ಅಂಕೋಲಾ : ತಾಲೂಕಿನ ನ್ಯಾಯಾಲಯದಲ್ಲಿ ಜೆ ಎಂ ಎಫ್ ಸಿ ಮತ್ತು ಸಿವಿಲ್ ನ್ಯಾಯಾಧೀಶರಾಗಿ ಸೇವೆ ನೀಡಿ,ಈಗ ಹಿರಿಯ ಸಿವಿಲ್ ನ್ಯಾಯಾಧೀಶರಾಗಿ ಪದೋನ್ನತಿ ಹೊಂದಿ, ವರ್ಗಾವಣೆ ಗೊಳ್ಳುತ್ತಿರುವ ಪ್ರಶಾಂತ ಬಾದವಾಡಗಿ ಇವರನ್ನು,ಅಂಕೋಲಾ ನ್ಯಾಯಾಲಯ ಮತ್ತು ವಕೀಲರ ಸಂಘದ ಪರವಾಗಿ ಸನ್ಮಾನಿಸಿ ಗೌರವಿಸಿ,ಬೀಳ್ಕೊಡಲಾಯಿತು.
2022 ನೇ ಸಾಲಿನ ಮೇ ತಿಂಗಳಿನಲ್ಲಿ ಇಲ್ಲಿನ ಜೆ. ಎಂ ಎಫ್ ಸಿ ಮತ್ತು ಸಿ ವಿಲ್ ನ್ಯಾಯಾಧೀಶರಾಗಿ ಸೇವೆಗೆ ಹಾಜರಾಗಿದ್ದ ಪ್ರಶಾಂತ ಬಾದವಾಡಗಿ ಇವರು, ನ್ಯಾಯಾಲಯದಲ್ಲಿ ಬಾಕಿ ಇರುವ ಹಳೆಯ ಕೇಸುಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ವಿಶೇಷ ಕರ್ತವ್ಯ ನಿರ್ವಹಿಸಿದ್ದರು.ಈ ವೇಳೆ ಕೆಲ ವಕೀಲರು ಸೇರಿದಂತೆ ಕೆಲ ಕಕ್ಷಿದಾರರಿಗೆ ಮತ್ತು ಎದುರುದಾರರಿಗೆ ನಿಷ್ಟುರ ಎನಿಸಿದ್ದರು ಸಹ,ಎಲ್ಲರನ್ನೂ ಒಂದೇ ರೀತಿ ಕಾಣುತ್ತ,ನ್ಯಾಯವನ್ನು ಎತ್ತಿ ಹಿಡಿಯುತ್ತಿದ್ದರು.
ಕೋರ್ಟ್ ಕಲಾಪದ ಹೊರತಾಗಿ,ಸಮಾಜಮುಖಿ ಚಿಂತನೆಯ ಇವರು ವಿವಿಧ ಇಲಾಖೆಗಳು, ವಕೀಲರ ಸಂಘ ಹಾಗೂ ಇತರೆ ಕೆಲ ಸಂಸ್ಥೆಗಳ ಆಶ್ರಯ ಹಾಗೂ,ತಾಲೂಕು ಕಾನೂನು ಸೇವಾ ಸಮಿತಿ ಮೂಲಕ ಹಿರಿಯ ಸಿವಿಲ್ ನ್ಯಾಯಾಧೀಶರ ಮಾರ್ಗದರ್ಶನದಲ್ಲಿ ನೂರಾರು ವಿಧಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗಮನ ಸೆಳೆದಿದ್ದರು. ಜನಸಾಮಾನ್ಯರಿಗೆ ಕಾನೂನು ಅರಿವು ನೆರವು ನೀಡಲು ಅವಿರತ ಪ್ರಯತ್ನ ಮುಂದುವರಿಸಿದ್ದರಲ್ಲದೇ,ಬಡವರ ನೊಂದವರ ಪಾಲಿಗೆ ನ್ಯಾಯದ ಅಭಯ ನೀಡಿ ಹಲವರ ಬಾಳಿನಲ್ಲಿ ಹೊಸ ಭರವಸೆ ಮೂಡಿಸಿದ್ದರು. ಈದೀಗ ಮಾನ್ಯರು ಪದೋನ್ನತಿ ಪಡೆದು,ಹಿರಿಯ ಸಿವಿಲ್ ನ್ಯಾಯಾಧೀಶರಾಗಿ ಬೀದರ್ ಜಿಲ್ಲೆಯ ಹುಮ್ನಾಬಾದ್ ಗೆ ವರ್ಗಾವಣೆಗೊಂಡಿದ್ದಾರೆ ತನ್ನಿಮಿತ್ತ ಮಾನ್ಯ ನ್ಯಾಯಾಧೀಶರನ್ನು ಅಂಕೋಲಾ ನ್ಯಾಯಾಲಯ ಹಾಗೂ ವಕೀಲರ ಸಂಘದ ಪರವಾಗಿ ಸನ್ಮಾನಿಸಿ ಗೌರವಿಸಿ,ಬೀಳ್ಕೊಡಲಾಯಿತು.
ಸನ್ಮಾನ ಸ್ವೀಕರಿಸಿದ ನ್ಯಾಯಾಧೀಶರು ,ಸ್ವಾತಂತ್ರ್ಯ ಸಂಗ್ರಾಮದ ಗಂಡು ಮೆಟ್ಟಿನ ಸ್ಥಳವಾದ ಅಂಕೋಲಾದಲ್ಲಿ ಸೇವೆ ಸಲ್ಲಿಸಿದ ಹೆಮ್ಮೆ ಹಾಗೂ ತೃಪ್ತಿ ಇದೆ. ತಮ್ಮ ಸೇವಾವಧಿಯಲ್ಲಿ ಇಲ್ಲಿನ ನ್ಯಾಯಾಲಯದ ಹಿರಿ-ಕಿರಿಯ ನ್ಯಾಯಾಧೀಶರು, ಸಿಬ್ಬಂದಿಗಳು,ವಕೀಲರ ಸಂಘದವರು ನೀಡಿದ ವಿಶೇಷ ಸಹಕಾರ ಸ್ಮರಿಸಿದರು. ಜೆ. ಎಂ ಎಫ್ ಸಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಾನ್ಯ ಮನೋಹರ ಎಂ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಅರ್ಪಿತಾ ಬೆಲ್ಲದ,ವಕೀಲರು ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು,ಸದಸ್ಯರು,ನ್ಯಾಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದು,ಪ್ರಶಾಂತ್ ಬಾಗವಾಡಗಿ ಅವರನ್ನು,ಪ್ರೀತಿ ಹಾಗೂ ಗೌರವದಿಂದ ಸನ್ಮಾನಿಸಿ,ಬೀಳ್ಕೊಟ್ಟರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