ಅಂಕೋಲಾ : ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಲಯನ್ಸ ಕ್ಲಬ್ ಅಂಕೋಲಾ ಕರಾವಳಿ ವತಿಯಿಂದ ಪಟ್ಟಣದ ಪಿ ಎಂ ಜ್ಯೂನಿಯರ ಪ.ಪೂ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆಯನ್ನು ಆಚರಿಸಲಾಯಿತು.
ಹಿರಿಯ ಸಾಹಿತಿ ಶಾಂತಾರಾಮ ನಾಯಕ ಹಿಚ್ಕಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪತ್ರಕರ್ತರು ಸಮಾಜದ ಕನ್ನಡಿ ಇದ್ದಹಾಗೆ ಪತ್ರಿಕೆಗಳು ಎಲೆಮರೆಯ ಕಾಯಿಗಳನ್ನು ಪರಿಚಯಿಸುವ ಮೂಲಕ, ನೊಂದವರ ಪರ ಧ್ವನಿಯಾಗುವ ಕಾರ್ಯವನ್ನು ಪತ್ರಿಕೆಗಳು ಅಚ್ಚುಕಟ್ಟಾಗಿ ಮಾಡುತ್ತಿವೆ ಎಂದರು. ಶಿರೂರು ಗುಡ್ಡ ಕುಸಿತ ದುರ್ಘಟನೆಯ ಭೀಕರತೆಗೆ ಉಳವರೆಯ 5-6 ಮನೆಗಳು ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದಾಗ, ತನ್ನ ಜೀವದ ಹಂಗು ತೊರೆದು ಮಕ್ಕಳು ಸೇರಿದಂ ಕೆಲವರನ್ನು ರಕ್ಷಿಸಿದ್ದ ಹುವಾ ಗೌಡರ ಸಾಹಸಕ್ಕೆ,ಲಾಯನ್ಸ್ ಕ್ಲಬ್ ಶೌರ್ಯ ಪ್ರಾಸಸ್ತಿ ನೀಡಿ ಗೌರವಿಸಲಾಯಿತು.
ಹಿರಿಯ ಪತ್ರಕರ್ತ ನಾಗರಿಕ ಪತ್ರಿಕೆಯ ಸಂಪಾದಕ ಹೊನ್ನಾವರದ ಕೃಷ್ಣಮೂರ್ತಿ ಹೆಬ್ಬಾರ ಮಾತನಾಡಿ ಇಂದಿನ ಪರಿಸ್ಥಿತಿಯಲ್ಲಿ ಒಳ್ಳೆಯ ಮನಸ್ಥಿತಿಯನ್ನು ಉಳಿಸಿಕೊಳ್ಳಲು ಹೋರಾಡಬೇಕಾದ ಪರಿಸ್ಥಿತಿಯಲ್ಲಿ ಯಾರಿಗೆ ದನಿಯಿಲ್ಲವೋ ಅವರ ಪರ ದನಿಯಾಗುವವರೇ ಪತ್ರಕರ್ತರು. ನಿಸ್ವಾರ್ಥ ನಿಶ್ಕಳಂಕ ಪತ್ರಕರ್ತರಿಗೆ ಯಾರ ಅಂಜಿಕೆಯೂ ಇರುವದಿಲ್ಲ. ಪತ್ರಿಕೋದ್ಯಮ ಈ ಸಮಾಜದ ಹುಳುಕನ್ನು ಹುಡುಕಿ ಸಮಾಜಕ್ಕೆ ಬೆಳಕು ನೀಡುವ ಕಾಯಕ ಮಾಡುತ್ತಿದೆ ಎಂದರು. ವಿದ್ಯಾರ್ಥಿಗಳು ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಂಡರೆ ಪತ್ರಿಕೋದ್ಯಮಕ್ಕೆ ಸಹಾಯವಾಗುತ್ತದೆ ಎಂದರು.
