ಅಂಕೋಲಾ: ಅಪಾಯಕಾರಿ ತಿರುವು ಹೊಂದಿರುವ ರಾಷ್ಟ್ರೀಯ ಹೆದ್ದಾರಿ 66ರ ಅಂಕೋಲಾ ತಾಲೂಕಿನ ಕೊಡಸಣಿ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡ ಭಾರೀ ವಾಹನ ಒಂದು ,ಹೆದ್ದಾರಿ ಅಂಚಿನ ಟೀ ಸ್ಟಾಲ್ ಗೆ ನುಗ್ಗಿ ಪಲ್ಟಿಯಾದ ಘಟನೆ ಸಂಭವಿಸಿದೆ ಮಂಗಳೂರು ಕಡೆಯಿಂದ ನಾಗೂರು ಕಡೆ ಪ್ಲಾಸ್ಟಿಕ್ ಬಬಲ್ಸ್ ಹೊತ್ತು ಸಾಗಿಸುತ್ತಿತ್ತು ಎನ್ನಲಾದ ಭಾರೀ ವಾಹನ ಒಂದು ರಾಷ್ಟ್ರೀಯ ಹೆದ್ದಾರಿ 66ರ ಅಂಕೋಲಾ ತಾಲೂಕಿನ ಗಂಗಾವಳಿ ಸೇತುವೆ ಸಮೀಪ ,ಕೊಡೆಸಣಿ ವ್ಯಾಪ್ತಿಯ ಅಪಾಯಕಾರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ,ಬಲಬದಿಯಲ್ಲಿರುವ ಹೆದ್ದಾರಿ ಅಂಚಿನ ಟೀ ಸ್ಟಾಲ್ ಒಂದಕ್ಕೆ ನುಗ್ಗಿ ಪಲ್ಪಿಯಾಗಿದೆ.
ಪರಿಣಾಮ ಲಾರಿ ಮತ್ತು ಟೀ ಸ್ಟಾಲ್ ಜಖಂ ಗೊಂಡಿದೆಯಲ್ಲದೇ , ಕೆಲ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿದೆ. ಅಪಘಾತದಿಂದ ಗಾಲುಗೊಂಡ ಇಬ್ಬರನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದ್ದು ಗಾಯದ ಸ್ವರೂಪ ಮತ್ತು ಗಾಯಾಳುಗಳ ಕುರಿತಂತೆ ಮಾಹಿತಿ ತಿಳಿದು ಬರಬೇಕಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ದಿನದಿಂದ ದಿನಕ್ಕೆ ಅಪಘಾತಗಳು ಮತ್ತು ಸಾವು ನೋವಿನ ಸಂಖ್ಯೆ ಹೆಚ್ಚುತ್ತಲೇ ಇದ್ದು ಚತುಷ್ಪಥ ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದ ಐ ಆರ್ ಬಿ ಯ ಅವೈಜ್ಞಾನಿಕ ಹಾಗೂ ಅಪೂರ್ಣ ಕಾಮಗಾರಿಯಿಂದಲೇ ಜಿಲ್ಲೆಯ ಹಲವೆಡೆ ನಾನಾ ರೀತಿಯ ಸಮಸ್ಯೆಗಳು ಹಾಗೂ ಅಪಘಾತ ಹೆಚ್ಚಲು ಕಾರಣವಾಗಿದೆ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಅಂಕೋಲಾ ತಾಲೂಕಿನಲ್ಲಿ ಗಂಗಾವಳಿ ನದಿಗೆ ಅಡ್ಡಲಾಗಿ ಹೊಸೂರು ಬ್ರಿಡ್ಜ್ ಕಟ್ಟಲಾಗಿದ್ದು , ಹತ್ತಿರದಲ್ಲೇ ಅಪಾಯಕಾರಿ ತಿರುವೊಂದಿದ್ದು ಆಗಾಗ ಇಲ್ಲಿ ವಾಹನಗಳು ಪಲ್ಟಿಯಾಗುತ್ತಲೇ ಇರುತ್ತದೆ. ಈ ಕುರಿತು ಈ ಹಿಂದೆ ಜಿಲ್ಲಾಧಿಕಾರಿಗಳು ಐಆರ್ ಬಿ ಅಧಿಕಾರಿಗಳಿಗೆ ಸೂಚನೆ ನೀಡಿದಾಗ , ನಾಮಕಾ ವಾಸ್ತೆ ಅಲ್ಪ ಪ್ರಮಾಣದಲ್ಲಿ ಡಾಂಬರ್ ಲೇಹರ್ ಹಾಕಿ ಹೆದ್ದಾರಿ ದುರಸ್ತಿಗೊಳಿಸಿದ್ದಲ್ಲದೇ ,ವೇಗದ ಮಿತಿ ಮತ್ತಿತರ ಕೆಲ ಸೂಚನಾ ಫಲಕ ಅಳವಡಿಕೆ ಮತ್ತಿತರ ಕ್ರಮ ಕೈಗೊಂಡಂತೆ ಮಾಡಿ ಕೈ ತೊಳೆದು ಕೊಂಡಂತಿರುವ ಗುತ್ತಿಗೆದಾರ ಕಂಪನಿಯವರು ,ಅಪಾಯಕಾರಿ ಹೆದ್ದಾರಿ ತಿರುವನ್ನು ಶಾಶ್ವತವಾಗಿ ಸರಿಪಡಿಸದೇ ವಿಳಂಬ ನೀತಿ ಅನುಸರಿಸುತ್ತಿರುವಂತಿದೆ.
