ಶಿರೂರು ದುರಂತ; ಅರ್ಜುನ್ ಲಾರಿ ಪತ್ತೆಯ ಅಂಡರ್‌ವಾಟರ್ ಕಾರ್ಯಾಚರಣೆ ದೃಶ್ಯಾಳಿಗಳು

ಈ ವಿಡಿಯೋದ ಎಕ್ಸಿಕ್ಯೂಸಿವ್ ದೃಶ್ಯಾವಳಿಗಳು ವಿಸ್ಮಯ ವಾಹಿನಿಗೆ ಲಭ್ಯವಾಗಿದ್ದು ಮುಳುಗು ತಜ್ಞರು ನದಿಯಲ್ಲಿ ಹುದುಗಿ ಬಿದ್ದಿದ್ದ ವಾಹನದ ಬಳಿ ತೆರಳಿ ಅರ್ಜುನನ ಬಿಳಿ ಬಣ್ಣದ ಬೆಂಜ್ ಲಾರಿ ಯ ಮೇಲ್ಮೈ ಮೇಲೆ ಇರುವ ಪೇಂಟಿನಿಂದ ಬರೆದ ಹೆಸರುಗಳು ಕಾಣುವಂತೆ ಕೈಯಿಂದ ಒರೆಸಿ ,ಖಚಿತಪಡಿಸಿಕೊಂಡ ದೃಶ್ಯಗಳಿವೆ. ತದನಂತರ ಸ್ಥಳೀಯ ಶಾಸಕರು ಮತ್ತಿತರರ ಸಮ್ಮುಖದಲ್ಲಿ ಅರ್ಜುನ್ ಲಾರಿಯನ್ನು ಮೇಲೆತ್ತಲಾಗಿದೆ.ಈ ವೇಳೆ ಅರ್ಜುನನ ಮೃತ ದೇಹ ಲಾರಿಯಲ್ಲಿದ್ದು ಅದನ್ನು ಹೊರ ತೆಗೆದು ಡಿಎನ್ಎ ಪರೀಕ್ಷೆ ಗೆ ಒಳಪಡಿಸಿ ಅದು ಅರ್ಜುನನ ಮೃತ ದೇಹ ಎಂದು ದೃಢಪಟ್ಟ ನಂತರ ಆತನ ವಾರಸುದಾರರಿಗೆ ಹಸ್ತಾಂತರಿಸಿ ಕೇರಳದ ಜನಸ್ತೋಮದ ನಡುವೆ ಆತನ ಅಂತ್ಯಕ್ರಿಯೆ ನಡೆದಿರುವುದು ಇತಿಹಾಸದ ಪುಟ ಸೇರಿದಂತಾಗಿದೆ.

ಅಂಕೋಲಾ: ಕಳೆದ ಜುಲೈ 16 ರಂದು ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66 ರಂದ ಅಂಚಿನ ಗುಡ್ಡ ಕುಸಿತ ದುರ್ಘಟನೆಯಲ್ಲಿ ಒಟ್ಟೂ 11 ಮಂದಿ ನಾಪತ್ತೆಯಾಗಿದ್ದರು. ಆದರೆ ಅಂದಿನಿಂದ ಸುಮಾರು ಎರಡುವರೆ ತಿಂಗಳುಗಳ ಕಾಲ ನಾಪತ್ತೆಯಾದ ಇತರ ಎಲ್ಲರಿಗಿಂತ ಹೆಚ್ಚಾಗಿ ವೈರಲ್ ಆಗಿದ್ದು ಮಾತ್ರ ಕೇರಳ ಮೂಲದ ಅರ್ಜುನ್ ಮತ್ತು ಆತನ ಬೆಂಜ್ ಲಾರಿಯ ಕುರಿತಾಗಿರುವ ಸುದ್ದಿ ಮತ್ತು ಸುದ್ದಿ ಮತ್ತು ಅಂತೆ ಕಂತೆಗಳ ವಿಚಾರವಾಗಿತ್ತು. ದುರ್ಘಟನೆ ಸಂಭವಿಸಿದ ದಿನದಿಂದ ಬೆಂಜ್ ವಾಹನದ ಜಿಪಿಎಸ್ ತಂತ್ರಾಂಶ ಆಧರಿಸಿ ಅರ್ಜುನನ ಲಾರಿ ಹೆದ್ದಾರಿಯ ಒಂದು ಮಗ್ಗುಲಿನಲ್ಲಿಯೇ ಕಲ್ಲುಬಂಡೆಗಳು ಮತ್ತು ಮಣ್ಣಿನ ರಾಶಿ ಅಡಿ ಸಿಲುಕಿ ಕೊಂಡಿದೆ ಎನ್ನುವ ಮಾಹಿತಿ ಹರಿ ಬಿಡಲಾಗಿತ್ತು.ಇದೆ ವೇಳೆ ಅರ್ಜುನನ ಮೊಬೈಲ್ ಇಂದ ಮನೆಗೆ ಫೋನ್ ಕರೆ ಹೋಗಿತ್ತು ಮತ್ತಿತರ ಗಾಳಿ ಸುದ್ದಿ ಹರಿದಾಡಿತ್ತು.