ಹಿರಿಯ ಪತ್ರಕರ್ತ ಹೊಸದಿಗಂತ ಪತ್ರಿಕೆಯ ಹುಬ್ಬಳ್ಳಿ ಆವೃತ್ತಿಯ ವ್ಯವಸ್ಥಾಪಕರಾದ ವಿಠಲದಾಸ ಕಾಮತ ಮಾತನಾಡಿ ಪತ್ರಕರ್ತರು ಸಾಮಾಜಿಕ ವ್ಯವಸ್ಥೆಯ ಅವಿಭಾಜ್ಯ ಅಂಗವಾದರೂ ಅವರೂ ಕೂಡ ಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಸರಕಾರ ಮತ್ತು ಸಮಾಜದಿಂದ ಪತ್ರಿಕೋದ್ಯಮ ಮತ್ತು ಪತ್ರಕರ್ತರನ್ನು ಉಳಿಸುವ ಕೆಲಸ ಆಗಬೇಕಿದೆ. ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಪತ್ರಿಕೆಗಳನ್ನು ಓದುವ ಪ್ರವೃತ್ತಿ ಬೆಳೆಸಿಕೊಂಡರೆ ಪತ್ರಕರ್ತರನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಂಕೋಲಾ ಕರಾವಳಿಯ ಅಧ್ಯಕ್ಷ ದೇವಾನಂದ ಗಾಂವಕರ ಮಾತನಾಡಿ ಲಯನ್ಸ ಕ್ಲಬ್ ವತಿಯಿಂದ ಪ್ರತಿವರ್ಷ ಪತ್ರಿಕಾ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಪತ್ರಿಕೆಗಳು ನೊಂದವರ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡಿದರೆ ಲಯನ್ಸ ಕ್ಲಬ್ ನೊಂದವರಿಗೆ ಬೆಳಕಾಗುವ ಕಾರ್ಯ ಮಾಡುತ್ತಿದೆ. ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಹವ್ಯಾಸಗಳನ್ನು ಬೆಳೆಸಿಕೊಂಡು ನಿಮ್ಮ ಮುಂದಿನ ಆಯ್ಕೆಯಲ್ಲಿ ಪತ್ರಿಕೋದ್ಯಮವೂ ಒಂದಾಗಿರಲಿ ಎಂದರು.
ತಾ.ಕಾ ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ, ಗೌರವಾಧ್ಯಕ್ಷ ರಾಘು ಕಾಕರಮಠ, ಪಿ ಎಮ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಫಾಲ್ಗುಣ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕಿನ ಕೆಲ ಪತ್ರಕರ್ತರನ್ನು ಗೌರವಿಸಲಾಯಿತು. ಪತ್ರಿಕಾ ದಿನಾಚರಣೆ ಪ್ರಯುಕ್ತ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಹಿರಿಯ ಉಪನ್ಯಾಸಕ ಉಲ್ಲಾಸ ಹುದ್ದಾರ ಕಾರ್ಯಕ್ರಮ ನಿರ್ವಹಿಸಿದರು. ಲಾ. ಎಸ್ ಆರ್ ಉಡುಪ ಸ್ವಾಗತಿಸಿದರು. ಲಾ.ಮಹಾಂತೇಶ ರೇವಡಿ ಅತಿಥಿಗಳನ್ನು ಪರಿಚಯಿಸಿ ಆಶಯ ನುಡಿಗಳನ್ನಾಡಿದರು. ಸದಾನಂದ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಲಯನ್ಸ ಕ್ಲಬ್ ಪದಾಧಿಕಾರಿಗಳು, ಸದಸ್ಯರು, ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಕೆಲ ಪತ್ರಕರ್ತರಿದ್ದರು.
ಶಿರೂರು ಗುಡ್ಡ ಕುಸಿತ ದುರ್ಘಟನೆಯ ಭೀಕರತೆಗೆ ಉಳವರೆಯ 5-6 ಮನೆಗಳು ನದಿ ನೀರಿನಲ್ಲಿ ಕೊಚ್ಚಿ ಹೋದದ್ದಲ್ಲದೇ, ಗ್ರಾಮದ ಹಲವರು ಅಪಾಯದಲ್ಲಿ ಸಿಲುಕಿದ್ದರು. ಈ ವೇಳೆ ತನ್ನ ಜೀವದ ಹಂಗು ತೊರೆದು 5 ಮಕ್ಕಳನ್ನು ಅಪಾಯದಿಂದ ಪಾರು ಮಾಡಿದ್ದ, ಸ್ಥಳೀಯ ಹುವಾ ಗೌಡರ ಸಾಹಸಕ್ಕೆ,ಲಾಯನ್ಸ್ ಕ್ಲಬ್ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.