ಅಂಕೋಲಾ : ತಾಲೂಕಿನ ಬೆಳಂಬರ ಗ್ರಾ.ಪಂ ವ್ಯಾಪ್ತಿಯ ವಾಡಿ ಬೊಗ್ರಿ- ಹಂದಗೋಡ ಮೂಲದ ಯುವಕನೋರ್ವ ಜೀವನ ನಿರ್ವಹಣೆಗಾಗಿ,ಮಲ್ಪೆಯಲ್ಲಿ ಬೋಟ ಕೆಲಸಕ್ಕೆ ಹೋಗಿದ್ದ. ದುರದೃಷ್ಟವೋ ಎನ್ನುವಂತೆ ಆಕಸ್ಮಿಕ ಅವಘಡ ಒಂದರಲ್ಲಿ ಸುಟ್ಟ ಗಾಯ ನೋವುಗಳೊಂದಿಗೆ ಆಸ್ವತ್ರೆಗೆ ದಾಖಲಾಗಿದ್ದನಾದರೂ,ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾನೆ. ನವೀನ್ ಗೋವಿಂದ ಗೌಡ (23 ) ಎಂಬ ಯುವಕನೇ ಮೃತ ದುರ್ದೈವಿಯಾಗಿದ್ದಾನೆ.
ಹಿಟ್ ಆ್ಯಂಡ್ ರನ್ : ಸ್ಥಳದಲ್ಲೇ ಬೈಕ್ ಸವಾರ ಸಾವು
ಇವನು ಕಳೆದ ಆಗಸ್ಟ್ ತಿಂಗಳಿನಲ್ಲಿ ಮಲ್ಪೆಯ ಬೋಟ್ ಒಂದರಲ್ಲಿ ಅಡುಗೆ ಕೆಲಸಕ್ಕೆ ಸೇರಿಕೊಂಡಿದ್ದ. ಹೀಗೆಯೇ ಒಂದು ದಿನ ರಾತ್ರಿ ವೇಳೆ ಸಮುದ್ರ ಮೀನುಗಾರಿಕೆ ನಡೆಯುತ್ತಿದ್ದಾಗ,ಅಬ್ಬರದ ಅಲೆಗಳ ಹೊಡೆತಕ್ಕೆ ಬೋಟ್ ಅಲ್ಲಾಡಿದ್ದು, ಅಡುಗೆ ಕೆಲಸ ನಿರ್ವಹಿಸುತ್ತಿದ್ದ ನವೀನ ಗೌಡ ಆಯ ತಪ್ಪಿ ಮೀನು ಕರಿಯಲು ಸಿದ್ಧಪಡಿಸಿದ್ದ ಕುದಿಯುತ್ತಿರುವ ಎಣ್ಣೆ ಬಾಣಲೆಯಲ್ಲಿ ಬಿದ್ದು ಮುಖ ಮತ್ತಿತರ ಭಾಗಗಳು ಸುಟ್ಟು ಗಾಯ ನೋವು ಗೊಂಡಿದ್ದ ಎನ್ನಲಾಗಿದೆ.
ತದನಂತರ ಆತನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆಗೊಳ ಪಡಿಸಲಾಗಿತ್ತು. ಈತನಿಗೆ ತೀವ್ರ ರಕ್ತದ ಅವಶ್ಯಕತೆ ಇರುವಾಗ ಕೆ.ಎಂ ಸಿಬ್ಲಡ್ ಬ್ಯಾಂಕ್ ನಲ್ಲಿದ್ದ ಎರಡು ಯೂನಿಟ್ ರಕ್ತಗಳನ್ನು ನೀಡಲಾಗಿತ್ತು. ಮತ್ತೊಂದು ಯೂನಿಟ್ ರಕ್ತದ ಬೇಡಿಕೆಗಾಗಿ ಆತನ ಕುಟುಂಬಸ್ಥರು ಮತ್ತು ಪರಿಚಿತರು ಅಂಕೋಲಾದ ಚಿನ್ನದ ಗರಿ ಯುವಕ ಸಂಘದವರನ್ನು ಸಂಪರ್ಕಿಸಿದ್ದರು ಮತ್ತು ಹೆಸ್ಕಾಂ ಇಲಾಖೆಯ ಬ್ಲಡ್ ಡೋನರ್ ಗ್ರುಪ್ ಸೇರಿದಂತೆ ಇತರೆ ಕೆಲ ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಕುರಿತು ವಿನಂತಿ ಹರಿ ಬಿಡಲಾಗಿತ್ತು.