ಇದನ್ನೂ ಓದಿ : ನಬಾರ್ಡ್ ನಲ್ಲಿ 108 ಉದ್ಯೋಗಾವಕಾಶ: SSLC ಆದವರು ಅರ್ಜಿ ಸಲ್ಲಿಸಬಹುದು

ಹೀಗಾಗಿ ಅರ್ಜುನ್ ರಕ್ಷಣೆಗೆ ಕೇರಳಿಗರ ಆಗ್ರಹದಂತೆ ಮುಂದಾಗಿದ್ದ ಸ್ಥಳೀಯ ಆಡಳಿತ ಶಕ್ತಿ ಮೀರಿ ಕಾರ್ಯಾಚರಣೆ ನಡೆಸಿತ್ತು.ಆದರೆ ಎಷ್ಟು ಮಣ್ಣು ತೆರವು ಮಾಡಿದರು ಮೆಟಲ್ ಡಿಟೆಕ್ಟರ್ ಮತ್ತಿತರ ತಂತ್ರಜ್ಞಾನ ಬಳಸಿದರು ಅರ್ಜುನ್ ಮತ್ತು ಆತನ ಲಾರಿಯ ಇರುವಿಕೆ ಪತ್ತೆಯಾಗದೆ ಕಾರ್ಯಾಚರಣೆ ಎನ್ನುವುದು ಸವಾಲಿನ ಕೆಲಸವಾಗಿತ್ತು.ಈ ನಡುವೆ ಅರ್ಜುನ್ ಬೆಂಜ್ ಲಾರಿಯ ಗಟ್ಟಿ ಮುಟ್ಟಾದ ಕ್ಯಾಬಿನ್ ನಲ್ಲಿ 5-6 ದಿನ ಬದುಕುಳಿ ದಿರ ಬಹುದೆಂಬ ಆಶಾ ಭಾವನೆ ನಿಧಾನವಾಗಿ ಕ್ಷೀಣಿಸಲಾರಂಭಿತ್ತು.

