ಅಂಕೋಲಾ : ಪಟ್ಟಣದ ಮುಖ್ಯ ರಸ್ತೆ ಒಂದರಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದು ಗಂಭೀರ ಗಾಯಗೊಂಡಿದ್ದ ಸವಾರ ,ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾನೆ. ಪಟ್ಟಣದ ಪ್ರಕಾಶ್ ಇಲೆಕ್ಟ್ರಿಕಲ್ಸ್ ಮಾಲಕ, ಹೊಸಗದ್ದೆ ಗ್ರಾಮದ ನಿವಾಸಿಯಾಗಿದ್ದ ಪ್ರಕಾಶ ಸುಭಾಸ ತಳೇಕರ (53), ಮೃತ ದುರ್ದೈವಿ.
ಇದನ್ನೂ ಓದಿ: ಉದ್ಯೋಗಾವಕಾಶ: 1 ಲಕ್ಷದ ವರೆಗೆ ವೇತನ: SSLC, ಡಿಪ್ಲೋಮಾ, ಪದವಿ ಆದವರು ಅರ್ಜಿ ಸಲ್ಲಿಸಿ
ತಾಲೂಕ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ಬೆಳಿಗ್ಗೆ 8.40 ರ ನಂತರ ಕೊನೆ ಉಸಿರುಳಿದರು. ದಿ 11 ಸೆಪ್ಟೆಂಬರ್ 2024ರಂದು ಸಾಯಂಕಾಲ,ಹೊಸಗದ್ದೆಯ ಜನತಾ ಕಾಲನಿಯ ತಮ್ಮ ಮನೆಯಿಂದ ಪಟ್ಟಣದಲ್ಲಿರುವ ಪ್ರಕಾಶ್ ಎಲೆಕ್ಟ್ರಿಕಲ್ ಅಂಗಡಿಗೆ ಬರುತ್ತಿರುವಾಗ,ದಾರಿ ಮಧ್ಯೆ ಅಂಕೋಲಾ ವಲಯ ಅರಣ್ಯಾಧಿಕಾರಿಗಳ ಕಚೇರಿ ಹಾಗೂ ಜೈಹಿಂದ್ ಹೈ ಸ್ಕೂಲ್ ಎದುರಿನ ಮುಖ್ಯ ರಸ್ತೆಯಲ್ಲಿ ಆಕಸ್ಮಿಕ ರಸ್ತೆ ಅಪಘಾತದಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದು, ಕಲೆ, ಕುತ್ತಿಗೆ ಹಿಂಭಾಗ ಸೇರಿದಂತೆ ಅಂಗಾಂಗಗಳಿಗೆ ಗಂಭೀರ ಗಾಯ ನೋವುಗೊಂಡಿದ್ದ .
ನಂತರ ಅವನನ್ನು ಅಂಕೋಲಾದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಕಾರವಾರ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಪಕ್ಕದ ಜಿಲ್ಲೆಯ 2 ಪ್ರತಿಷ್ಠಿತ ಖಾಸಗಿ ಆಸ್ಪತ್ರೆ ಹಾಗೂ ವೆನ್ ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ,ಗಂಭೀರ ಗಾಯಗೊಂಡಿದ್ದ ತಳೇಕರನಿಗೆ ಯಾವುದೇ ರೀತಿಯ ಶಸ್ತ್ರಚಿಕಿತ್ಸೆ ನಡೆಸಲೂ ಕಷ್ಟ ಸಾಧ್ಯವಾಗಿದ್ದು, ಜೀವನ್ಮರಣದ ನಡುವೆ ಹೋರಾಡುವಂತಾಗಿತ್ತು.
