ಮಾರುಕಟ್ಟೆಗೆ ಬಂದ ಮೀನಿನಲ್ಲಿ ಹುಳುಗಳು: ಕೊಳೆತು ದುರ್ನಾತ: ಆಗಿದ್ದೇನು ನೋಡಿ?

ಮೀನು ಕೊಳ್ಳುವ ಮುನ್ನ ಪರಿಶೀಲಿಸಿ: ಇಲ್ಲದಿದ್ರೆ ಕಾದಿದೆ ಅಪಾಯ

ಅಂಕೋಲಾ : ಮೀನು ಖರೀದಿಗೆಂದು ಮೀನು ಪೇಟೆಗೆ ಹೋದ ಗ್ರಾಹಕರೊಬ್ಬರು,ತಾವು ಖರೀದಿಸಿದ ಮೀನಿನ ಹೊಟ್ಟೆಯೊಳಗೆ ಹುಳಗಳಿರುವುದನ್ನು ಕಂಡು ಶಾಕ್ ಆಗಿದ್ದಾರೆ. ಈ ಕುರಿತು ಮೀನು ಮಾರಾಟ ಮಾಡಿದ ಮಹಿಳೆಗೆ ವಿಚಾರಿಸಿದಾಗ ಆ ಮೀನನ್ನು ಬದಲಿಸಿ ಕೊಟ್ಟಿದ್ದಾರೆ .ಆ ಮೀನುಗಳನ್ನು ಸಹ ಕತ್ತರಿಸಿ ನೋಡಿದಾಗ ಆ ಮೀನುಗಳಲ್ಲಿಯೂ,ಹುಳಗಳು ಪತ್ತೆಯಾಗಿದ್ದಲ್ಲದೇ , ಮೀನು ಮಾಂಸ ಕೊಳೆತು ದುರ್ನಾಥ ಬೀರುತ್ತಿರುವ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿ ,ಈ ಮೀನುಗಳನ್ನು ಎಲ್ಲಿಂದ ತಂದಿದ್ದೀರಿ ಎಂದು ಮೀನು ಮಾರಾಟಗಾರರಿಗೆ ಪ್ರಶ್ನಿಸಿದ್ದಾರೆ.

ಈ ವೇಳೆಗೆ ಸರಿಯಾಗಿ ಉತ್ತರಿಸದ ಅವರು ಮಲ್ಪೆ ಕಡೆಯಿಂದ,ಗಾಡಿಯಲ್ಲಿ ತುಂಬಿಕೊಂಡು ಬಂದು ಮಾರಾಟ ಮಾಡುವವರಿಂದ ಚಿಲ್ಲರೆ ಖರೀದಿಸಿ ಮಾರಾಟ ಮಾಡುತ್ತಿದ್ದೇವೆ ಎಂದು ಅಸ್ಪಷ್ಟ ಉತ್ತರ ನೀಡಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯಿಂದ ಗಿರೀಶ್ ನಾಯ್ಕ ಅವರು ಈ ವಿಷಯವನ್ನು ಪುರಸಭೆ ಮುಖ್ಯ ಅಧಿಕಾರಿಗಳ ಗಮನಕ್ಕೆ ತಂದು,ಮೀನು ಮಾರುಕಟ್ಟೆಯಲ್ಲಿ ಮಾರಾಟವಾಗುವ ಮೀನು ಮತ್ತು ಮಾಂಸಗಳ ( ಆಹಾರ ಗುಣಮಟ್ಟ ಸುರಕ್ಷತೆ ಬಗ್ಗೆ) ಸಂಬಂಧಿಸಿದವರಿಗೆ ಎಚ್ಚರಿಸುವಂತೆ ಮತ್ತು ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ.

ವಿಜಯ್ ಪಿಳ್ಳೆ ಎನ್ನುವ ಸಾಮಾಜಿಕ ಕಾರ್ಯಕರ್ತರು ಸಹ ಇಂತಹ ವಿಷಯಗಳನ್ನು ಆಡಳಿತ ವರ್ಗ ಗಂಭೀರವಾಗಿ ಪರಿಗಣಿಸಿ, ಜನರ ಮತ್ತು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರದಂತೆ ಕ್ರಮ ವಹಿಸಲು ವಿನಂತಿಸಿದ್ದಾರೆ. ಪುರಸಭೆಯ ಅಧಿಕಾರಿಗಳು ಮೀನು ಪೇಟೆಗೆ ಸ್ಥಳ ಪರಿಶೀಲನೆಗೆ ಹೋಗಿದ್ದು,ಈ ಕುರಿತು ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ.

ಶೈತ್ಯಗಾರದಲ್ಲಿಡುವ ಮೀನುಗಳ ಸಂರಕ್ಷಣೆಯ ವೇಳೆ ಅಪಾಯಕಾರಿ ಫಾರ್ಮಲಿನ್ ( ಶವ ಕೆಡದಂತೆ ಲೇಪಿಸುವ ದ್ರಾವಣ ) ಬಳಕೆ ಬಗ್ಗೆಯೂ ಈ ಹಿಂದೆ ಕೆಲವೆಡೆ ದೂರು ಕೇಳಿಬಂದಿದ್ದು,ಮತ್ರ್ಯ ಪ್ರಿಯರಿಗೆ ಮಾರಕವಾದ ಸುದ್ದಿ ಕೇಳಿಬಂದಿತ್ತು. ಹಾಗಾಗಿ ಸಂಬಂಧಿತ ಎಲ್ಲಾ ಇಲಾಖೆಗಳು ಆಗಾಗ ಎಲ್ಲಾ ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲಿಸುತ್ತಾ,ನಾಗರಿಕ ಸುರಕ್ಷತೆಗೆ ಒತ್ತು ನೀಡಬೇಕೆಂಬ ಮಾತು ಪ್ರಜ್ಞಾವಂತ ವಲಯದಿಂದ ಕೇಳಿಬಂದಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version