ಅಂಕೋಲಾ : ಆ್ಯಸಿಡ್ ಸಾಗಿಸುತ್ತಿದ್ದ ಟ್ಯಾಂಕರ್ ಒಂದು ಹೆದ್ದಾರಿ ಅಂಚಿಗೆ ಪಲ್ಟಿಯಾಗಿ ಬಿದ್ದು ಕೆಲ ಕಾಲ ಆತಂಕ ಮೂಡಿಸಿದ ಘಟನೆ ರಾ.ಹೆ 63 ರ ಯಲ್ಲಾಪುರ ಅಂಕೋಲಾ ಮಾರ್ಗ ಮಧ್ಯೆ ಅಗಸೂರು ಸಮೀಪ ಅಂಕೋಲಾ ತಾಲೂಕಿನ ಕಂಚಿನ ಬಾಗಿಲ – ನವಗದ್ದೆ ಪ್ರದೇಶದಲ್ಲಿ ಸಂಭವಿಸಿದೆ.
ಆಂಧ್ರದಿಂದ ಗೋವಾದತ್ತ ಸಲ್ಪರಿಕ್ ಆ್ಯಸಿಡ್ ಸಾಗಿಸುತ್ತಿದ್ದ ಟ್ಯಾಂಕರ್ ಲಾರಿ, ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಅಂಚಿಗೆ ಪಲ್ಪಿಯಾಗಿಯಾಗಿದೆ. ಈ ಆಕಸ್ಮಿಕ ರಸ್ತೆ ಅವಘಡದಲ್ಲಿ ಸ್ವಲ್ಪರಿಕ್ ಆಸಿಡ್ ತುಂಬಿದ್ದ ಟ್ಯಾಂಕರ್ , ಲಾರಿ ಕ್ಯಾಬಿನ್ ನಿಂದ ಬೇರ್ಪಟ್ಟು ,ಜಖಂಗೊಂಡು ಸೋರಿಕೆಯಾಗಲಾರಂಭಿಸಿದೆ.ಸುದ್ದಿ ತಿಳಿದ ಅಗ್ನಿಶಾಮಕ , ಪೊಲೀಸ್ ಮತ್ತಿತರ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳ ಪರಿಶೀಲನೆ ಕೈಗೊಂಡು ಸುರಕ್ಷತಾ ಕ್ರಮಗಳಿಗೆ ಒತ್ತು ನೀಡಿದ್ದಾರೆ.
ಈ ವೇಳೆ ಕೆಲಕಾಲ ಹುಬ್ಬಳ್ಳಿ – ಅಂಕೋಲಾ ಮಾರ್ಗ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಇತರೆ ವಾಹನಗಳ ಸುಗಮ ಸಂಚಾರಕ್ಕೆ ವ್ಯತ್ಯಯವಾಗಿತ್ತು. ಸಲ್ಫರಿಕ್ ಆಸಿಡ್ ಮಾನವ ಇಲ್ಲವೇ ಇತರೇ ಜಾನುವಾರುಗಳ ಅಂಗಾಂಗಗಳಿಗೆ ತಗುಲಿದರೆ ಸುಡುವ ಇಲ್ಲವೇ ಇನ್ನಿತರೆ ರೀತಿಯ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಸುಮಾರು 30 ಕ್ಕೂ ಹೆಚ್ಚು ಟನ್ ಪ್ರಮಾಣದ ಎಸಿಡ್ ನ್ನು ,ಯಾರಿಗೂ ಅಪಾಯವಾಗದಂತೆ ಹರಿಯಬಿಡುವುದು ಸವಾಲಿನ ಕೆಲಸವಾಗಿತ್ತು.
ಅದಕ್ಕಾಗಿ ಸಂಬಂಧಿತ ಪರಿಣಿತ ತಂಡವನ್ನು ಕರೆಯಿಸಿ,ಸೋರಿಕೆಯಾಗುತ್ತಿರುವ ಎಸಿಡ್ ಮೇಲೆ ಸೋಡಾ ಯ್ಯಾಶ್ ಸಿಂಪಡಿಸಿ,ಎಸಿಡ್ ನ ತೀಕ್ಷ್ಣತೆ ಕಡಿಮೆ ಮಾಡುವ ಯತ್ನ ಮಾಡಲಾಯಿತು. ಹೆದ್ದಾರಿ ಅಂಚಿಗೆ ಜೆಸಿಬಿ ಬಳಸಿ ದೊಡ್ಡದಾದ ಗುಂಡಿ ತೆಗೆದು ,ಹರಿದು ಬರುವ ಆಸಿಡ್ ದ್ರಾವಣ ಅಲ್ಲಿ ಶೇಖರ ಗೊಳ್ಳುವಂತೆ ಮಾಡಿ,ಅದು ಅಕ್ಕ ಪಕ್ಕದ ಹರಿಯುವ ನೀರು ಮತ್ತಿತರ ಪ್ರದೇಶಕ್ಕೆ ಸೇರ್ಪಡೆಗೊಳ್ಳದಂತೆ ಕ್ರಮ ಕೈಗೊಳ್ಳಲಾಯಿತು.
