ಅಂಕೋಲಾ : ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗೆ ಜರುಗಿದ ಚುನಾವಣೆಯಲ್ಲಿ ಕಾಂಗ್ರೆಸ್ (9) , ಬಿಜೆಪಿ (9) ಹಾಗೂ ಪಕ್ಷೇತರರು (5 – 1 = 4) ಸೇರಿದಂತೆ ಒಟ್ಟೂ 22 ಸದಸ್ಯರಿದ್ದು, ಅವರೆಲ್ಲರೂ ಅಧಿಕೃತವಾಗಿ ಮತದಾನದ ಹಕ್ಕು ಹೊಂದಿದ್ದರು.ಈ ಹಿಂದೆ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಗೆದ್ದು ಬಂದಿದ್ದ ನಾಗರಾಜ ಐಗಳ, ಪಕ್ಷದ ವಿರುದ್ಧದ ಅಸಮಾಧಾನ ಇಲ್ಲವೇ ಇನ್ನಿತರೇ ಕಾರಣಗಳಿಂದ ಮತದಾನದಲ್ಲಿ ಪಾಲ್ಗೊಳ್ಳದೇ,ಮೊಬೈಲ್ ಸ್ವಿಚ್ ಆಫ್ ಮಾಡಿ ಯಾರ ಸಂಪರ್ಕಕ್ಕೂ ಸಿಗದೇ ಇರುವುದು, ಬಿಜೆಪಿ (9-1 = 8) ಸದಸ್ಯ ಬಲ ಕಡಿಮೆ ಆಗಿ, ಪಕ್ಷದ ಪರವಾಗಿದ್ದ ಗೆಲುವಿನ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರಬಹುದೇ ಎನ್ನುವ ರಾಜಕೀಯ ಲೆಕ್ಕಾಚಾರ ಮತ್ತು ಚರ್ಚೆ ಆರಂಭವಾಗಿತ್ತು.
ಈ ನಡುವೆಯೇ ಸ್ಥಳೀಯ ಶಾಸಕ ಸತೀಶ ಸೈಲ್ ಮತ್ತು ಸಂಸದ ಕಾಗೇರಿಯವರು ಮತದಾನ ಚಲಾಯಿಸಲು ಬಂದಿರುವುದು , ಚುನಾವಣಾ ಫಲಿತಾಂಶದ ಮೇಲೆ ಕುತೂಹಲ ಹೆಚ್ಚುವಂತಾಗಿತ್ತು . ಚುನಾವಣಾ ಪ್ರಕ್ರಿಯೆ ಆರಂಭವಾಗುವ ಪೂರ್ವ ಶಾಸಕರು ಮತ್ತು ಕಾಗೇರಿಯವರು ಆತ್ಮೀಯವಾಗಿಯೇ ಮಾತನಾಡುತ್ತಾ ಪುರಸಭೆ ಒಳಾಂಗಣ ಪ್ರವೇಶಿಸಿ, ಬಳಿಕ ಚುನಾವಣೆಗೆ ನಿಗದಿಗೊಳಿಸಿದ್ದ ಹಾಲ್ ನಲ್ಲಿ ತಮಗೆ ಮೀಸಲಿರಿಸಿದ್ದ ಸ್ಥಾನಗಳಲ್ಲಿ ಒಂದೆಡೆಯೇ ಕುಳಿತರೆ, ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಪ್ರತ್ಯೇಕ ಪ್ರತ್ಯೇಕ ಗುಂಪುಗಳಲ್ಲಿ ಕುಳಿತು ಬಲಾಬಲ ತೋರ್ಪಡಿಸಿದಂತಿತ್ತು. ಈ ಹಿಂದೆ (ಮೊದಲ ಅವಧಿಯಲ್ಲಿ) ಬಿಜೆಪಿಯನ್ನು ಬೆಂಬಲಿಸಿದ್ದ ಪಕ್ಷೇತರ ಸದಸ್ಯರಾದ ತಾರಾ ನಾಯ್ಕ, ಮಂಗೇಶ ಅಗೇರ, ಶ್ರೀಧರ ನಾಯ್ಕ ಬಿಜೆಪಿ ಗುಂಪಿನಲ್ಲಿ ಹಾಗೂ ನಿಕಟಪೂರ್ವ ಉಪಾಧ್ಯಕ್ಷೆಯಾಗಿದ್ದ ರೇಖಾ ಗಾಂವಕರ ಕಾಂಗ್ರೆಸ್ ಗುಂಪಿನಲ್ಲಿ ಕುಳಿತಿದ್ದಲ್ಲದೇ ಆಯಾ ಪಕ್ಷದ ಪರವಾಗಿಯೇ ನೇರವಾಗಿ ಬೆಂಬಲಿಸಿ ಮತ ಚಲಾಯಿಸಿದಂತಿತ್ತು.
