ಭಟ್ಕಳ: ಪಶ್ಚಿಮ ಬಂಗಾಳದಲ್ಲಿ ಒಬ್ಬ ಮಹಿಳಾ ಮುಖ್ಯಮಂತ್ರಿ ಇದ್ದಾಗಲೂ ಮಹಿಳೆಯರಿಗೆ ರಕ್ಷಣೆ ಒದಗಿಸಲು ಸಾಧ್ಯವಾಗದಿದ್ದರೆ ಬೇರೆ ಕಡೆಗಳಲ್ಲಿ ಮಹಿಳೆ ಸಂರಕ್ಷಣೆಯನ್ನು ನಿರೀಕ್ಷೆ ಮಾಡುವುದು ಹೇಗೆ ಸಾಧ್ಯ ಎಂದು ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಶಿವಾನಿ ಶಾಂತರಾಮ ಹೇಳಿದರು.ಪಶ್ಚಿಮ ಬಂಗಾಳದ ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸಿ ಭಟ್ಕಳ ಬಿಜೆಪಿ ಮಹಿಳಾ ಮೋರ್ಚಾ ಪಟ್ಟಣದ ಬೈಪಾಸ್ ನಲ್ಲಿ ಮೊಂಬತ್ತಿ ಹಿಡಿದು ಮೌನ ಪ್ರತಿಭಟನೆಯನ್ನು ನಡೆಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಬಿಜೆಪಿ ಪಕ್ಷವು ಸದಾ ಮಹಿಳೆಯ ಉನ್ನತಿಯ ಕುರಿತಾಗಿ ಚಿಂತಿಸುತ್ತದೆ. ಆದರೆ ಕಾಂಗ್ರೇಸ್ ನಂತಹ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯದಂತ ಪ್ರಕರಣಗಳು ಮೇಲಿಂದ ಮೇಲೆ ಸಂಭವಿಸುತ್ತಿರುತ್ತದೆ. ಕರ್ನಾಟಕದಲ್ಲೂ ಇತ್ತೀಚೆಗೆ ಇಂತಹ ಅನೇಕ ಪ್ರಕರಣಗಳು ನಡೆದಿದೆ. ಹಾವೇರಿಯಲ್ಲಿ ನಡೆದ ದಲಿತ ಮಹಿಳೆಯ ಮೇಲೆ ಅತ್ಯಾಚಾರ, ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಪ್ರಕರಣ, ಈ ಎಲ್ಲಾ ಪ್ರಕರಣಗಳಲ್ಲೂ ನ್ಯಾಯ ಮರೀಚಿಕೆಯಾಗಿದೆ. ಕಾಂಗ್ರೇಸ್ ನಂತಹ ಸರ್ಕಾರ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಮಹಿಳೆಯರು ಮನೆಯ ಒಳಗಿದ್ದರು ಸುರಕ್ಷಿತರಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಸುನಿತಾ ಡಿ ಹೇರೂರ್ಕರ, ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಕುಪ್ಪು ಗೊಂಡ ವಿಜಯ ನಾಯ್ಕ, ಮಂಡಲ ಕಾರ್ಯದರ್ಶಿ ಶೀತಲಾ ನಾಯ್ಕ, ತಾಲೂಕಾ ಮಂಡಳ ಅಧ್ಯಕ್ಷ ಲಕ್ಷ್ಮೀ ನಾರಾಯಣ ನಾಯ್ಕ, ಶ್ರೀಕಾಂತ ನಾಯ್ಕ, ಸುಬ್ರಾಯ ದೇವಾಡಿಗ ಮತ್ತಿತರರು ಇದ್ದರು.
ವಿಸ್ಮಯ ನ್ಯೂಸ್, ಈಶ್ವರ ನಾಯ್ಕ, ಭಟ್ಕಳ