ಅಂಕೋಲಾ: ಕಳೆದ ಲೋಕಸಭಾ ಚುನಾವಣೆಗೂ ಪೂರ್ವ ( ಫೆಬ್ರವರಿ 2024 ರಲ್ಲಿ ) ತಾಲೂಕಿನ ಸಿ.ಪಿ.ಐ ಆಗಿ ಕರ್ತವ್ಯಕ್ಕೆ ಹಾಜರಾಗಿದ್ದ ಶ್ರೀಕಾಂತ ಫ ತೋಟಗಿ ಅವರು, ಇದೀಗ ಇಲಾಖೆಯ ಆದೇಶದಂತೆ ಅಂಕೋಲಾ ತಾಲೂಕಿನಿಂದ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ. ಕಳೆದ ಆರು ಏಳು ತಿಂಗಳ ಅಲ್ಪ ಅವಧಿಯಲ್ಲಿಯೇ ಉತ್ತಮ ಸೇವೆ ನೀಡಿ ಹಲವರ ಮನೆಗೆದ್ದಿರುವ ಈ ಅಧಿಕಾರಿ,ಚುನಾವಣೆ ಕಟ್ಟು ನಿಟ್ಟು ಪಾಲನೆ, ಶಿರೂರು ಗುಡ್ಡ ಕುಸಿತ ದುರಂತದಂತ ಕ್ಲಿಷ್ಣ ಸಮಯದಲ್ಲಿ ಇಲಾಖೆಯ ಹಿರಿಯರ ನಿರ್ದೇಶನದಲ್ಲಿ,ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ,ಹಾಗೂ ಇತರೆ ಇಲಾಖೆಗಳ ಸಮನ್ವಯತೆಯೊಂದಿಗೆ ಜನ ಮೆಚ್ಚುಗೆ ರೀತಿಯ ಸೇವೆ ನೀಡಿದ್ದರು.
ಈ ಅವಧಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಯತ್ನ ನಡೆಸಿದ್ದ ಅವರು,ಮಾನವೀಯ ನೆಲೆಯಲ್ಲಿಯೂ ಕೆಲ, ಸಾಂಸಾರಿಕ ಮತ್ತಿತರ ಪ್ರಕರಣಗಳನ್ನು ಇತ್ಯರ್ಥ ಪಡಿಸಿ, ಕೆಲವರ ಬಾಳಿಗೆ ಬೆಳಕು ತೋರಿಸಿದ್ದರು. ಸಿಪಿಐ ಶ್ರೀಕಾಂತ ತೋಟಗಿ ಅವರು,ತಮ್ಮ ನಗುಮುಖ ಹಾಗೂ ಸರಳ ನಡೆ ನುಡಿಗಳಿಂದ ಜನಸಾಮಾನ್ಯರ ಮನ ಗೆದ್ದು,ಪೋಲಿಸ್ ಇಲಾಖೆಗೆ ಗೌರವ ತಂದು ಕೊಟ್ಟಿದ್ದರು. ಇದೀಗ ಅವರು ಅಂಕೋಲಾದಿಂದ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದು, ಇವರ ಸ್ಥಾನದಲ್ಲಿ ಧಾರವಾಡ ಮಹಿಳಾ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಠಪತಿ ಅವರು ಅಂಕೋಲಾ ಠಾಣೆಗೆ ಸೆಪ್ಟೆಂಬರ್ 1 ಇಲ್ಲವೇ 2 ರಂದು ಹಾಜರಾಗಲಿದ್ದಾರೆ.
ಸಿಪಿಐ ಶ್ರೀಕಾಂತ್ ತೋಟಗಿ ಇವರನ್ನು ಅಂಕೋಲಾದ ಕೆಲ ಸಾರ್ವಜನಿಕ ಪ್ರಮುಖರು, ಬ ಬೀಳ್ಕೊಟ್ಟು, ಶುಭ ಹಾರೈಸಿದರು. ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುಜಾತ ಗಾಂವಕರ, ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷ ಪುರುಷೋತ್ತಮ ನಾಯ್ಕ ಶಿರೂರು, ಪ್ರಮುಖರಾದ ಮೋನಪ್ಪ ನಾಯ್ಕ ಭಾವಿಕೇರಿ, ಸುರೇಶ ನಾಯ್ಕ ಅಸ್ಲಗದ್ದೆ,ಪ್ರದೀಪ್ ನಾಯಕ ಕಣಗಿಲ, ಮಂಜುನಾಥ ವಿ ನಾಯ್ಕ , ವಿಜಯ ಪಿಳ್ಳೆ, ಮಹೇಶ ಗೌಡ ಹೊಸಗದ್ದೆ, ಪ್ರಕಾಶ ನಾಯ್ಕ ಪಳ್ಳಿಕೇರಿ, ಸತೀಶ ನಾಯ್ಕ ಮುಂತಾದವರಿದ್ದು, ತೋಟಗಿ ಅವರ ಸೇವೆಗೆ ಮೆಚ್ಚುಗೆ ಸೂಚಿಸಿ,ಮುಂದಿನ ಸೇವಾ ಅವಧಿಗೆ ಶುಭ ಕೋರಿ ಬೀಳ್ಕೊಡುಗೆಯ ಮಾತುಗಳನ್ನಾಡಿದರು.
ಸ್ಥಳೀಯರ ಪ್ರೀತಿಯ ಸನ್ಮಾನ ಗೌರವ ಸ್ವೀಕರಿಸಿ ಮಾತನಾಡಿದ ಸಿಪಿಐ ಶ್ರೀಕಾಂತ ತೋಟಗಿಯವರು,ಸರ್ಕಾರಿ ಕೆಲಸ ಎಂದ ಮೇಲೆ ವರ್ಗಾವಣೆ ಅನಿವಾರ್ಯ.ಅಂಕೋಲಾದಲ್ಲಿ ಕೆಲವೇ ತಿಂಗಳುಗಳ ಕಾಲ ಸೇವೆ ಮಾಡಿದ್ದರೂ,ಇಲ್ಲಿನ ಐತಿಹಾಸಿಕ,ಧಾರ್ಮಿಕ , ಪ್ರಾಕೃತಿಕ ಮತ್ತಿತರ ಕ್ಷೇತ್ರಗಳ ಹಿರಿಮೆಗೆ ಮನಸೋತಿರುವೆ.ಕಾನೂನು ಪರಿಪಾಲನೆಯಲ್ಲಿ ಕರಾವಳಿಗರ ಮನೋಭಾವನೆಗಳು,ಅಧಿಕಾರಿ ವರ್ಗಕ್ಕೆ ಉತ್ತಮ ಸಹಕಾರ ನೀಡುವಂತಿದೆ.ನನ್ನ ಸೇವಾ ಅವಧಿಯಲ್ಲಿ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ವರ್ಷಗಳಿಗೂ ಕಡಿಮೆ ಅವಧಿಯಲ್ಲಿ ಸೇವೆ ಸಲ್ಲಿಸಿದ ಈ ಅಧಿಕಾರಿ ಎಲ್ಲಿಯೂ ತನ್ನ ಪೊಲೀಸ್ ದರ್ಪ ತೋರಿಸದೇ ಜನಪರ ಆಡಳಿತ ನೀಡಿರುವುದಕ್ಕೆ,ತಾಲೂಕಿನ ಹಲವು ಪ್ರಜ್ಞಾವಂತರು ಮೆಚ್ಚುಗೆ ಸೂಚಿಸಿದ್ದಾರೆ.