ಈ ವಿಷಯವನ್ನು ಚಿನ್ನದ ಗರಿ ಯುವಕ ಸಂಘದವರು ಕುಮಟಾದ ಹೆಸರಾಂತ ಉದ್ಯಮಿ ಮತ್ತು ಸಾಮಾಜಿಕ ಕಾರ್ಯಕರ್ತ ಮತ್ತು ರಕ್ತದಾನಿ ಹಾಗೂ ರಕ್ತದಾನಿ ಗುಂಪಿನ ಮುಖ್ಯಸ್ಥ ಪಾಂಡುರಂಗ ಶಾನಭಾಗ್ ಇವರ ಮೂಲಕ ರಕ್ತ ಪೂರೈಕೆಯ ಪ್ರತಿಷ್ಠಿತ ಸಂಘಟನೆಯಾಗಿರುವ ಸತೀಶ್ ಸಾಲಿಯಾನ್ ನೇತೃತ್ವದ ಅಭಯ ಹಸ್ತ ತಂಡದವರಿಗೆ ವಿನಂತಿಸಿದ್ದರು. ಈ ವೇಳೆ ಸ್ವಯಂ ಪ್ರೇರಿತರಾಗಿ ಶ್ರೀಕಾಂತ್ ಆಚಾರ್ಯ ಎನ್ನುವವರು ರಕ್ತದಾನ ಮಾಡಿ ಮಾನವೀಯತೆ ಮೆರೆದದ್ದಲ್ಲದೇ ಪ್ರಾಣ ಉಳಿಸುವ ಪ್ರಯತ್ನಕ್ಕೆ ಮುಂದಾಗಿದ್ದರು.
ಆದರೂ ಗಂಭೀರವಾಗಿ ಸುಟ್ಟ ಗಾಯಗಳಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ನಾಗರಾಜ ಗೌಡ,ಚಿಕಿತ್ಸೆಗೆ ಸ್ಪಂದಿಸದೇ ಕೊನೆ ಉಸಿರೆಳೆದಿದ್ದು ಅವನನ್ನು ಉಳಿಸಿಕೊಳ್ಳಲಾಗಲಿಲ್ಲ ಎನ್ನುವ ನೋವು ರಕ್ತದಾನದ ಕುರಿತು ಮಾನವೀಯ ಕಳಕಳಿ ವ್ಯಕ್ತಪಡಿಸಿದ್ದವರದ್ದಾಗಿತ್ತು. ಬೋಟಿನಲ್ಲಿ ಸಂಭವಿಸಿದ ಆಕಸ್ಮಿಕ ದುರ್ಘಟನೆ ಕುರಿತು ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿಂದೆ ಅಂಕೋಲಾದಲ್ಲಿಯೇ ಕರ್ತವ್ಯ ನಿರ್ವಹಿಸಿ ಇತ್ತೀಚೆಗಷ್ಟೇ ಮಲ್ಪೆಗೆ ವರ್ಗಾವಣೆಗೊಂಡಿದ್ದ ಪಿ. ಎಸ್ ಐ ಪ್ರವೀಣ ಅವರು ಇಲಾಖೆ ಕರ್ತವ್ಯದ ಜೊತೆಯಲ್ಲಿಯೇ ನೊಂದ ಕುಟುಂಬದವರಿಗೆ ತನ್ನ ಕೈಲಾದ ಮಾನವೀಯ ಸಹಕಾರ ನೀಡಲು ಮುಂದಾಗಿದ್ದರು.
