ಅಂಕೋಲಾ: ಶಿರೂರಿನಲ್ಲಿ ಸಂಭವಿಸಿದ ಭೂಕುಸಿತಕ್ಕೆ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿಯೂ ಕಾರಣ ಎಂದು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ತನ್ನ ಪ್ರಾಥಮಿಕ ವರದಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಹಾಗೂ ಉತ್ತರ ಕನ್ನಡ ಜಿಲ್ಲಾಧಿಕಾರಿ ಅವರಿಂದ ರಾಷ್ಟ್ರೀಯ ಹಸಿರು ನ್ಯಾಯಪೀಠದ ಪ್ರಧಾನ ಪೀಠ ವಿವರಣೆ ಕೇಳಿದೆ.
ಪ್ರಕರಣವನ್ನು ಸ್ವಯಂಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿರುವ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ನೇತೃತ್ವದ ಪೀಠವು, ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ಮಹಾನಿರ್ದೇಶಕರಿಗೂ ನೋಟಿಸ್ ನೀಡಿದೆ. ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ತಾಲೂಕಿನ ಶಿರೂರು ಬಳಿ ಅಂಕೋಲಾ ಸಂಭವಿಸಿದ ಭೂಕುಸಿತದಿಂದ ಎಂಟು ಮಂದಿ ಸತ್ತಿದ್ದಾರೆ. ನಾಪತ್ತೆಯಾದ ಮೂವರು ಇನ್ನೂ ಪತ್ತೆಯಾಗಿಲ್ಲ. ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿಯು ಈ ದುರಂತಕ್ಕೆ ಕಾರಣ. ಜೊತೆಗೆ, ಅಲ್ಪಾವಧಿಯಲ್ಲಿ ಭಾರೀ ಮಳೆಯಾಗಿದ್ದರಿಂದಲೂ ಭೂಕುಸಿತ ಸಂಭವಿಸಿದೆ’ ಎಂದು ನ್ಯಾಯಪೀಠದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್,