ನಂತರ ಗಂಗಾವಳಿ ನದಿಯಲ್ಲಿಯೂ ಶೋಧ ಕಾರ್ಯಾಚರಣೆ ಆರಂಭಿಸಲಾಯಿತು.ಈ ವೇಳೆ ಆಪತ್ಬಾಂಧವ ಖ್ಯಾತಿಯ ಮಲ್ಪೆ ಈಶ್ವರ್ ಈತನ ಸೇವೆ ದೊರೆತು ಕಾರ್ಯಾಚರಣೆ ಯತ್ತ ಹೊಸ ಭರವಸೆ ಮೂಡಿತ್ತು.ಗಂಗಾವಳಿ ನದಿ ಜೋರಾದ ಹರಿವಿನ ನಡುವೆಯೂ ಈಶ್ವರ್ ಮಲ್ಪೆ ಶೋಧ ಪ್ರಯತ್ನ ಮುಂದುವರಿಸಿದರಲ್ಲದೇ ತಕ್ಕಮಟ್ಟಿನ ಯಶಸ್ಸು ಗಳಿಸಿದ್ದರು. ತದನಂತರ ಮಳೆ ಮಧ್ಯಂತರ ಪ್ರತಿಕೂಲ ವಾತಾವರಣದಿಂದ ಶೋಧ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಗುಡ್ಡದಿಂದ ಜರಿದು ನದಿಯಲ್ಲಿ ರಾಶಿ ಬಿದ್ದಿರುವ ಕಲ್ಲು ಬಂಡೆ ಮತ್ತು ಮಣ್ಣು ತೆರವಿಗೆ ಉದ್ದನೆಯ ಪೋಕ್ಲೈನ್ ಮಾದರಿ ಯಂತ್ರವನ್ನು ಬೆಳಗಾವಿ ಗೋಕಾಕ್ ಕಡೆಯಿಂದ ತರಿಸಿ ಶೋಧ ಕಾರ್ಯಾಚರಣೆಗೆ ಬಲತುಂಬುವ ಯತ್ನ ನಡೆಸಲಾಗುತ್ತಾದರೂ, ಹೆದ್ದಾರಿ ಅಂಚಿಗೆ ನಿಂತು ನದಿ ನೀರಿನಿಂದ ಕಲ್ಲು ಮಣ್ಣುಗಳನ್ನು ಮೇಲೆ ಎತ್ತುವ ಕಾರ್ಯ ನಿರೀಕ್ಷಿತ ಯಶಸ್ಸು ದೊರೆಯದೆ ಯಂತ್ರವನ್ನು ಮರಳಿ ಕಳಿಸಲಾಗಿತ್ತು.

ತದನಂತರ ನದಿಯಲ್ಲಿಯೇ ನಿಂತು ಕಾರ್ಯಾಚರಿಸಬಲ್ಲ ಡ್ರೆಜ್ಜಿಂಗ್ ಯಂತ್ರದಿಂದ ಮಾತ್ರ ಕಾರ್ಯಾಚರಣೆ ಸಾಧ್ಯ ಎಂದು ಯೋಚಿಸಿ ಮತ್ತು ಚರ್ಚಿಸಿ ಈ ಕುರಿತು ಅಭಿಷೇನಿಯ ಓಷಿಯನ್ ಸರ್ವಿಸ್ ಮತ್ತು ಅಭಿಷೇನಿಯ ಡ್ರೆಜ್ಜಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಶೋಧ ಕಾರ್ಯದ ಗುತ್ತಿಗೆ ನೀಡಲಾಗಿತ್ತು. ಗೋವಾದಿಂದ ಸಮುದ್ರ ಮಾರ್ಗವಾಗಿ ಬಂದು ಅಂಕೋಲಾದ ಮಂಜುಗುಣಿ ಕಡಲ ಸಂಗಮ ಪ್ರದೇಶದಲ್ಲಿ ಗಂಗಾವಳಿ ನದಿಯಲ್ಲಿ ಸಾಗಿ ಬಂದ ಬಾರ್ಜ ಮೌಂಟೆಡ್ ಕ್ರೇನ್ ಮತ್ತು ಹಿಟಾಚಿ ಯಂತ್ರ ಟಗ್ ಬೋಟಗಳು ನಿಗದಿತ ಸ್ಥಳ ತಲುಪಿ ಕಾರ್ಯಾಚರಣೆ ಮಾಡಲು ಆರಂಭಿಸಿದವು. ಈ ವೇಳೆ ಗುತ್ತಿಗೆದಾರ ಕಂಪನಿ ವತಿಯಿಂದಲೂ ಕೇರಳ ಮತ್ತಿತರ ರಾಜ್ಯಗಳ ಕೆಲ ಪ್ರಸಿದ್ಧ ಮುಳುಗುತಜ್ಞರ ಸೇವೆ ಬಳಸಿಕೊಳ್ಳಲಾಗುತ್ತಿತ್ತು.

