ಅಂಕೋಲಾ: ತನ್ನ ಸ್ವಂತ ಭೂಮಿಯನ್ನು, ಕೆಲ ಶರತ್ತುಗಳೊಂದಿಗೆ ಬೇರೊಂದು ಇಲಾಖೆಗೆ ಕಟ್ಟಡ ಕಟ್ಟಲು ಅನುಮತಿ ನೀಡಿದ್ದ, ಕಂದಾಯ ಇಲಾಖೆಗೆ, ಈಗ ತಮ್ಮದೇ ಗ್ರಾಮ ಚಾವಡಿ ಕಾರ್ಯಾಲಯಕ್ಕೆ ಬೆಳಕಿನ ಭಾಗ್ಯವಿಲ್ಲದಂತಾಗಿ,ಅಲ್ಲಿನ ಸಿಬ್ಬಂದಿಗಳು ಮಬ್ಬುಗತ್ತಲಲ್ಲಿ ಕಾರ್ಯ ನಿರ್ವಹಿಸುವಂತಾಗಿದ್ದು ಆಡಳಿತ ವ್ಯವಸ್ಥೆಯನ್ನೇ ಅಣಕಿಸುತ್ತಿದೆ.ಇದೇ ಕಟ್ಟಡದಲ್ಲಿ ಬೇರೊಂದು ಇಲಾಖೆ ರೆಂಟ್ ನೀಡುತ್ತಿದೆ.
ಆದರೆ ಇವಕ್ಕೆಲ್ಲ ಹಿರಿಯಣ್ಣನಂತಿರುವ ಕಂದಾಯ ಇಲಾಖೆ ಕಛೇರಿಗೆ ಮಾತ್ರ ಕರೆಂಟ್ ಇರದಿರುವುದು ವಿಪರ್ಯಾಸವೇ ಸರಿ ಹಂಚಿನ ಮೇಲ್ಚಾವಣಿ ಹೊಂದಿದ್ದ ಹಳೆಯ ಕಟ್ಟಡದಲ್ಲಿದ್ದ ಸರ್ಕಾರಿ ಕಛೇರಿಯೊಂದು,ಕಾಂಕ್ರೀಟ್ ಸ್ಲ್ಯಾಬ್ ಇರುವ ಬೇರೊಂದು ಕಟ್ಟಡಕ್ಕೆ ಸ್ಥಳಾಂತರ ಗೊಂಡಿತ್ತಾದರೂ, ಊದುವುದನ್ನು ಕೊಟ್ಟು ಭಾರಿಸುವುದನ್ನು ಪಡೆದುಕೊಂಡಂತಾಗಿದೆ ಇಲ್ಲಿನ ಪರಿಸ್ಥಿತಿ. ಜನರು ಇಲ್ಲಿ ಕೆಲಸಕ್ಕೆ ಬರಬೇಕಾದರೆ ಕೆಲವೊಮ್ಮೆ ಕೈಯಲ್ಲಿ ಟಾರ್ಚ್ ಹಿಡಿದು ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಇದಕ್ಕೆ ಕಾರಣ ಈ ಸರ್ಕಾರಿ ಕಚೇರಿಯಲ್ಲಿ ಮೇಲ್ನೋಟಕ್ಕೆ ಸ್ವಿಚ್ ಬೋರ್ಡ್,ಫ್ಯಾನು,ಟ್ಯೂಬ್ ಲೈಟ್ ಗಳು ಎಲ್ಲವೂ ಇದ್ದರೂ ಕರೆಂಟ್ ಮಾತ್ರ ಈವರೆಗೂ ಇಲ್ಲವೇ ಇಲ್ಲ ಎನ್ನುವಂತಾಗಿದೆ. ಹೀಗಾಗಿ ಇಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಬ್ಬುಗತ್ತಲಲ್ಲಿಯೇ ಕರ್ತವ್ಯ ನಿರ್ವಹಿಸುವಂತಾಗಿದೆ. ಇದರಿಂದ ಸಾರ್ವಜನಿಕರು ಕೆಲಸಕ್ಕಾಗಿ ಕಚೇರಿಗೆ ಬಂದಾಗ ಕರೆಂಟ್ ಇಲ್ಲದೇ, ಕೆಲ ಕಾರಣಗಳಿಂದ ಒಮ್ಮೊಮ್ಮೆ ಕೆಲಸ ಕಾರ್ಯಗಳು ವಿಳಂಬವಾಗುತ್ತದೆ.
