ಅಂಕೋಲಾ : ಶಿರೂರು ಗುಡ್ಡ ಕುಸಿತ ದುರಂತ ಸಂಭವಿಸಿ 2 ತಿಂಗಳು ಕಳೆದಿದ್ದು, ಈ ದುರ್ಘಟನೆಯಲ್ಲಿ ಈ ವರೆಗೂ ಪತ್ತೆಯಾಗದ ಸ್ಥಳೀಯ ಜನಗನ್ನಾಥ ನಾಯ್ಕ, ಗೋಕರ್ಣ ಸಮೀಪದ ಗಂಗೆಕೊಳ್ಳ ನಿವಾಸಿ ಲೊಕೇಶ ನಾಯ್ಕ, ಕೇರಳ ಮೂಲದ ಅರ್ಜುನ ಹಾಗೂ ಆತನ ಬೆಂಜ್ ಲಾರಿ ಶೋಧ ಕಾರ್ಯಕ್ಕೆ 3 ನೇ ಬಾರಿಯ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಮುಗ್ದ ಹೆಣ್ಣುಮಕ್ಕಳ ವಂಚಿಸುತ್ತಿದ್ದ ಚಾಲಾಕಿ ಮಹಿಳೆ ಬಂಧನ
ಡ್ರೆಜ್ಜಿಂಗ್ ಮಶೀನ್ ಬಳಸಿ, ಗಂಗಾವಳಿ ನದಿಯಲ್ಲಿ ಎರಡನೇ ದಿನದ ಕಾರ್ಯಚರಣೆ ನಡೆಸಲಾಗುತ್ತಿದ್ದು, ಈ ವೇಳೆ ಕೇರಳದ ಅರ್ಜುನನ ಬೆಂಜ್ ಲಾರಿಯಲ್ಲಿ ಸಾಗಿಸಲಾಗುತ್ತಿತ್ತು ಎನ್ನಲಾದ ಕಟ್ಟಿಗೆಯ ತುಂಡೊಂದು ಪತ್ತೆಯಾಗಿದ್ದು, ಲಾರಿ ನದಿಯಲ್ಲಿ ಜರಿದು ಬಿದ್ದ ಗುಡ್ಡದ ಮಣ್ಣಿನ ರಾಶಿಗಳಡಿ ಸಿಲುಕಿರುವ ಸಾಧ್ಯತೆಗೆ ಪುಷ್ಟಿ ನೀಡಿದಂತಿದೆ.
ಶುಕ್ರವಾರದಿಂದ ಆರಂಭವಾಗಿರುವ ಕಾರ್ಯಾಚರಣೆ ವೇಳೆಯಲ್ಲಿಯೂ ನದಿಯ ಒಡಲಾಳದಿಂದ ಮರ ಹಾಗೂ ಕಬ್ಬಿಣದ ವಸ್ತು ಮಾದರಿ ಅವಶೇಷಗಳನ್ನು ಹೊರತೆಗೆಯಲಾಗಿತ್ತು. ನದಿಯ ಏರಿಳಿತ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರುತ್ತಿದೆಯಲ್ಲದೇ,ನದಿಯಿಂದ ಮಣ್ಣನ್ನು ಮೇಲೆತ್ತಿ ಸಾಗಿಸುವಾಗಲು,ಮಣ್ಣಿನಲ್ಲಿ ಯಾವುದಾದರೂ ವ್ಯಕ್ತಿಯ ಎಲುಬುಗಳು,ಇಲ್ಲವೇ ಕಟ್ಟಡ ಲಾರಿ ಮತ್ತಿತರ ಅವಶೇಷಗಳು ಕಂಡುಬರುತ್ತವೆಯೇ ಎಂದು ಪರಿಶೀಲಿಸಲಾಗುತ್ತಿದೆ.
ಹೀಗಾಗಿಯೂ ಕಾರ್ಯಾಚರಣೆ ಮೇಲ್ನೋಟಕ್ಕೆ ವಿಳಂಬವಾಗುತ್ತಿರುವಂತೆ ಕಂಡುಬರುತ್ತಿದೆಯಾದರೂ ಶೋಧ ಕಾರ್ಯ ಅಷ್ಟೇ ಮಹತ್ವ ಪಡೆದಿದೆ.ಮುಂದಿನ ಹಂತಗಳಲ್ಲಿ ಶೋಧ ಕಾರ್ಯಾಚರಣೆ ಯಾವ ರೀತಿ ಯಶಸ್ವಿಯಾಗುತ್ತದೆ ಕಾದು ನೋಡಬೇಕಿದೆ.ಮುಳುಗು ತಜ್ಞ ಈಶ್ವರ ಮಲ್ಪೆ ಸಹ ಶೋಧ ಕಾರ್ಯಕ್ಕೆ ಸಾಥ ನೀಡುತ್ತಿದ್ದಾರೆ.
ಶಾಸಕ ಸತೀಶ ಸೈಲ್ ಹಾಗೂ ಸರ್ಕಾರದ ಮತ್ತು ಜಿಲ್ಲಾಡಳಿತದ ವಿಶೇಷ ಪ್ರಯತ್ನ ಎಂಬಂತೆ,ತರಿಸಲಾದ ಡ್ರೆಜ್ಜಿಂಗ್ ಮಷೀನ್ ನಿಂದ ಕಾರ್ಯಾಚರಣೆಯ ಮೇಲೆ ನಿರೀಕ್ಷೆ ಹೆಚ್ಚಿದ್ದು, ಅದೇ ಭರವಸೆಯಲ್ಲಿ ಕೇರಳದ ಅರ್ಜುನ್,ಗಂಗೆ ಕೊಳ್ಳದ ಲೋಕೇಶ ನಾಯ್ಕ, ಸ್ಥಳೀಯ ಜಗನ್ನಾಥ್ ನಾಯ್ಕ್ ಸೇರಿದಂತೆ ನಾ ಪತ್ತೆಯಾಗಿರುವ ಈ ಮೂವರ ಹುಡುಕಾಟದಲ್ಲಿರುವ, ಕೆಲ ಕುಟುಂಬ ಸದಸ್ಯರು ಮತ್ತು ಸಂಬಂಧಿಗಳು,ಘಟನಾ ಸ್ಥಳದಲ್ಲಿದ್ದು ಕಾರ್ಯಾಚರಣೆಯನ್ನು ಬದು ನಿರೀಕ್ಷೆಯಿಂದ ವೀಕ್ಷಿಸುತ್ತಿದ್ದಾರೆ.
ಕನಿಷ್ಟ ಪಕ್ಷ ಆ ಎಲ್ಲಾ ನೊಂದ ಕುಟುಂಬಗಳ ಪಾಲಿಗೆ ,ದುರ್ಘಟನೆಯಲ್ಲಿ ನಾಪತ್ತೆಯಾದ ಆಯಾ ಕುಟುಂಬದ ಸದಸ್ಯರ ಅಸ್ಥಿಯಾದರೂ ದೊರೆತು, ಅ ಮೂಲಕ ಹಿಂದೂ ಶಾಸ್ತ್ರದಂತೆ ಅಂತಿಮ ಸಂಸ್ಕಾರ ನೆರವೇರಿಸುವ ಕೊನೆಯ ಅವಕಾಶ ಮತ್ತು ನೆಮ್ಮದಿ ಸಿಗಲಿ ಎಂದು ಹಲವರು ಪ್ರಾರ್ಥಿಸುವಂತಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