ಕುಮಟಾ: ಈಗಾಗಲೇ ಅಂಕೋಲಾ ಶಿರೂರು ಮತ್ತು ಕೇರಳದಲ್ಲಿ ನಡೆದ ಗುಡ್ಡಕುಸಿತ ಕಣ್ಮುಂದೆ ಇದೆ. ಈ ಜಾಗದಲ್ಲಿ ಕೂಡಾ ಬೃಹತ್ ಪ್ರಮಾಣದಲ್ಲಿ ಗುಡ್ಡಕುಸಿಯುವ ಭೀತಿ ಇದೆ. ಈ ಗುಡ್ಡವು ಯಾವ ಸಮಯದಲ್ಲಾದರೂ ಪೂರ್ತಿಯಾಗಿ ಕುಸಿದು ಹೆದ್ದಾರಿಗೆ ಬಂದೆರಗುವ ಸಾಧ್ಯತೆಯಿದೆ.
ಹೌದು, ಐಆರ್‌ಬಿಯು ಅವೈಜ್ಞಾನಿಕ ಕಾಮಗಾರಿ ನಡೆಸಿದ ಪರಿಣಾಮ ಚತುಷ್ಪತದುದ್ದಕ್ಕೂ ಅನಾಹುತಗಳು ಹಾಗು ಹಲವು ಸಾವು ನೋವುಗಳಾಗಿರುವುದಕ್ಕೆ ಸಾರ್ವಜನಿಕರು ಐಆರ್‌ಬಿಯ ವಿರುದ್ದ ಹಿಡಿಶಾಪ ಹಾಕುತ್ತಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಖೈರಿಯಲ್ಲಿಯೂ ಸಹ ಹೆದ್ದಾರಿಗೆ ಹೊಂದಿಕೊoಡಿರುವ ಗುಡ್ಡ ನಿಧಾನವಾಗಿ ಕುಸಿಯುತ್ತಿದೆ. ಗುಡ್ಡಕುಸಿದವಾದ ಪಕ್ಕದಲ್ಲಿಯೇ ರಸ್ತೆಯಿದ್ದು ದಿನನಿತ್ಯ ವಾಹನಗಳು ಸಂಚರಿಸುತ್ತಲೇ ಇರುತ್ತವೆ. ಹೀಗಾಗಿ ಇದು ಅಪಾಯಕ್ಕೆ ಆಹ್ವಾನ ನೀಡಿದಂತಿದೆ.
ಇಲ್ಲಿ ಗುಡ್ಡಕುಸಿಯುತ್ತಿದ್ದರೂ ಯಾವುದೇ ಸುರಕ್ಷತಾ ಕ್ರಮಕೈಗೊಂಡಿಲ್ಲ. ಈ ಗುಡ್ಡಕ್ಕೆ ಹೊಂದಿಕೊoಡಿರುವ ರಸ್ತೆಯಲ್ಲಿ ಸಂಚಾರವನ್ನು ಮೊದಲೇ ನಿಷೇಧಿಸಬೇಕಿದೆ. ಇಲ್ಲದಿದ್ರೆ ಅನಾಹುತ ತಪ್ಪಿದ್ದಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದು, ಈ ಕುರಿತು ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕಿದೆ. ಗುಡ್ಡಕುಸಿತದಿಂದ ಅನಾಹುತ ಸಂಭವಿಸುವ ಮೊದಲು ಎಚ್ಚತ್ತೆಕೊಳ್ಳಬೇಕಿದೆ.
ಈ ಭಾಗದಲ್ಲಿ ಇನ್ನಷ್ಟು ಗುಡ್ಡಕುಸಿತವಾಗಿ ಸಮಸ್ಯೆಗಳು ಆಗದಂತೆ ನೋಡಿಕೊಳ್ಳಬೇಕಿದೆ. ಈ ಕುರಿತು ಸಾಮಾಜಿಕ ಹೋರಾಟಗಾರರಾದ ಆರ್ ಕೆ ಅಂಬಿಗ ಮಾತನಾಡಿ, ಕುಮಟಾ ತಾಲೂಕಿನ ಖೈರಿಯಲ್ಲಿ ಗುಡ್ಡಕುಸಿತವಾಗಿದ್ದು, ಐಆರ್‌ಬಿಯವರ ಕಾಮಗಾರಿಯಿಂದಾಗಿ ಹೆದ್ದಾರಿಗಳಲ್ಲಿ ಗುಡ್ಡವು ಕುಸಿದು ನಿಲ್ಲುವಂತಹ ಪರಿಸ್ಥಿತಿಯನ್ನು ನಾವು ಕಾಣುತ್ತಿದ್ದೇವೆ. ಮಳೆಗಾಲದ ಮುಂಚಿತವಾಗಿ ಈ ಭಾಗದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಾಗಿತ್ತು. ಈಗಲಾದರೂ ಕೂಡ ಇಂತಹ ಸ್ಥಳಗಳನ್ನು ಗುರುತಿಸಿ ಮುಂದೆ ಇಂತಹ ಘಟನೆಗಳು ಆಗದಂತೆ ಅತಿ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ವಿಸ್ಮಯ ನ್ಯೂಸ್, ನಾಗೇಶ ದೀವಗಿ, ಕುಮಟಾ