತ್ತದೆ. ನಿಗದಿಪಡಿಸಿದ ಬದಲಿ ಮಾರ್ಗವಾದ ಮುಗ್ದ ಕಾಲೋನಿ ರಸ್ತೆಯು ನಿರ್ಜರ ರಸ್ತೆಯಾಗಿದ್ದು ಇಲ್ಲಿ ಓಡಾಟಕ್ಕೆ ಯಾವುದೇ ಆಟೋ ಮುಂತಾದ ವಾಹನಗಳು ಸಿಗುವುದಿಲ್ಲ. ಖಾಸಗಿ ವಾಹನ ಇಲ್ಲದಿದ್ದವರು ಸುಮಾರು 5 ಕಿ.ಮೀ ಅಂತರವನ್ನು ನಡೆದುಕೊಂಡೆ ಭಟ್ಕಳದ ಪೇಟೆ ಕಡೆಗೆ ತಲುಪಬೇಕಾದ ದುಸ್ಥಿತಿ ಎದುರಾಗಿದೆ.

ಗುಡ್ಡ ಕುಸಿದಂತ ಪ್ರಾಕೃತಿ ವಿಕೋಪ ಸಂಭವಿಸಿದಾಗ ತ್ವರಿತವಾಗಿ ಕಾರ್ಯಾಚರಣೆ ನಡೆಸಿ ಜನರಿಗೆ ಅನುಕೂಲ ಮಾಡಿಕೊಡಬೇಕಾದ ಅಧಿಕಾರಿಗಳು ತಮ್ಮದೇ ಆದ ಅನೇಕ ಕಾರಣ ನೀಡಿ ಕಾರ್ಯಾಚರಣೆಯನ್ನು ಮುಂದುಡುತ್ತಿದ್ದಾರೆ. ಇದರಿಂದಾಗಿ ಸ್ಥಳಿಯರಿಗೆ ಅನಾನುಕೂಲವಾಗಿದ್ದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅದರಲ್ಲೂ ಗುಡ್ಡ ಕುಸಿತ ಸಂಭವಿಸಿ ಜಾಗದಲ್ಲಿ ಬ್ಯಾರಿಕೇಡ್ ಹಾಕಿ ಸುಮ್ಮನಾದರೆ ನಾವು ಎಲ್ಲಿಯ ತನಕ ಸಣ್ಣ ಸಣ್ಣ ಕೆಲಸಗಳಿಗೂ ಕೊಂಕಣ ಸುತ್ತಿ ಮೈಲಾರಕ್ಕೆ ಸಾಗುವುದು ಎಂಬುದು ಸ್ಥಳಿಯರ ಪ್ರಶ್ನೆಯಾಗಿದೆ. ಆದರಿಂದ ಜನಪ್ರತಿನಿಧಿಗಳು ಆದಷ್ಟು ಬೇಗ ಸ್ಥಳಕ್ಕೆ ಬೇಟಿ ನೀಡಿ ಈ ಕುರಿತಾಗಿ ಪರಿಶೀಲನೆ ನಡೆಸಿ ತ್ವರಿತ ಪರಿಹಾರ ಒದಗಿಸಿಕೊಡಬೇಕಾಗಿದೆ.

ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ

Back to top button