ಬಹು ಹೊತ್ತಿನ ಕಾರ್ಯಚರಣೆ ಬಳಿಕ ಟ್ಯಾಂಕರ್ ನಿಂದ ಅಸಿಡನ್ನು ಖಾಲಿ ಮಾಡಿಸಲಾಯಿತು.ಗುಂಡಿಯಲ್ಲಿ ಶೇಖರ ಗೊಂಡಿರುವ ಮತ್ತು ತೀಕ್ಷ್ಣತೆ ಕಡಿಮೆಯಾಗುತ್ತಿರುವ ಆ ರಾಸಾಯನಿಕ ದ್ರಾವಣವನ್ನು ಸೆಸ್ ಟ್ಯಾಂಕ್ ಇಲ್ಲವೇ ಇತರೆ ಟ್ಯಾಂಕ್ ಗಳ ಮೂಲಕ ವಿಲೇವಾರಿಗೆ ಕೊಂಡೊಯ್ಯಲು ನಿರ್ಧರಿಸಿದಂತಿದ್ದು,ಕಾರ್ಯಾಚರಣೆ ಮುಂದುವರಿಯುವ ಸಾಧ್ಯತೆಗಳಿದೆ. ಸದ್ಯಕ್ಕೆ ಹೆದ್ದಾರಿ ಅಂಚಿಗೆ ಯಾವುದೇ ಅಪಾಯವಾಗದಂತೆ ಬ್ಯಾರಿಕೇಡ್ ಅಳವಡಿಸಿ ಜಾಗೃತೆ ವಹಿಸಲಾಗುತ್ತಿದೆ.
ಉಪ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿ ಗಣಪತಿ ಹೆಗಡೆ,ಅಡಿಷನಲ್ ಎಸ್ಪಿ ಸಿಟಿ ಜಯಕುಮಾರ ,ಡಿವೈಎಸ್ಪಿ ಗಿರೀಶ ,ಪಿಎಸ್ಐ ಗಳಾದ ಉದ್ದಪ್ಪ ಧರೆಪ್ಪನವರ್ , ಸುನೀಲ ಹುಲ್ಲೊಳ್ಳಿ, ಎನ್ ಡಿ ಆರ್ ಎಫ್ ತಂಡ, ಬಿಣಗಾದ ಅದಿತ್ಯ ಬಿರ್ಲಾ ಗ್ರುಪ್ (ಗ್ರಾಸಿಂ ) ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸುನೀಲ, ಅಂಕೋಲಾ ಅಗ್ನಿಶಾಮಕ ಠಾಣಾಧಿಕಾರಿ ಜಯಂತ ನಾಯ್ಕ,ತಹಶೀಲ್ದಾರ್ ಬಿ ಅನಂತ ಶಂಕರ, ಕಂದಾಯ ಇಲಾಖೆಯ ಭಾರ್ಗವ ನಾಯಕ, ತಾ.ಪಂ ಇಓ ಸುನೀಲ ಎಂ ಮತ್ತಿತರ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದು,ಕರ್ತವ್ಯ ನಿರ್ವಹಿಸಿದರು. ಮುಂಜಾಗೃತಾ ಕೃಮವಾಗಿ ಅಂಬುಲೆನ್ಸ್ ಮತ್ತಿತರ ತುರ್ತು ಸೇವೆಗೆ ವಾಹನಗಳನ್ನು ಅಣಿಗೊಳಿಸಲಾಗಿತ್ತು.
ಹೆದ್ದಾರಿ ಗಸ್ತು ವಾಹನ ಸಿಬ್ಬಂದಿಗಳು ಇತರೆ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದು,ಈಗ ಹೆದ್ದಾರಿಯು ಸಂಚಾರಕ್ಕೆ ಮುಕ್ತವಾಗಿದೆ. ಆದರೂ ಮಳೆ ಮತ್ತಿತರ ಕಾರಣಗಳಿಂದ, ಮೈನ್ಸ್ ಲಾರಿ ಸೇರಿದಂತೆ ಇತರೆ ಕೆಲ ವಾಹನಗಳು ನಿಯಂತ್ರಣ ಕಳೆದುಕೊಂಡು ಹೆದ್ದಾರಿ ಅಂಚಿಗೆ ವಾಲುತ್ತಿರುವುದು, ಇತರೆ ವಾಹನಗಳು ಹೆದ್ದಾರಿ ಸಂಚಾರದ ವೇಳೆ ಸುರಕ್ಷಿತ ಚಾಲನೆಗೆ ಆದ್ಯತೆ ನೀಡಬೇಕಿದೆ.ಎಸಿಡ್ ಲಾರಿ ರಸ್ತೆ ಅಪಘಾತದಲ್ಲಿ ಅದೇ ವಾಹನದ ಚಾಲಕನಿಗೂ ಸಣ್ಣಪುಟ್ಟ ಗಾಯ ನೋವುಗಳಾಗಿದ್ದು,ಪ್ರಾಣಪಯದಿಂದ ಪಾರಗಿದ್ದಾನೆ. ಆಸಿಡ್ ಲಾರಿ ರಸ್ತೆ ಅಪಘಾತದ ಘಟನೆ ಕುರಿತಂತೆ ಮತ್ತಷ್ಟು ಹೆಚ್ಚಿನ ಹಾಗೂ ನಿಖರ ಮಾಹಿತಿಗಳು ತಿಳಿದು ಬರಬೇಕಿದೆ.