ರಕ್ಕಸ ಗಾತ್ರದ ಅಲೆಗಳ ರಭಸಕ್ಕೆ ಕೊಚ್ಚಿಹೋಗುತ್ತಿರುವ ಮನೆ, ಮರಗಳು: ಸಮಸ್ಯೆಗೆ ಸ್ಪಂದಿಸದಿದ್ರೆ ಹೋರಾಟದ ಎಚ್ಚರಿಕೆ

ಅಂಕೋಲಾ: ತಾಲೂಕಿನ ಹಾರವಾಡದ ತರಂಗ ಮೇಟದಲ್ಲಿ ಕಡಲ ಕೊರೆತ ಹೆಚ್ಚುತ್ತಿದ್ದು, ರಕ್ಕಸ ಗಾತ್ರದ ಅಲೆಗಳ ರಭಸಕ್ಕೆ ಮನೆ, ಮರಗಿಡಗಳು ಕೊಚ್ಚಿಹೋಗಲಾರಂಭಿಸಿದ್ದು, ರಾತ್ರಿ ಸಮುದ್ರದ ಅಬ್ಬರ ಜಾಸ್ತಿಯಾದರೆ ನಮ್ಮ ಸಂಪೂರ್ಣ ಬದುಕೇ ಕೊಚ್ಚಿ ಹೋಗುತ್ತದೆ ಎನ್ನುವ ಆತಂಕ ಸ್ಥಳೀಯರಿಂದ ವ್ಯಕ್ತವಾಗಿದೆ ಅಂಕೋಲಾ ತಾಲೂಕಿನಲ್ಲಿ ಹಲವೆಡೆ ಮಳೆ ಗಾಳಿ ಅಬ್ಬರ, ಶಿರೂರು ಗುಡ್ದ ಕುಸಿತದ ದುರಂತದ ಕಹಿ ಅನುಭವ ಜನ ಜೀವನವನ್ನೇ ಬೆಚ್ಚಿ ಬೀಳಿಸಿದೆ ಈ ನಡುವೆ ಕಳೆದ 3 4 ದಿನಗಳಿಂದ ಮಳೆ ಕಡಿಮೆಯಾಗಿ, ಬಿಸಿಲ ವಾತಾವರಣ ಇದೆ.

ಆದರೆ, ಗಾಳಿ ಮತ್ತಿತರ ಕಾರಣಗಳಿಂದ ಕಡಲ ಭೋರ್ಗರೆತವೂ ಜೋರಾಗಿದ್ದು, ಕೆಲ ಪ್ರದೇಶಗಳಲ್ಲಿ ದೈತ್ಯ ಗಾತ್ರದ ಅಲೆಗಳು ದಡಕಪ್ಪಳಿಸಿ, ಮುನ್ನುಗುತ್ತಿದೆ ಸಮುದ್ರದ ಭಾರೀ ಅಲೆಗಳಿಂದ ಹಾರವಾಡ ಗ್ರಾಪಂ ವ್ಯಾಪ್ತಿಯ ತರಂಗಮೇಟ ಭಾಗದ ಸಮುದ್ರ ತೀರದ ನಿವಾಸಿಗಳು, ತಮ್ಮ ಬದುಕು ಎಲ್ಲಿ ಕೊಚ್ಚಿ ಹೋಗುವುದೋ ಎಂದು ಆತಂಕಗೊಳ್ಳುವಂತಾಗಿದೆ.