ಇದೆ ವೇಳೆ ಪ್ರತ್ಯೇಕವಾಗಿ ನೀರಿಗೆ ಇಳಿದಿದ್ದ ಮುಳುಗುತಜ್ಞ ಈಶ್ವರ್ ಮಲ್ಪೆಯೂ ಶೋಧಕಾರ್ಯ ಮುಂದುವರಿಸಿದ್ದರು.ಈ ಹಿಂದೆಯೇ ಅರ್ಜುನ್ ಲಾರಿ ಪತ್ತೆಯಾಗಿತ್ತೆಂಬ ತಪ್ಪು ಮಾಹಿತಿ ಅದೇ ಗೋ ರವಾನೆಯಾಗಿ ಸಚಿವರೊಬ್ಬರ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿಯು ಪ್ರಕಟವಾಗಿ ನಂತರ ಅರ್ಜುನ್ ಲಾರಿಪತ್ತೆಯಾಗದೇ ಪ್ರಕಟಿಸಿದವರಿಗೂ ಇರಿಸು ಮುರಿಸು ಉಂಟು ಮಾಡಿತ್ತು ಎನ್ನಲಾಗಿದೆ. ಮೂರನೇ ಹಂತದ ಶೋಧ ಕಾರ್ಯಾಚರಣೆ ವೇಳೆ ಡ್ರೆಜ್ಜಿಂಗ್ ಗುತ್ತಿಗೆ ಪಡೆದಿದ್ದ ಮಹೇಂದ್ರ ಡೊಂಗ್ರೆ ಸುರಕ್ಷತೆ ಮತ್ತಿತರ ದೃಷ್ಟಿಯಿಂದ ತಾವು ಕಾರ್ಯಾಚರಿಸುತ್ತಿರುವ ಸ್ಥಳದ ಅತಿ ಹತ್ತಿರದಲ್ಲಿ ಇತರರು ನೀರಿಗಿಳಿಯದಂತೆ ಸೂಚಿಸಿದ್ದರು ಎನ್ನಲಾಗಿದ್ದು ಈ ವಿಚಾರದಲ್ಲಿ ಈಶ್ವರ ಮಲ್ಪೆ ಸ್ವಲ್ಪ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ .

ಇದೆ ವೇಳೆ ಈಶ್ವರ ಮಲ್ಪೆ ಲಕ್ಷ್ಮಣ ಕುಟುಂಬಕ್ಕೆ ಸಂಬಂಧಿಸಿದ ದ್ವಿಚಕ್ರ ವಾಹನ ಹಾಗೂ ಅರ್ಜುನ್ ಲಾರಿಯಲ್ಲಿ ಇತ್ತೆನ್ನಲಾಗಿದ್ದ ಒಂದೆರಡು ಕಟ್ಟಿಗೆ ತುಂಡುಗಳು ಹಾಗೂ ಯಾವುದೋ ವಾಹನದ ಎರಡು ಚಕ್ರಗಳನ್ನು ಪತ್ತೆ ಹಚ್ಚಿ ಹಗ್ಗ ಕಟ್ಟಿ ಬಂದಿದ್ದರು ಎನ್ನಲಾಗುತ್ತಿದೆ.ಆದರೆ ಅದನ್ನು ಮೇಲೆ ಎತ್ತುವ ಮುನ್ನ ಸಾಮಾಜಿಕ ಜಾಲತಾಣ ಮತ್ತಿತರ ಮಾಧ್ಯಮಗಳಲ್ಲಿ ಒಮ್ಮೆಲೆ ಹರಿಬಿಟ್ಟರೆ ಆ ವಾಹನದ ಚಕ್ರಗಳು ಅರ್ಜುನ್ ಲಾರಿಯವು ಎನ್ನುವ ಖಚಿತ ಮಾಹಿತಿ ದೊರೆಯುವವರೆಗೆ ಸುದ್ದಿ ನೀಡುವುದು ಬೇಡ ಎನ್ನುವ ಸಂದೇಶವನ್ನು ಸಂಬಂಧಿಸಿದವರು ನೀಡಿದ್ದರು ಎನ್ನಲಾಗಿದೆ.