ಅಂಕೋಲಾ ಪಟ್ಟಣದಲ್ಲಿರುವ ಕಂದಾಯ ಇಲಾಖೆಗೆ ಸಂಬಂಧಿಸಿದ ಗ್ರಾಮ ಚಾವಡಿಯಲ್ಲಿ ಕಳೆದ ಕೆಲ ತಿಂಗಳುಗಳಿಂದ ಕರೆಂಟ್ ಇಲ್ಲದೆ ಮಬ್ಬುಗತ್ತಲಿನಲ್ಲಿಯೇ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಇನ್ನು ಈ ಕಚೇರಿಗೆ ಬರುವ ಸಾರ್ವಜನಿಕರು ಸಹ ಮಳೆಗಾಲ ಮತ್ತಿತರ ಕೆಲ ಸಂದರ್ಭಗಳಲ್ಲಿ ಕೈಯಲ್ಲಿ ಟಾರ್ಚ್ ಹಿಡಿದುಕೊಂಡೆ ಒಳಗೆ ಬರಬೇಕಾಗಿದೆ ಎನ್ನುವಷ್ಟರ ಮಟ್ಟಿಗೆ ಇಲ್ಲಿ ಬೆಳಕಿನ ಸಮಸ್ಯೆ ಇದೆ. ಗ್ರಾಮಚಾವಡಿಗೆ ಸಂಬಂಧಿಸಿದ ಕೆಲ ದಾಖಲಾತಿಗಳಿಗಾಗಿ ಅರ್ಜಿ ಸಲ್ಲಿಸಿದರೂ ಕೆಲವೊಮ್ಮೆ ಕೆಲಸಗಳು ಆಗುತ್ತಿಲ್ಲ. ಸಬ್ ರೆಜಿಸ್ಟರ್ ಕಚೇರಿ ಮತ್ತು ಗ್ರಾಮಚಾವಡಿ ಕೆಲಸ ಕಾರ್ಯಗಳಿಗೆ ದಿನನಿತ್ಯ ಇಲ್ಲಿ ನೂರಾರು ಜನರು ಬಂದು ಹೋಗುತ್ತಿರುತ್ತಾರೆ.
ಆದರೆ ಮೇಲ್ಮಹಡಿಯಲ್ಲಿರುವ ಇಲ್ಲಿನ ಕಛೇರಿ ತಲುಪಲು ಕೇವಲ ಮೆಟ್ಟಿಲುಗಳು ಮಾತ್ರ ಇದ್ದು, ರ್ಯಾಂಪ್ ಇಲ್ಲವೇ ವಿಲ್ ಚೇರ್ ವ್ಯವಸ್ಥೆ ಇಲ್ಲದೇ, ವೃದ್ಧರು, ವಿಕಲಚೇತನರು ಇಲ್ಲಿನ ಕಚೇರಿಗೆ ಬಂದು ಹೋಗಲು ಪರಿತಪಿಸುವಂತಾಗಿದೆ. ಈ ಮೊದಲು ಬಸ್ ಸ್ಟ್ಯಾಂಡ್ ಸಮೀಪದ ಸಮಾಜ ಮಂದಿರದ ಆವರಣದಲ್ಲಿ ಹಳೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗ್ರಾಮ ಚಾವಡಿಯನ್ನು,ಪಟ್ಟಣ ಪಂಚಾಯಿತಿನ ಹಳೆಯ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.
