ಅಂಕೋಲಾ: ವಕೀಲರಾದ ನಾಗರಾಜ ನಾಯಕ ನೇತೃತ್ವದ ಅಂಕೋಲಾ ಬೆಳಗಾರರ ಸಮಿತಿಯು ಹಲವಾರು ವಿದಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಅವುಗಳಲ್ಲಿ ಬಹು ಮುಖ್ಯವಾಗಿ ಕಳೆದ 11 ವರ್ಷಗಳಿಂದ ಕೃಷಿ ಹಬ್ಬ ಆಯೋಜಿಸಿ,ಗದ್ದೆ ನಾಟಿ ಕಾರ್ಯಕ್ರಮದ ಮೂಲಕ ಯುವಜನತೆಯನ್ನು ಕೃಷಿಯತ್ತ ಆಕರ್ಷಿಸುವ ಪ್ರಯತ್ನ ಮುಂದುವರಿಸಿದೆ.
ಅಂಕೋಲಾ ತಾಲೂಕಿನ ಬಾಸಗೋಡದ ನಾಗರಾಜ ನಾಯಕ ಕುಟುಂಬದ ಸರಯೂ ಬನದಲ್ಲಿ 12 ನೇ ವರ್ಷದ ಕೃಷಿ ಹಬ್ಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೋಗ್ರೆ ಅಗೇರ ಸಮುದಾಯದ ಪಂಚ ವಾದ್ಯಗಳೊಂದಿಗೆ,ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಗೋಮಾತೆಯನ್ನು ಪೂಜಿಸಲಾಯಿತು. ನಂತರ ನಡೆದ ಸರಳ ಸಭಾ ಕಾರ್ಯಕ್ರಮದಲ್ಲಿ ಸಂಘಟಕ ಪ್ರಮುಖ ನಾಗರಾಜ ನಾಯಕ ಸರ್ವರನ್ನು ಸ್ವಾಗತಿಸಿ,ಅಂಕೋಲೆ ಮತ್ತು ಬಾಸಗೋಡಿನ ಹಿರಿಮೆ ಕುರಿತು ಮಾತನಾಡಿ,ಕೃಷಿ ಮಹತ್ವ ಸಾರುವ ತಮ್ಮ ಸಂಘಟನೆಯ ಚಿಕ್ಕ ಪ್ರಯತ್ನ ಇದಾಗಿದೆ ಎಂದರು.
ದೇಶಿ ತಳಿ ರಾಸುಗಳ ಸಾಕಾಣಿಕೆ ಮೂಲಕ ದೇಶದಾದ್ಯಂತ ಹಳ್ಳಿಕಾರ್ ಒಡೆಯ ಎಂದೇ ಪ್ರಸಿದ್ಧರಾಗಿರುವ ವರ್ತೂರು ಸಂತೋಷ ಅವರಿಗೆ,ಬೆಳಂಬಾರ ಗ್ರಾಮದ ಪ್ರಗತಿಪರ ಕೃಷಿಕರಾಗಿದ್ದ ಭೀಮ ಗೌಡ ಇವರ ಸ್ಮರಣಾರ್ಥ ಕೊಡ ಮಾಡುವ,ಕೃಷಿ ಭೀಮ ಪುರಸ್ಕಾರ ನೀಡಿ ಗೌರವಿಸಲಾಯಿತು.ಬಿಗ್ ಬಾಸ್ ರಿಯಾಲಿಟಿ ಶೋ ನ ಪ್ರಮುಖ ಸ್ಪರ್ದಾಳುವಾಗಿದ್ದ ವರ್ತೂರ್ ಸಂತೋಷ್,.ಹಳ್ಳಿಕಾರ್ ತಳಿಯ ರಾಸುಗಳು ಯಾವುದೇ ಹವಾಮಾನಕ್ಕೆ ಹೊಂದಿಕೊoಡು ಬದುಕಬಲ್ಲದ್ದಾಗಿದ್ದು ತಮ್ಮದೇ ಆದ ವಿಶೇಷತೆ ಹೊಂದಿವೆ ಎಂದರು.
ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ರೈತರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಬಾಸಗೋಡ ಹಾಗೂ ಸುತ್ತಮುತ್ತಲ ಹಳ್ಳಿಗಳ ಪ್ರಮುಖರು ಹಾಗೂ ಊರ ನಾಗರಿಕರು,ಸಂಘಟನಾ ಸಮಿತಿಯ ಪದಾಧಿಕಾರಿಗಳು ಸದಸ್ಯರು ಪಾಲ್ಗೊಂಡು,ಗದ್ದೆ ನಾಟಿ ಮಾಡಿ ಸಂಭ್ರಮಿಸಿದರು.ತಾಲೂಕು ಜಿಲ್ಲೆ ಸೇರಿದಂತೆ ಹಲವೆಡೆ ಕೃಷಿ ಕಾರ್ಯ ಕೈಗೊಳ್ಳದೇ ಸಾವಿರಾರು ಎಕರೆ ಬಂಜರು ಬೀಳುತ್ತಿರುವ,ನಗರೀಕರಣ ಮತ್ತಿತರ ಕಾರಣಗಳಿಂದ ಕೃಷಿಯಿಂದ ಹಲವರು ವಿಮುಖರಾಗುತ್ತಿರುವ ಇಂದಿನ ದಿನಗಳಲ್ಲಿ ಅಂಕೋಲೆಯ ಹಲವೆಡೆ ಶಾಲಾ -ಕಾಲೇಜು, ಸಂಘ ಸಂಸ್ಥೆಗಳು ಸಹ ಕೃಷಿ ಹಬ್ಬದಿಂದ ಪ್ರೇರಣೆಗೊಂಡು ಕೃಷಿ ಪೂರಕ ಮತ್ತು ಪ್ರೋತ್ಸಾಹಕ ಕಾರ್ಯಕ್ರಮ ಕೈಗೊಳ್ಳುತ್ತಿರುವುದನ್ನು ಕಾಣಬಹುದಾಗಿದೆ.
ಜಿಲ್ಲೆಯ ಬೇರೆ ಬೇರೆ ಕಡೆಯಿಂದ ಆಗಮಿಸಿದ ಪ್ರಗತಿಪರ ರೈತರು ಮತ್ತಿತರ ಪ್ರಮುಖರನ್ನು ಹಾಗೂ ವೇದಿಕೆಯಲ್ಲಿದ್ದ ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಿ ಕಂಬಳಿ ಹೊದಿಕೆ ನೀಡಿ ಇಲ್ಲವೇ ಗಿಡ ನೀಡಿ ಗೌರವಿಸಲಾಯಿತು.ಗದ್ದೆ ನಾಟಿಯ ನಂತರ ಹಳ್ಳಿಯ ಸೊಗಡಿನ ಆಹಾರ ಶೈಲಿಯಲ್ಲಿ,ಬಾಳೆ ಎಲೆಯಲ್ಲಿ ಅವಲಕ್ಕಿ ನೀಡಿ ಎಲ್ಲರಿಗೂ ಆತಿಥ್ಯ ನೀಡಲಾಯಿತು. ಅತಿಥಿ ಗಣ್ಯರ ಪಾಲ್ಗೊಳ್ಳುವಿಕೆ ಮೂಲಕ ಕೃಷಿ ಹಬ್ಬ ಯಶಸ್ವಿಯಾಗಿ ನಡೆಯಿತು.
ವಿಸ್ಮಯ ನ್ಯೂಸ್, ವಿಲಾಸ್ ನಾಯಕ ಅಂಕೋಲಾ