ಕೆಲವೆಡೆ ಹೆದ್ದಾರಿಗಾಗಿ ಭೂಮಿಯನ್ನು ಸರಿಯಾಗಿ ಸ್ವಾಧೀನ ಪಡಿಸಿಕೊಳ್ಳದಿರುವುದು ಮತ್ತಿತರ ಕಾರಣಗಳಿಂದ ಈಗಲೂ ಹೆದ್ದಾರಿ ಕಾಮಗಾರಿ ಅಪೂರ್ಣವಾಗಿಯೇ ಇದೆ. ಶಿರೂರು ಗುಡ್ಡ ಕುಸಿತ ದುರಂತದ ಕಹಿ ಘಟನೆ ಮಾಸುವ ಮುನ್ನವೇ ಅದೇ ಸ್ಥಳದ ಅತಿ ಹತ್ತಿರದಲ್ಲಿ ಐಆರ್ ಬಿ ಯ ಬೇಜವಾಬ್ದಾರಿಗೆ ಕೊಡಸಣಿ ಬಳಿಯ ಅಪಾಯಕಾರಿ ತಿರುವಿನ ರಸ್ತೆಯೂ ಜೀವ ಬಲಿ ಪಡೆಯಲು ಕಾದಿದೆಯೇ ಎಂದು ಸ್ಥಳೀಯರು ಆತಂಕ ಪಡುವಂತಾಗಿದೆ. ಈ ಹಿಂದೇ ಇದೇ ಸ್ಥಳಗಳಲ್ಲಿ ಹತ್ತಾರು ಅಪಘಾತಗಳು ಸಂಭವಿಸಿದ್ದು ಗಮನಕ್ಕಿದ್ದರೂ ಸಂಬಂಧಿಸಿದವರಿಂದ ಇಲ್ಲಿ ಇಷ್ಟೊಂದು ನಿರ್ಲಕ್ಷ ಯಾಕೆ ? ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಈಗಲಾದರೂ ಎಚ್ಚೆತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಐಆ ರ್ ಬಿ ಗೆ ಕಟ್ಟುನಿಟ್ಟಿನ ಸೂಚನೆ ನೀಡಿ ,ಅಪಾಯಕಾರಿ ತಿರುವಿನ ಸಮಸ್ಯೆಗೆ ಪರಿಹಾರ ನೀಡುವರೇ ಕಾದುನೋಡಬೇಕಿದೆ.
ಟೀ ಸ್ಟಾಲ್ ಗೆ ಹೊಂದಿಕೊಂಡೆ ಪುಟ್ಟ ಮನೆಯೊಂದಿರುವುದು ಅಪಘಾತವನ್ನು ದೂರದಿಂದ ನೋಡಿದವರ ಆತಂಕಕ್ಕೆ ಕಾರಣವಾಗಿತ್ತು. ಅಲ್ಲದೇ ಲಾರಿ ಪಲ್ಟಿಯಾಗಿವಿದ್ಯುತ್ ಕಂಬಕ್ಕೂ ಡಿಕ್ಕಿ ಪಡಿಸಿಕೊಂಡು ಕಂಬ ಮುರಿದು ಬಿದ್ದು ಆತಂಕ ಹೆಚ್ಚು ವಂತಾಗಿತ್ತು ಎನ್ನಲಾಗಿದೆ.ಮಧ್ಯಾಹ್ನದ ಸಮಯ ಮತ್ತಿತರ ಕಾರಣಗಳಿಂದ ಈ ವೇಳೆ ಅಲ್ಲಿ ಜನ ಸಂಚಾರ ಕಡಿಮೆ ಇದ್ದರಿಂದ ಸಂಭವನೀಯ ಬಾರಿ ಅಪಾಯ ಮತ್ತು ಅನಾಹುತ ತಪ್ಪಿದಂತಾಗಿದೆ ಎನ್ನುವ ಮಾತು ಸ್ಥಳೀಯರಿಂದ ಕೇಳಿ ಬಂದಿದ್ದು ,ಅದೃಷ್ಟವಶಾತ್ ಯಾರಿಗೂ ಪ್ರಾಣಹಾನಿಯಾಗಿಲ್ಲ.ಹೆದ್ದಾರಿ ಗಸ್ತುವಾಹನ ,ಸ್ಥಳೀಯ ಪೊಲೀಸರು ಮತ್ತು ಎನ್ ಎಚ್ ಎ ಐ ತುರ್ತು ಸೇವಾ ಸಿಬ್ಬಂದಿಗಳು ಮತ್ತಿತರರು ಕರ್ತವ್ಯ ನಿರ್ವಹಿಸಿದರು.
ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸ್ಥಳೀಯರು ಸಹಕರಿಸಿದರು. ಈ ದಿನದ ಹೆದ್ದಾರಿ ಅಪಘಡ ಮತ್ತು ಭಾರೀ ಲಾರಿ ಪಲ್ಟಿಯಾದ ಘಟನೆ ಕುರಿತಂತೆ ವಾಹನದ ತಾಂತ್ರಿಕ ದೋಷ ಅಥವಾ ಚಾಲಕನ ನಿರ್ಲಕ್ಷ ಮತ್ತಿತರ ಕಾರಣಗಳೂ ಇರಬಹುದೇ ? ಒಟ್ಟಾರೆಯಾಗಿ ಅಪಘಾತದ ಘಟನೆ ಕುರಿತಂತೆ ಹೆಚ್ಚಿನ ಮತ್ತು ಅಧಿಕೃತ ಮಾಹಿತಿಗಳು ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