ಅಸಲಿಗೆ ಈ ಕಟ್ಟಡ ಇರುವ ಮೂಲ ಜಾಗ ಕಂದಾಯ ಇಲಾಖೆಗೆ ಸೇರಿದ್ದು,ಷರತ್ತಿಗೊಳಪಡಿಸಿ ಸ್ಥಳೀಯ ಸಂಸ್ಥೆಗೆ ನೀಡಲಾಗಿತ್ತು.ಅಂದು ಪಟ್ಟಣ ಪಂಚಾಯತ ಕಾರ್ಯಾಲಯವಾಗಿದ್ದ ಇಲ್ಲಿನ ಕಟ್ಟಡ ಬಿಟ್ಟು,ಪುರಸಭೆಯವರು ಹೊಸ ಕಟ್ಟಡಕ್ಕೆ ಸ್ಥಳಾಂತರ ಗೊಂಡಿದ್ದಾರೆ.ಈ ವೇಳೆ ಸಬ್ ರಜಿಸ್ಟರ್ ಕಚೇರಿಯನ್ನು ಪಟ್ಟಣ ಪಂಚಾಯತ್ ಹಳೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಡಲಾಗಿದೆ.ಅದಕ್ಕಾಗಿ ಉಪನೊಂದಣಾಧಿಕಾರಿಗಳ ಕಚೇರಿಯವರು ಬಾಡಿಗೆ ನೀಡುತ್ತಿದ್ದಾರೆ.
ಇವರಿಗೆ ಈ ಕಟ್ಟಡದಲ್ಲಿ ವಿದ್ಯುತ್ ಸಹಿತ ಎಲ್ಲ ಮೂಲ ಸೌಕರ್ಯ ಒದಗಿಸಿಕೊಡಲಾಗಿದೆ.ಆದರೆ ತನ್ನ ಸ್ವಂತ ಜಾಗದಲ್ಲಿಯೇ ಕಾರ್ಯನಿರ್ವಹಿಸುವಂತಾದ ಕಂದಾಯ ಇಲಾಖೆಯ ಗ್ರಾಮ ಚಾವಡಿಗೆ ಮಾತ್ರ,ಕಟ್ಟಡದ ಭಾಗ್ಯ ದೊರೆಯಿತಾದರೂ,ಬೆಳಕಿನ ಭಾಗ್ಯವಿಲ್ಲದೇ, ಈ ಎಲ್ಲ ಇಲಾಖೆಗಳಿಗೆ ಹಿರಿಯಣ್ಣ ನಂತಿರುವ ಕಂದಾಯ ಇಲಾಖೆ ಹೆಸರಿಗೆ ಮಾತ್ರ ಹೆಬ್ಬಾರ ಎನ್ನುವಂತಾಗಿದೆ ಎಂಬ ಅಣಕು ಮಾತು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
ಇಲ್ಲಿನ ದುಸ್ಥಿತಿ ಕುರಿತು ಸಾಮಾಜಿಕ ಕಾರ್ಯಕರ್ತ ಮತ್ತು ವಕೀಲ ಉಮೇಶ್ ನಾಯ್ಕ ಮಾತನಾಡಿ,ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದ ಈ ಕಚೇರಿ ಕಾರ್ಯನಿರ್ವಹಣೆ ಒಂದರ್ಥದಲ್ಲಿ ಸಂವಿಧಾನದ ನಿಯಮಾವಳಿಗಳಿಗೆ ವಿರುದ್ಧವಾಗಿದ್ದು,ಸಂಬಂಧಿತ ಜಿಲ್ಲಾಧಿಕಾರಿಗಳು ಕೂಡಲೇ ಈ ಕುರಿತು ಗಮನಹರಿಸುವಂತೆ ಆಗ್ರಹಿಸಿದ್ದಾರೆ.
ಎಲ್ಲವೂ ಇದ್ದು ಈ ಕಚೇರಿಗೆ ಕರೆಂಟ್ ಇಲ್ಲದಿರುವುದೇಕೆ? ಸಂಬಧಿತ ಅಧಿಕಾರಿಗಳ ನಿರ್ಲಕ್ಷ ಹಾಗೂ ಬೇಜವಾಬ್ದಾರಿತನವೇ ? ಅಥವಾ ಸಂಬಂಧಿತ ಕೆಲ ಇಲಾಖೆಗಳ ಹೊಂದಾಣಿಕೆಯ ಕೊರತೆಯೇ ?.ಈ ಕತ್ತಲ ಭಾಗ್ಯಕ್ಕೆ ಮುಕ್ತಿ ಕರುಣಿಸಿ ಬೆಳಕು ನೀಡುವವರಾರು ಎನ್ನುವ ಸಾರ್ವಜನಿಕರ ಪ್ರಶ್ನೆಗೆ ಸಂಬಂಧಿಸಿದವರೇ ಉತ್ತರಿಸಬೇಕಿದೆ.