ಸ್ಥಳೀಯ ಬೊಟ್ ಮಾಲಕರು ಆಸ್ಪತ್ರೆ ಖರ್ಚು ವೆಚ್ಚ ಮತ್ತಿತರ ರೂಪದ ನೆರವು ನೀಡಿದರಾದರೂ ಯಾರಿಂದಲೂ ನವೀನ ಗೌಡನನ್ನು ಉಳಿಸಿಕೊಳ್ಳಲಾಗದೇ , ಆತ ಬಾರದ ಲೋಕಕ್ಕೆ ಪಯಣಿಸಿದಂತಾಗಿದೆ. ಈ ಹಿಂದೆ ನವೀನ ಗೌಡ ಅವರ ತಂದೆ ಗೋವಿಂದ ಗೌಡ ಸಹ ಬೋಟ್ ಒಂದರಲ್ಲಿ ಕೆಲಸ ಮಾಡುವ ವೇಳೆ ಆಯತಪ್ಪಿ ಕೆಳಗೆ ಬಿದ್ದು,ನಂತರ ಎಷ್ಟು ಹುಡುಕಿದರೂ ಪತ್ತೆಯಾಗಿರಲಿಲ್ಲ. ಹೀಗಾಗಿ ಈ ಕುಟುಂಬದ ಸಂಸಾರ ಜವಾಬ್ದಾರಿ ಹಿರಿಯ ಮಗನಾದ ನವೀನ್ ಮೇಲೆ ಬಿದ್ದಿತ್ತು. ನವೀನ ಈತನ ಸಹೋದರನೂ ಬೇರೊಂದು ಬೋಟಿನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಹೀಗಾಗಿ ನವೀನ್ ಈತನ ತಾಯಿ ಒಬ್ಬಂಟಿಯಾಗಿ ಊರಲ್ಲಿ ಉಳಿಯುವಂತಾಗಿತ್ತು.
ಈ ಮೊದಲು ಗಂಡ ಮತ್ತು ಈಗ ಹಿರಿಯ ಮಗನನ್ನು ಕಳೆದುಕೊಂಡ ಅತ್ಯಂತ ದುಃಖ, ನೋವು ಹಾಗೂ ಚಿಂತೆಯಲ್ಲಿರುವ ನವೀನನ್ ತಾಯಿ ದಿನವಿಡೀ ರೋಧಿಸುವಂಥಾಗಿದ್ದು, ನೃತದೃಷ್ಟ ಈ ಕುಟುಂಬಕ್ಕೆ ಮಾನವೀಯ ನೆಲೆಯಲ್ಲಿ,ಸಂಘ ಸಂಸ್ಥೆಗಳು,ಸಾಮಾಜಿಕ ಕಾರ್ಯಕರ್ತರು,ದಾನಿಗಳು,ಸಮಾಜ ಬಾಂಧವರು ನೆರವಿನ ಸಹಾಯ ಹಸ್ತ ಚಾಚ ಬೇಕಿದೆ. ಸರ್ಕಾರವೂ ನೊಂದ ಕುಟುಂಬಕ್ಕೆ ಯೋಗ್ಯ ಪರಿಹಾರ ರೂಪದ ನೆರವು ನೀಡಿ ಸಾಂತ್ವನ ಹೇಳಬೇಕಿದೆ.
ಈ ದುರ್ಘಟನೆ ಕುರಿತಂತೆ ಹಾಲಕ್ಕಿ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಹನುಮಂತ ಗೌಡ ಅವರು, ನವೀನ ಗೌಡ ಇತನ ಜೀವ ರಕ್ಷಣೆಗೆ ಮುಂದಾದ ಸರ್ವರನ್ನು ಸ್ಮರಿಸಿ,ಕೊನೆಗೂ ಆತನನ್ನು ಬದುಕುಳಿಸಿಕೊಳ್ಳಲಾಗಲಿಲ್ಲ ಎಂದು ಅತೀವ ಬೇಸರ ಹಾಗೂ ದುಃಖ ವ್ಯಕ್ತಪಡಿಸಿದ್ದಾರೆ. ನವೀನ ಗೌಡ ಈತನ ಅಕಾಲಿಕ ನಿಧನಕ್ಕೆ ಶಾಸಕ ಸತೀಶ್ ಸೈಲ್ ತೀವೃ ಸಂತಾಪ ಸೂಚಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