ಇದಕ್ಕೂ ಮೊದಲು ಡ್ರೆಜಿಂಗ್ ಯೂನಿಟ್ ನೊಂದಿಗೆ ಬಂದಿದ್ದ ಮುಳುಗುತಜ್ಞರು ಸಹ ನದಿಯಾಳದ ಪ್ರತ್ಯೇಕ ಸ್ಥಳದಲ್ಲಿ ವಾಹನ ಒಂದರ ಇಂಜಿನ್ ಪತ್ತೆ ಮಾಡಿ ಹಗ್ಗ ಕಟ್ಟಿ ಬಂದಿದ್ದರು.ಆದರೆ ಮೊದಲು ವಾಹನದ ಚಕ್ರಗಳನ್ನು ಮೇಲೆತ್ತಿ ತದನಂತರದ ಕಾರ್ಯಾಚರಣೆಯಲ್ಲಿ ವಾಹನದ ಇಂಜಿನ್ ಮೇಲೆತ್ತಲಾಗಿತ್ತು ಎನ್ನಲಾಗಿದೆ. ಈ ನಡುವೆ ಪರಸ್ಪರರ ನಡುವೆ ಹೊಂದಾಣಿಕೆ ಕೊರತೆ ಅಥವಾ ಇತರೆ ಕಾರಣಗಳಿಂದ ಈಶ್ವರ್ ಮಲ್ಪೆ ಅವರು ಬೇಸರ ವ್ಯಕ್ತಪಡಿಸಿ ತಮ್ಮ ಕಾರ್ಯಾಚರಣೆಯನ್ನು ಅಲ್ಲಿಗೆ ಕೈ ಬಿಟ್ಟು ಊರಿಗೆ ವಾಪಸ್ ತೆರಳಿದ್ದರು.ಇದೆ ವೇಳೆ ಜಿಲ್ಲಾಡಳಿತದ ವಿರುದ್ಧ ತಮ್ಮದೇ ಯೂಟ್ಯೂಬ್ ಚಾನೆಲ್ ಹಾಗೂ ಇತರ ಮಾಧ್ಯಮಗಳ ಮುಂದೆ ಅಸಮಾಧಾನ ತೋರ್ಪಡಿಸಿದಂತಿತ್ತು.

ಇದೆ ವೇಳೆ ಪೊಲೀಸ್ ವರಿಷ್ಠ ಅಧಿಕಾರಿಗಳು ಸಹ ಸಾರ್ವಜನಿಕ ತಿಳುವಳಿಕೆ ಪ್ರಕಟಣೆ ಹೊರಡಿಸಿ ಈ ವಿಚಾರ ಸತ್ಯಕ್ಕೆ ದೂರವಾಗಿದ್ದು ಈಶ್ವರ್ ಮಲ್ಪೆ ಜಿಲ್ಲಾಡಳಿತದಿಂದ ಶೋಧ ಕಾರ್ಯಾಚರಣೆಗೆ ಅನುಮತಿ ಪಡೆದಿರಲಿಲ್ಲ ಎಂದು ತಿಳಿಸಿದ್ದರು. ಈಶ್ವರ್ ಮಲ್ಪೆ ಹಾಗು ಜಿಲ್ಲಾಡಳಿತದ ಕ್ರಮದ ಕುರಿತು ಸಾರ್ವಜನಿಕ ವಲಯದಲ್ಲಿ ಹಾಗೂ ಕೆಲ ಸುದ್ದಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲ ಎರಡು ಕಡೆಯ ನಡೆ – ನುಡಿಗಳ ಬಗ್ಗೆ ನಾನಾ ರೀತಿಯ ಚರ್ಚೆ ಹಾಗೂ ಪರ ವಿರೋಧ ವ್ಯಕ್ತ ವಾಗುವಂತಾಗಿತ್ತು.