ತಾಲೂಕಿನ ಹಾರವಾಡ ತರಂಗ ಮೇಟ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಕಡಲ ಕೊರೆತ ಹೆಚ್ಚುತ್ತಿದ್ದು,, ಹತ್ತಿರದ ತೆಂಗಿನ ಗಿಡ ಮತ್ತಿತರ ಗಿಡಗಳು ಸಮುದ್ರ ಪಾಲಾಗುತ್ತಿದೆ ಅಲ್ಲದೇ ಜನವಸತಿ ಪ್ರದೇಶಕ್ಕೂ ನೀರು ನುಗ್ಗಿ ಅವಾಂತರವಾಗುವ ಸಾಧ್ಯತೆ ಹೆಚ್ಚಿದೆ. ಕಡಲಬ್ಬರದಿಂದ ಸ್ಥಳೀಯರಲ್ಲಿ ಆತಂಕ ಶುರುವಾಗಿದೆ. ಕೆಲವೆಡೆ ಸಮುದ್ರ ತಡೆಗೋಡೆ ನಿರ್ಮಾಣದ ಅತ್ಯವಶ್ಯತೆ ಇದೆ ಎನ್ನುವ ಸ್ಥಳೀಯರು, ಸ್ಥಳೀಯ ಜನಪ್ರತಿನಿಧಿಗಳಷ್ಟೇ ಅಲ್ಲದೆ ಕೆಲ ದಿನದ ಹಿಂದೆ ಶಿರೂರು ಗುಡ್ಡ ಕುಸಿತ ಸ್ಥಳ ಪರಿಶೀಲನೆಗೆ ಬಂದಿದ್ದ ಮುಖ್ಯ ಮಂತ್ರಿಗಳು ಇಲ್ಲಿಯೂ ಬಂದು ಕಡಲ ಕೊರೆತ ಪ್ರದೇಶ ವಿಕ್ಷೀಸಿ ಹೋಗಿದ್ದಾರೆ” ಆದರೂ ಸ್ಥಳೀಯರ ಜೀವನ ಬಧ್ರತೆಗೆ ಯಾರೂ ಸರಿಯಾಗಿ ಸ್ವಂದಿಸುತ್ತಿಲ್ಲ ಎನ್ನುವ ನಿರಾಶಾಭಾವ ಹಾಗೂ ಅಸಮಾಧಾನ ಸ್ಥಳೀಯ ಯರಲ್ಲಿದೆ.

ಮೀನುಗಾರರ ಹಾಗೂ ಸಮುದ್ರದಂಚಿನ ಜನರ ಸುರಕ್ಷತೆಗೆ ತಡೆಗೋಡೆ ಮತ್ತಿತರ ಕಾಮಗಾರಿ ನಡೆಯದಿರುವುದು ಬೇಸರದ ವಿಷಯ. ಈಗ ಕೆಲ ಪ್ರದೇಶಗಳಲ್ಲಿ ಜೋರಾದ ಅಲೆಗಳ ರಭಸ ಮತ್ತು ವೇಗವಾಗಿ ಬೀಸುತ್ತಿರುವ ಗಾಳಿಯಿಂದ ನೀರು ಮತ್ತು ಅಲೆಗಳು ಎತ್ತರದಲ್ಲಿ ಮುನ್ನುಗ್ಗುತ್ತಿದ್ದು, ಸಮುದ್ರ ತೀರದಂಚಿನ ನಿವಾಸಿಗಳ ಸುರಕ್ಷತೆ ಮೊದಲ ಆದ್ಯತೆ ಆಗಿರಬೇಕು ಎನ್ನುತ್ತಾರೆ ಸ್ಥಳೀಯರು.

ಸ್ಥಳೀಯ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಸ್ಥಳೀಯ ಸಮಸ್ಯೆ ಕುರಿತು ವಿವರಿಸಿ, ಆಗಸ್ಟ್ 23 ರಂದು ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು,: ವಾರದೊಳಗೆ ಸಮಸ್ಯೆ ಪರಿಹಾರಕ್ಕೆ ಸ್ವಂದನೆ ಸಿಗದಿದ್ದಲ್ಲಿ ಹೋರಾಟದ ಎಚ್ಚರಿಕೆ ನೀಡಿದ್ದಾರೆ . ಸ್ಥಳೀಯರ 2 ಮನೆಗಳು ನೀರಿನಲ್ಲಿ ಭಾಗಶಃ ಕೊಚ್ಚಿ ಹೋಗಿ, ಹಾನಿಯಾಗಿದೆ. ರಾತ್ರಿ ಅಲೆಗಳ ಅಬ್ಬರ ಹೆಚ್ಚಾದರೆ ಮತ್ತಷ್ಟು ಹಾನಿ ಸಂಭವಿಸುವ ಸಾಧ್ಯತೆ ಇದೆ : ಕೂಡಲೇ ಸಂಬಂಧಿತ ಇಲಾಖೆಗಳು ಜನಪ್ರತಿನಿಧಿಗಳು ಜನರ ಮತ್ತು ಆಸ್ತಿಪಾಸ್ತಿ ರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version