ನಂತರ ಅವನನ್ನು ಕೊನೆಯ ಸಮಯಲ್ಲಿ ಆಕ್ಸಿಜನ್ ವ್ಯವಸ್ಥೆಯೊಂದಿಗೆ ಸೆ.13 ರಂದು ಅಂಕೋಲಾ ಸರಕಾರಿ ಆಸ್ಪತ್ರೆಯಲ್ಲಿಡಲಾಗಿತ್ತಾದರೂ, ಬೆಳಿಗ್ಗೆ ಅವರು ಕೊನೆಯುಸಿರೆಳೆದಿದ್ದಾನೆ. ಸರಳ ನಡೆ ನುಡಿಯ ಪ್ರಕಾಶ ತಳೇಕರ, ತನ್ನ ಯೌವನದ ಕಾಲಾವಧಿಯಲ್ಲಿಯೇ , ಸ್ವಾವಲಂಬಿ ಉದ್ಯೋಗದತ್ತ ಮನಸ್ಸು ಮಾಡಿ,ಕಷ್ಟ ಪಟ್ಟು ದುಡಿಯಲಾರಂಬಿಸಿದ್ದ.ಕಳೆದ ಸುಮಾರು 30-35 ವರ್ಷಗಳಿಂದ, ಕರೆಂಟ್ ಫಿಟಿಂಗ್ ಮತ್ತಿತರ ಕೆಲಸ ಕಾರ್ಯಗಳಲ್ಲಿ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಾ ,ಹಂತ ಹಂತವಾಗಿ ಮೇಲೆ ಬಂದು, ತನ್ನದೇ ಆದ ಸ್ವಂತ ಎಲೆಕ್ಟ್ರಿಕಲ್ ಶಾಪ್ ಆರಂಭಿಸಿದ್ದ ಪ್ರಕಾಶ, ಹಲವರ ಪ್ರೀತಿ ವಿಶ್ವಾಸ ಗಳಿಸಿ ಬಾಳಿ ಬದುಕಿದ್ದ.
ಈ ಮೊದಲು ಬಸ್ ನಿಲ್ದಾಣದ ಪಕ್ಕದ ಪ್ರಭು ಕಾಂಪ್ಲೆಕ್ಸ್ ನಲ್ಲಿ ಹಲವು ವರ್ಷ ಬಾಡಿಗೆ ಆಧಾರದಲ್ಲಿ ಅಂಗಡಿ ನಡೆಸಿದ್ದು, ಇತ್ತಿಚೆಗಷ್ಟೇ ಮುಖ್ಯ ಮಾರುಕಟ್ಟೆಯ (ಈ ಹಿಂದೆ ಸಿದ್ಧಿವಿನಾಯಕ ಎಲೆಕ್ಟ್ರಿಕಲ್ಸ್ ಎಂಬ ) ಹೆಸರಿನಲ್ಲಿ ನಡೆಯುತ್ತಿದ್ದ ಕಟ್ಟಡವನ್ನು ತಾನು ಬಾಡಿಗೆ ಪಡೆದು,ಪ್ರಭು ಕಾಂಪ್ಲೆಕ್ಸ್ ನಿಂದ ತನ್ನ ಪ್ರಕಾಶ ಎಲೆಕ್ಟ್ರಿಕಲ್ಸ್ ಅನ್ನು ಸ್ಥಳಾಂತರಿಸಿದ್ದ. ಹೀಗಾಗಿ ತನ್ನ ಮನೆಯಿಂದ ಎಂದಿನಂತೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ತನ್ನ ಬೈಕ್ ಮೇಲೆ ಅಂಗಡಿಗೆ ಬರುತ್ತಿರುವಾಗ, ನಾಯಿ ಅಡ್ಡ ಬಂದು ಇಲ್ಲವೇ ಅದಾವುದೋ ಕಾರಣದಿಂದ ಆಕಸ್ಮಿಕವಾಗಿ ಬ್ರೇಕ್ ಹಾಕಿ, ಬೈಕ್ ಸ್ಕಿಡ್ ಆಗಿ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ.
ಪ್ರಕಾಶ ತಳೇಕರ ಅಕಾಲಿಕ ನಿಧನದ ವಾರ್ತೆ ಕೇಳಿ, ವಿದ್ಯುತ್ ಕಾಮಗಾರಿಗಳಿಗೆ ಸಂಬಂಧಿಸಿದ ಕೆಲ ಯೂನಿಯನ್ ಪದಾಧಿಕಾರಿಗಳು, ಸದಸ್ಯರು,,ತಳೇಕರ್ ಕುಟುಂಬದ,ಆಪ್ತರು ಹಿತೈಷಿಗಳು,ಬಂಧು-ಬಳಗ,ಅಂಗಡಿಯ ಗ್ರಾಹಕರು, ಇತರೆ ಸಾರ್ವಜನಿಕರು ಸೇರಿದಂತೆ ನೂರಾರು ಜನ,ತಾಲೂಕಾಸ್ಪತ್ರೆಗೆ ಆಗಮಿಸಿ ಕಂಬನಿ ಮಿಡಿಯುತ್ತಿರುವ ದೃಶ್ಯ ಕಂಡು ಬಂತು.