ಇದೆ ವೇಳೆ ಈಶ್ವರ್ ಮಲ್ಪೆ ಸೇವೆ ಮುಂದುವರಿಯಬೇಕಿತ್ತೆಂದು ಹಲವರು ಬೆಂಬಲ ವ್ಯಕ್ತಪಡಿಸಿದಂತಿತ್ತು. ಒಂದೊಮ್ಮೆ ಈಶ್ವರ್ ಮಲ್ಪೆ ಸೇವೆ ದೊರೆಯದಿದ್ದರೆ ನದಿ ನೀರಿನಲ್ಲಿ ಶೋಧ ಕಾರ್ಯ ನಡೆಸಲು ಇತರ ಸಮರ್ಥರಿರದೇ ಡ್ರೆಜ್ಜಂಗ್ ಕಾರ್ಯಾಚರಣೆಗೆ ವಿನಿಯೋಗಿಸುವ ದೊಡ್ಡ ಮೊತ್ತದ ಹಣ ಘೋಲಾಗಬಹುದೇ ಎನ್ನುವ ಅನುಮಾನವನ್ನು ಕೆಲವರು ವ್ಯಕ್ತಪಡಿಸಿದ್ದಂತಿತ್ತು.ಆದರೆ ಶೋಧ ಕಾರ್ಯ ಗುತ್ತಿಗೆ ಪಡೆದಿದ್ದ ಕಂಪನಿಯವರು ತಮ್ಮ ಬಳಿಯೂ ಪರಿಣಿತ ಮುಳುಗು ತಜ್ಞರಿದ್ದಾರೆ ಎಂಬಂತೆ ದಿನದಿಂದ ದಿನಕ್ಕೆ ಶೋಧ ಕಾರ್ಯಾಚರಣೆಯಲ್ಲಿ ಯಶಸ್ಸು ಸಾಧಿಸುತ್ತಾ ಬಾರಿ ಗಾತ್ರದ ಮರಗಳು ,ಎಲೆಕ್ಟ್ರಿಕಲ್ ಟವರ್ ,ಟ್ಯಾಂಕರ್ ವಾಹನದ ಹೌಜಿಂಗ್ , ಹೊಟೇಲ್ ಕಟ್ಟಡದ ತಗಡು ಮತ್ತಿತರ ಅವಶೇಷಗಳನ್ನು ಪತ್ತೆ ಮಾಡುತ್ತಾ ಸದ್ದಿಲ್ಲದೆ ತಮ್ಮ ಕಾರ್ಯ ಶೈಲಿಯ ಮೂಲಕವೇ ನೊಂದ ಕುಟುಂಬದವರಲ್ಲಿಯೂ ಹೊಸ ಭರವಸೆ ಮೂಡಿಸಿದಂತಿತ್ತು.

ದುರ್ಘಟನೆ ನಡೆದ ದಿನ ಬೆಂಗಳೂರಿನಲ್ಲಿ ವಿಧಾನಸಭಾ ಅಧಿವೇಶನದಲ್ಲಿದ್ದ ಶಾಸಕ ಸತೀಶ್ ಸೈಲ್ ಅಲ್ಲಿಯೇ ಈ ವಿಷಯವನ್ನು ಪ್ರಸ್ತಾಪಿಸಿ ಕೂಡಲೇ ಅಲ್ಲಿಂದ ಹೊರಟು ಅಂಕೋಲಾ ಕ್ಕೆ ಬಂದವರು ಅಂದಿನಿಂದ ನಿರಂತರವಾಗಿ ಎರಡು ತಿಂಗಳುಗಳಿಗೂ ಹೆಚ್ಚು ಕಾಲ ಒಟ್ಟಾರೆ ಕಾರ್ಯಾಚರಣೆಗೆ ತನ್ನ ಕೈಲಾದ ಸಹಾಯ ಸಹಕಾರ ನೀಡುತ್ತ ಶಿರೂರು ಹಾಗೂ ಉಳುವರೇ ಭಾಗದ ಸಂತ್ರಸ್ತರ ನೋವಿಗೆ ಸ್ಪಂದಿಸುತ್ತಾ ತನ್ನ ಜನಪರ ಕಳಕಳಿ ವ್ಯಕ್ತಪಡಿಸಿದ್ದಲ್ಲದೆ ಬೇರೆ ಬೇರೆ ಹಂತಗಳಲ್ಲಿ ಆಡಳಿತ ವ್ಯವಸ್ಥೆ ಹಾಗೂ ತಮ್ಮ ವಿರುದ್ಧ ಕೇರಳದ ಕೆಲ ಸುದ್ದಿ ಮಾಧ್ಯಮಗಳು ಅಥವಾ ಇತರರಾರೋ ಅಪಾದನೆ ಮಾಡಲು ಮುಂದಾದರು ಸಂಯಮ ಕಳೆದುಕೊಳ್ಳದೆ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡುತ್ತಾ ಸೇವೆಯನ್ನೇ ಉಸಿರಾಗಿಸಿಕೊಂಡು ತನ್ನ ವೈಯಕ್ತಿಕ ವರ್ಚಸ್ಸು ಮತ್ತು ಕರ್ನಾಟಕದ ಘನತೆಯನ್ನು ಹೆಚ್ಚಿಸಿದಂತಿತ್ತು.