ಕೊನೆ ಕ್ಷಣದ ಕೆಲ ರಾಜಕೀಯ ಕಸರತ್ತಿನ ನಡುವೆಯೂ,ನಿರೀಕ್ಷೆಯಂತೆ ಬಿಜೆಪಿ ಮತ್ತೆ ತನ್ನ ಪ್ರಾಬಲ್ಯ ಮುಂದುವರೆಸಿ, ಸೂರಜ ಮನೋಹರ ನಾಯ್ಕ, (ಅಧ್ಯಕ್ಷರಾಗಿ) , ಶೀಲಾ ಶೆಟ್ಟಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ನ ಪ್ರಕಾಶ ಗೌಡ ತನ್ನ ಪಕ್ಷದ ನಾಯಕರು ಮತ್ತು ಸಂಗಡಿಗರೊಂದಿಗೆ, ಕಠಿಣ ಸವಾಲು ಎದುರಿಸಲು ಉತ್ತಮ ಪ್ರಯತ್ನ ನಡೆಸಿದ್ದು ಅಧ್ಯಕ್ಷರಾಗುವ ಹಾಗೂ ಸವಿತಾ ಉಪಾಧ್ಯಕ್ಷರಾಗುವ ಕನಸು 1 ಓಟಿನ ಹಿನ್ನಡೆಯೊಂದಿಗೆ ಕೊನೆಗೊ ಕೈ ಗೂಡದೇ, ರಾಜಕೀಯದಲ್ಲಿ ಸೋಲು ಗೆಲುವು ಇರುವುದೇ ಎಂಬಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಸದಸ್ಯರು, ಕೆಲ ಹಿರಿ-ಕಿರಿಯ ಕಾರ್ಯಕರ್ತರು, ಕೊಂಚ ನಿರಾಸೆಯಲ್ಲಿಯೇ ಮರಳಿದಂತಿತ್ತು. ಒಂದೊಮ್ಮೆ ಸಂಸದರು ಬಾರದಿದ್ದರೆ ಕಾಂಗ್ರೆಸ್ ಮತ್ತು ಬಿಜೆಪಿ ತಲಾ11-11 ಮತಗಳೊಂದಿಗೆ, ಸಮಬಲವಾಗಿ, ಚೀಟಿ ಮೂಲಕ ಅದೃಷ್ಟದ ಫಲಿತಾಂಶ ಘೋಷಿಸಬೇಕಾದ ಅನಿವಾರ್ಯತೆಯೂ ಬರುವ ಸಾಧ್ಯತೆ ಇತ್ತು.
ಆದರೆ ತನ್ನ ರಾಜಕೀಯ ಜೀವನದ ಆರಂಭಕ್ಕೆ, ಉನ್ನತಿಗೆ ಮುನ್ನುಡಿ ಬರೆದಿರುವ ಅಂಕೋಲಾದ ನಂಟು ಉಳಿಸಿ ಬೆಳೆಸಿಕೊಂಡಿರುವ ಸಂಸದ ಕಾಗೇರಿ, ಅಂಕೋಲಾ ಪುರಸಭೆಗೆ ಬಂದು, ತಮ್ಮ ನಿರ್ಣಾಯಕ ಮತ ಚಲಾಯಿಸಿ, ಬಿಜೆಪಿ ಪಕ್ಷಕ್ಕೆ 1 ಒಟಿನ ಮೂಲಕ ಬಿಜೆಪಿಗೆ ಗೆಲುವು ತಂದುಕೊಟ್ಟು ತನ್ನ ಹಿರಿತನ ಮತ್ತು ಜವಾಬ್ದಾರಿ ಮೆರೆದಂತಿದೆ. ಆ ಮೂಲಕ ಪಕ್ಷ ಹಾಗೂ ಕಾಗೇರಿ ಅವರು ರೂಪಾಲಿ ನಾಯ್ಕ ಅವರಿಗೆ ಬರ್ತಡೇ ಗೆ ಗಿಫ್ಟ್ ನೀಡಿದಂತಾಗಿದೆ.