ಸರ್ಕಾರಿ ಹನುಮಂತ ಬೆಣ್ಣೆ ಪದವಿಪೂರ್ವ ಕಾಲೇಜ್‌ಗೆ ಮೂರು ಕಂಪ್ಯೂಟರ್ ಕೊಡುಗೆ

ಕುಮಟಾ: ದಿ. ಹನುಮಂತ ಬೆಣ್ಣೆ ಅವರ 106ನೇ ಜನ್ಮ ದಿನದ ಪ್ರಯುಕ್ತ ಬೆಣ್ಣೆ ಕುಟುಂಬವು ಮೂರು ಕಂಪ್ಯೂಟರ್‌ಗಳನ್ನು ಕುಮಟಾ ನೆಲ್ಲಿಕೇರಿಯ ಸರ್ಕಾರಿ ಹನುಮಂತ ಬೆಣ್ಣೆ ಪದವಿಪೂರ್ವ ಕಾಲೇಜ್‌ಗೆ ಶನಿವಾರ ಕೊಡುಗೆಯಾಗಿ ನೀಡುವ ಮೂಲಕ ಶೈಕ್ಷಣಿಕ ಪ್ರೇಮ ಮೆರೆಯಿತು. ಪಟ್ಟಣದ ಹಳೇ ಹೆರವಟ್ಟಾದವರಾದ ಬೆಣ್ಣೆ ಕುಟುಂಬವು ಪ್ರತಿ ವರ್ಷ ದಿ. ಹನುಮಂತ ಬೆಣ್ಣೆ ಅವರ ಜನ್ಮ ದಿನದ ಪ್ರಯುಕ್ತ ನೆಲ್ಲಿಕೇರಿಯ ಸರ್ಕಾರಿ ಹನುಮಂತ ಬೆಣ್ಣೆ ಪದವಿಪೂರ್ವ ಕಾಲೇಜ್‌ಗೆ ಅಗತ್ಯವಾದ ಪರಿಕರಗಳನ್ನು ನೀಡುವ ಮೂಲಕ ಕಾಲೇಜ್‌ನ ಅಭಿವೃದ್ಧಿಗೆ ತಮ್ಮ ಕೈಲಾದ ನೆರವನ್ನು ನೀಡುತ್ತಾ ಬಂದಿದ್ದಾರೆ. ಈ ವರ್ಷ ಕಾಲೇಜ್‌ಗೆ ಕಂಪ್ಯೂಟರ್‌ಗಳ ಅಗತ್ಯವಿರುವುದನ್ನು ಮನಗಂಡ ಬೆಣ್ಣೆ ಕುಟುಂಬವು ದಿ. ಹನುಮಂತ ಬೆಣ್ಣೆ ಅವರ 106ನೇ ಜನ್ಮ ದಿನದ ಪ್ರಯುಕ್ತ ಮೂರು ಕಂಪ್ಯೂಟರ್‌ಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಶೈಕ್ಷಣಿಕ ಪ್ರೇಮ ಮೆರೆಯಿತು.

ಈ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜ್ ಉಪನ್ಯಾಸಕರಾದ ಆನಂದು ನಾಯ್ಕ ಅವರು, ಕಾಲೇಜ್‌ಗೆ ಬೆಣ್ಣೆ ಕುಟುಂಬದ ಸಹಾಯ, ಸಹಕಾರದ ಬಗ್ಗೆ ಅಭಿಮಾನದಿಂದ ನುಡಿದರು. ಕಾಲೇಜ್ ಪ್ರಾಂಶುಪಾಲ ಸತೀಶ್ ನಾಯ್ಕ ಮಾತನಾಡಿ, ಕಾಲೇಜ್‌ಗೆ ಪ್ರತಿ ವರ್ಷ ಒಂದಲ್ಲ ಒಂದು ರೀತಿಯಲ್ಲಿ ನೆರವು ನೀಡುತ್ತಿರುವ ಬೆಣ್ಣೆ ಕುಟುಂಬ ಕಾರ್ಯ ನಿಜಕ್ಕೂ ಶ್ಲಾಘನೀಯ. ಅವರ ಸಹಾಯ, ಸಹಕಾರ ಸದಾ ನಮ್ಮ ಕಾಲೇಜ್ ಮೇಲೆ ಇರಲಿ ಎಂದು ಆಶಿಸಿದರು. ಬಳಿಕ ಕಾಲೇಜ್‌ನ ಎಲ್ಲ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಬೆಣ್ಣೆ ಕುಟುಂಬದ ವಿನಾಯಕ ಹನುಮಂತ ನಾಯಕ, ಪ್ರಸನ್ನ ವಾಸುದೇವ ನಾಯಕ, ಪೂರ್ಣ ಪ್ರಸನ್ನ ನಾಯಕ, ಕಾಲೇಜ್ ಉಪನ್ಯಾಸಕರು ಇದ್ದರು.

ವಿಸ್ಮಯ ನ್ಯೂಸ್, ಕುಮಟಾ

Exit mobile version