ಅವರು ಈ ಮೊದಲೇ ಸೂಚಿಸಿದ್ದಂತೆ ಗಂಗಾವಳಿ ನದಿಯಲ್ಲಿ ಶೋಧಕಾರ್ಯ ನಡೆಸುತ್ತಿರುವಾಗ ಡ್ರೆಜ್ಜಿಂಗ್ ಟೀಂನೊಂದಿಗೆ ಬಂದಿದ್ದ ಕೇರಳ ಮತ್ತಿತರೆಡೆಯ ಪ್ರಖ್ಯಾತ ಮುಳುಗುತಜ್ಞರು ಮಣ್ಣುಗಳ ಡಿ ಸಿಲುಕಿಕೊಂಡಿರುವ ಅರ್ಜುನ್ ಲಾರಿಯನ್ನು ಯಶಸ್ವಿಯಾಗಿ ಪತ್ತೆ ಹಚ್ಚಿದರು.ಆದರೂ ಅದನ್ನು ಅವರು ಪ್ರಚಾರದ ಉದ್ದೇಶಕ್ಕೆ ಬಳಸಿಕೊಂಡತಿರದೇ ಮಾಹಿತಿಯಲ್ಲಿ ಖಚಿತತೆ ಇರಲಿ ಎಂಬ ಉದ್ದೇಶದಿಂದಲೋ ಏನೋ ,ಅಂಡರ್ ವಾಟರ್ ಅಂದರೆ ನೀರಿನಲ್ಲಿ ಕ್ಯಾಮರಾ ಬಳಸಿ ಸಂಪೂರ್ಣ ಚಿತ್ರೀಕರಣ ಮಾಡಿಕೊಂಡಿದ್ದಾರೆ.

ಈ ವಿಡಿಯೋದ ಎಕ್ಸಿಕ್ಯೂಸಿವ್ ದೃಶ್ಯಾವಳಿಗಳು ವಿಸ್ಮಯ ವಾಹಿನಿಗೆ ಲಭ್ಯವಾಗಿದ್ದು ಮುಳುಗು ತಜ್ಞರು ನದಿಯಲ್ಲಿ ಹುದುಗಿ ಬಿದ್ದಿದ್ದ ವಾಹನದ ಬಳಿ ತೆರಳಿ ಅರ್ಜುನನ ಬಿಳಿ ಬಣ್ಣದ ಬೆಂಜ್ ಲಾರಿ ಯ ಮೇಲ್ಮೈ ಮೇಲೆ ಇರುವ ಪೇಂಟಿನಿಂದ ಬರೆದ ಹೆಸರುಗಳು ಕಾಣುವಂತೆ ಕೈಯಿಂದ ಒರೆಸಿ ,ಖಚಿತಪಡಿಸಿಕೊಂಡ ದೃಶ್ಯಗಳಿವೆ.ತದನಂತರ ಸ್ಥಳೀಯ ಶಾಸಕರು ಮತ್ತಿತರರ ಸಮ್ಮುಖದಲ್ಲಿ ಅರ್ಜುನ್ ಲಾರಿಯನ್ನು ಮೇಲೆತ್ತಲಾಗಿದೆ.ಈ ವೇಳೆ ಅರ್ಜುನನ ಮೃತ ದೇಹ ಲಾರಿಯಲ್ಲಿದ್ದು ಅದನ್ನು ಹೊರ ತೆಗೆದು ಡಿಎನ್ಎ ಪರೀಕ್ಷೆ ಗೆ ಒಳಪಡಿಸಿ ಅದು ಅರ್ಜುನನ ಮೃತ ದೇಹ ಎಂದು ದೃಢಪಟ್ಟ ನಂತರ ಆತನ ವಾರಸುದಾರರಿಗೆ ಹಸ್ತಾಂತರಿಸಿ ಕೇರಳದ ಜನಸ್ತೋಮದ ನಡುವೆ ಆತನ ಅಂತ್ಯಕ್ರಿಯೆ ನಡೆದಿರುವುದು ಇತಿಹಾಸದ ಪುಟ ಸೇರಿದಂತಾಗಿದೆ.

