Follow Us On

WhatsApp Group
Big News
Trending

ಕಡಲ್ಕೊರೆತ: ತಡೆಗೋಡೆ ನಿರ್ಮಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ

ಅಂಕೋಲಾ: ಹಾರವಾಡ ತರಂಗಮೇಟದಲ್ಲಿ ದಿನದಿಂದ ದಿನಕ್ಕೆ ಕಡಲ ಕೊರೆತ ಹೆಚ್ಚುತ್ತಲೇ ಇದ್ದು, ಆಸ್ತಿ -ಪಾಸ್ತಿ ಹಾನಿಯಾಗುತ್ತಿದೆ. ಅಗಸ್ಟ್ 22 ರಂದು ಮನೆ ಹಾಗೂ ತೆಂಗಿನ ಮರ ಸಮುದ್ರ ಪಾಲಾಗುತ್ತಿರುವ ವಿಡಿಯೋ ಎಲ್ಲಡೆ ವೈರಲ್ ಆಗಿದೆ. ಈ ಪ್ರದೇಶದಲ್ಲಿ ತಡೆಗೋಡೆ ಕಾಮಗಾರಿ ವಿಳಂಬದಿಂದಾಗಿ ಕಡಲ್ಕೊರೆತ ಉಂಟಾಗಿ ಹಾನಿಯಾಗಿದ್ದು ನಿಗದಿತ ಸಮಯದಲ್ಲಿ ತಡೆಗೋಡೆ ನಿರ್ಮಿಸಲು ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಅಂಕೋಲಾ ತಾಲೂಕಿನ ಹಾರವಾಡ ತರಂಗಮೇಟದಲ್ಲಿ ಸಮುದ್ರದ ಕಡಲು ಕೊರತದಿಂದ ಅನೇಕ ಗಿಡ-ಮರಗಳು ಮತ್ತು ಮನೆಗಳು ಕೊಚ್ಚಿಕೊಂಡು ಹೋಗುತ್ತಿವೆ.ಇದರ ಕುರಿತು ಈ ಹಿಂದೆ ಸಂಬಂಧಿಸಿದ ಗ್ರಾಮಪಂಚಾಯತಿ ಹಾಗೂ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೂ ತರಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿರೂರು ಗುಡ್ದ ಕುಸಿತ ಅವಘಡ ಸ್ಥಳಕ್ಕೆ ಭೇಟಿ ನೀಡಿದಾಗ ಅವರಿಗೂ ಕೂಡ ಈ ವಿಷಯಕ್ಕೆ ಸಂಬಂಧಿಸಿದಂತೆ ಮನವಿಯನ್ನು ಸಲ್ಲಿಸಿದ್ದು ಅವರು ಕೂಡ ಹಾರವಾಡ ತರಂಗಮೇಟಕ್ಕೆ ಭೇಟಿಯನ್ನು ನೀಡಿದ್ದರು.

ಸಿಎಂ ಭೇಟಿ ನೀಡಿದ್ದರಿಂದ ಆದಷ್ಟು ಶೀಘ್ರದಲ್ಲಿ ತಡೆಗೋಡೆ ಕಾಮಗಾರಿ ಮುಗಿಸಬಹುದು ಎನ್ನುವ ನಂಬಿಕೆ ಹೊಂದಿದ್ದೆವು. ಮುಖ್ಯಮಂತ್ರಿ ಬಂದು ಒಂದು ತಿಂಗಳು ಕಳೆದರೂ ಇಲ್ಲಿಯ ತನಕ ಯಾವುದೇ ಕಾಮಗಾರಿ ನಡೆಯದೆ ತೋರಿಕೆಗಾಗಿ ಮಣ್ಣಿನ ಚೀಲ ಹಾಕಲಾಗಿದೆ. ಗುರುವಾರ ಸಮುದ್ರದ ಬಾರಿ ಗಾತ್ರದ ಅಲೆಗಳಿಗೆ ಮನೆಗಳು ಕೊಚ್ಚಿಕೊಂಡು ಹೋಗಿದ್ದು ಈ ವಿಷಮ ಸ್ಥಿತಿ ಮುಂದುವರೆದರೆ ಇನ್ನಷ್ಟು ಮನೆಗಳನ್ನು ಕೊಚ್ಚಿಕೊಂಡು ಹೋಗಲಿದೆ. ಕಡಲು ಕೊರೆತದ ಭಯದಲ್ಲಿ ಆತಂಕದಲ್ಲಿ ಗ್ರಾಮಸ್ಥರು ಜೀವ ಕಳೆಯಬೇಕಾಗಿದೆ.

ಸರ್ಕಾರದ ವ್ಯವಸ್ಥೆಯ ವಿಳಂಬ ನೀತಿಯಿಂದಾಗಿ ಹತಾಶರಾಗಿ ಮನವಿ ನೀಡುತ್ತಿದ್ದು ವಾರದೊಳಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ನಿಗದಿತ ಅವಧಿಯೊಳಗೆ ಕ್ರಮ ಕೈಗೊಳ್ಳದಿದ್ದರೆ ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯ ಸಂವಿಧಾನಾತ್ಮಕ ಹೋರಾಟಗಳನ್ನು ಮಾಡಲಾಗುವುದು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ ಮನವಿ ಸ್ವೀಕರಿಸಿದರು. ವಿಧಾನಪರಿಷತ್ ಸದಸ್ಯ ಗಣಪತಿ ಉಳ್ಳೇಕರ, ಮೀನುಗಾರ ಮುಖಂಡ ಗಣಪತಿ ಮಾಂಗ್ರೆ ಮತ್ತು ಗ್ರಾಮಸ್ಥರಾದ ಸಂತೋಷ ದುರ್ಗೇಕರ, ಗಣಪತಿ ಹರಿಕಂತ್ರ, ಥಾಕು ಹರಿಕಂತ್ರ, ಸದಾ ಹರಿಕಂತ್ರ ಇತರೆ ಗ್ರಾಮಸ್ಥರು ಇದ್ದರು. ತನ್ನ ಕ್ಷೇತ್ರ ವ್ಯಾಪ್ತಿಯ ಹಾರವಾಡಾದಲ್ಲಿ ಕಡಲ ಕೊರೆತದಿಂದ ಮನೆ ಆಸ್ತಿ ಪಾಸ್ತಿ ಹಾನಿಯಾಗಿದ್ದು, ಮತ್ತಷ್ಟು ಹಾನಿ ಸಂಭವಿಸುವ ಸಾಧ್ಯತೆ ಇರುವ ಕುರಿತು, ಬೆಂಗಳೂರಿನಲ್ಲಿದ್ದ ಶಾಸಕ ಸತೀಶ ಸೈಲ್,ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಸ್ಥಳೀಯ ಮೀನುಗಾರ ಹಾಗೂ ಮತ್ತಿತರರ ಜೀವ ರಕ್ಷಣೆ ಹಾಗೂ ಆಸ್ತಿ ಪಾಸ್ತಿ ರಕ್ಷಣೆಗೆ ವಿಶೇಷ ಒತ್ತು ನೀಡುವಂತೆ ವಿನಂತಿಸಿದ್ದು, ಸ್ಥಳೀಯರ ಸಮಸ್ಯೆಗೆ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗಲಿ ಎನ್ನುವುದು ಪ್ರಜ್ಞಾತರ ಅನಿಸಿಕೆಯಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button