ಉತ್ತರಕನ್ನಡ ಜಿಲ್ಲೆಯ 429 ಕಡೆ ಗುಡ್ಡಕುಸಿತದ ಅಪಾಯ: ವರದಿ ನೀಡಿದ್ದಾರೆ ತಜ್ಞರು

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಗುಡ್ಡ ಕುಸಿತವಾಗುತ್ತಿರುವ ಹಿನ್ನೆಯಲ್ಲಿ ಅದರಲ್ಲೂ ಶಿರೂರು ಗುಡ್ಡ ಕುಸಿತದ ಪ್ರಕರಣವಾದ ಬಳಿಕ ಉತ್ತರಕನ್ನಡ ಜಿಲ್ಲಾಡಳಿತ ವಿವಿಧ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಕುಸಿತವಾದ ಭಾಗದಲ್ಲಿ ವಾಹನ ಸಂಚಾರಕ್ಕೆ ಅನುಮತಿ ನೀಡಲಿದ್ದು, ಹಲವು ನಿಯಮಗಳನ್ನು ಜಾರಿಗೊಳಿಸಿದೆ.

ಗೋವಾದಿಂದ ಕುಂದಾಪುರದವರೆಗೂ ಹೆದ್ದಾರಿ ಅಂಚಿನ ಪ್ರದೇಶವನ್ನು ತಜ್ಞರು ಪರಿಶೀಲಿಸಿ ಗುಡ್ಡ ಕುಸಿತ ಸಾಧ್ಯತೆಗಳಿರುವ ಜಾಗವನ್ನು ಪಟ್ಟಿ ಮಾಡಿದ್ದಾರೆ. ಅಲ್ಲಿಯೂ ಸಹ ಮುನ್ನಚ್ಚರಿಕೆ ವಹಿಸಲು ಜಿಲ್ಲಾಡಳಿತ ತಯಾರಿ ನಡೆಸಿದೆ.

ಪ್ರಸ್ತುತ ಶಿರೂರಿನಲ್ಲಿ ಸಿಬ್ಬಂದಿ ಕಣ್ಣಾವಲು ಇರಿಸಿ ವಾಹನ ಓಡಾಟಕ್ಕೆ ಅವಕಾಶ ಮಾಡಿಕೊಡಲಿದ್ದಾರೆ. ಈ ಭಾಗದಲ್ಲಿ 20ಕಿಮೀ ವೇಗದಲ್ಲಿ ವಾಹನ ಸಂಚಾರಕ್ಕೆ ನಿರ್ಣಯಿಸಲಾಗಿದ್ದು, ನಿಯಮ ಮೀರದಂತೆ ಸೂಚಿಸಲಾಗಿದೆ. ತಜ್ಞರ ಅಭಿಪ್ರಾಯದಂತೆ ಗುಡ್ಡದ ನೀರು ಬೇರೆ ಬೇರೆ ಕಡೆ ಹರಿದು ಹೋಗುವಂತೆ ಮಾಡುವ ಚಿಂತನೆಯಿದೆ. ಸ್ಥಳದಲ್ಲಿರುವ ಸಿಬ್ಬಂದಿಗಳು ಮತ್ತೆ ಗುಡ್ಡ ಕುಸಿತದ ಅಪಾಯದ ಮುನ್ಸೂಚನೆ ದೊರೆತ ತಕ್ಷಣ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಅಲ್ಲಿ ವಾಹನ ಸಂಚಾರ ತಡೆಹಿಡಿಯಬೇಕು ಎಂದು ಸೂಚಿಸಲಾಗಿದೆ. ಇದರೊಂದಿಗೆ ಗುಡ್ಡ ಕುಸಿತದ ಅಪಾಯವಿರುವ 429 ಕಡೆ ಕಟ್ಟೆಚ್ಚರ ವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳಾದ ಲಕ್ಷ್ಮೀಪ್ರಿಯಾ ಅವರು ತಿಳಿಸಿದ್ದಾರೆ.

ಬ್ಯೂರೋ ರಿಪೊರ್ಟ, ವಿಸ್ಮಯ ನ್ಯೂಸ್

Exit mobile version