ಒಟ್ಟಾರೆ ಅರ್ಜುನನ ಶೋಧ ಕಾರ್ಯಾಚರಣೆಯಲ್ಲಿ ಆರಂಭದಿಂದ ಕೊನೆಯವರೆಗೆ ವಿಶೇಷ ಪ್ರಯತ್ನ ಮತ್ತು ಸೇವೆ ಸಲ್ಲಿಸಿದ ಹಾಗೂ ಪ್ರತ್ಯಕ್ಷ ಅಪ್ರತ್ಯಕ್ಷ ವಾಗಿ ಸಹಕರಿಸಿದ ಸರ್ವರ ಸೇವೆಯನ್ನು ಕೊಂಡಾಡಲೇಬೇಕಿದೆ. ಅದರಲ್ಲೂ ವಿಶೇಷವಾಗಿ ಯುವ ಮುಳುಗು ತಜ್ಞರ ತಂಡಕ್ಕೆ ನಿಮ್ಮದೊಂದು ಮೆಚ್ಚುಗೆ ಇರಲಿ.ಕೇರಳ ಮೂಲದ ಅರ್ಜುನ್ ಕರುನಾಡ ಗಂಗಾವಳಿಯಲ್ಲಿ ತನ್ನ ಅಂತಿಮ ಯಾತ್ರೆ ಮುಗಿಸಿದ್ದು ,ಕರ್ನಾಟಕ ಕೇರಳ ಮಾತ್ರವಲ್ಲದೆ ದೇಶ ವಿದೇಶಗಳಲ್ಲಿಯೂ ಕೋಟ್ಯಾಂತರ ಜನರ ಕಂಬನಿಗೆ ಕಾರಣವಾಗಿದ್ದ ಅರ್ಜುನ್ ನಾಪತ್ತೆಯಾದ ಈ ದುರ್ಘಟನೆ ಹಾಗೂ ನಾಪತ್ತೆಯಾದ ಇತರರು ಮತ್ತು ಈ ವರೆಗೂ ಪತ್ತೆಯಾಗದ ಜಗನ್ನಾಥ್ ನಾಯ್ಕಮತ್ತು ಲೋಕೇಶ್ ನಾಯ್ಕ ಸೇರಿದಂತೆ ನೊಂದ ಎಲ್ಲ ಕುಟುಂಬಗಳಿಗೆ ಪ್ರೀತಿ ಹಾಗೂ ಭರವಸೆಯ ಸಾಂತ್ವನ ಹೇಳಿ ,ಅವರ ಭವಿಷ್ಯಕ್ಕೆ ಸಾಧ್ಯವಾದಷ್ಟು ನೆರವಿನ ಹಸ್ತ ಚಾಚಬೇಕಿದೆ. ಈ ಮೂಲಕ ಎಲ್ಲ ಮೃತ ಆತ್ಮಗಳಿಗೆ ಚಿರಶಾಂತಿ ಕೋರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version