ಅತ್ಯಂತ ವಿಜೃಂಭಣೆಯಿಂದ ನಡೆದ ನಾಮಧಾರಿ ದಹಿಂಕಾಲ ಉತ್ಸವ: ಗಮನಸೆಳೆದ ಸ್ತಬ್ಧ ಚಿತ್ರಗಳು, ರೂಪಕಗಳು: ವಾದ್ಯ ಮೇಳಗಳೊಂದಿಗೆ ಅದ್ಧೂರಿ ಮೆರವಣಿಗೆಗೆ

ಅಂಕೋಲಾ: ನೂರಾರು ವರ್ಷಗಳ ಸಾಂಪ್ರದಾಯಿಕ ಪರಂಪರೆ ಹೊಂದಿರುವ ನಾಮಧಾರಿ ದಹಿಂಕಾಲ ಉತ್ಸವ ಅಂಕೋಲಾದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಸ್ಥಳೀಯ ಹಾಗೂ ಹೊರ ಜಿಲ್ಲೆಗಳ ಸ್ತಬ್ಧ ಚಿತ್ರಗಳು , ರೂಪಕಗಳು ,ವೇಷ ಭೂಷಣ ಹಾಗೂ ವಾದ್ಯ ಮೇಳಗಳು ಮೆರವಣಿಗೆಗೆ ಅದ್ದೂರಿ ಸ್ವರ್ಶ ನೀಡಿದವು . ಶಾಸಕ ಸತೀಶ್ ಸೈಲ್ ಮತ್ತಿತರ ಗಣ್ಯರು ಶ್ರೀ ದೇವರ ದರ್ಶನ ಪಡೆದುಕೊಂಡರು.

ದೇವದಾಸಿಯಂಥ ಅನಿಷ್ಟ ಪದ್ಧತಿ ವಿರೋಧಿಸಿದ ಐತಿಹಾಸಿಕ ಸಂಪ್ರದಾಯ ಹೊಂದಿರುವ ದಹಿಂಕಾಲ ಉತ್ಸವವನ್ನು ಅಂಕೋಲಾ ತಾಲೂಕಿನಲ್ಲಿ ನಾಮಧಾರಿ ಸಮಾಜದವರು ವರ್ಷದಿಂದ ವರ್ಷಕ್ಕೆ ಅತ್ಯಂತ ವಿಜೃಂಭಣೆಯಿAದ ಆಚರಿಸುತ್ತಾ ಬಂದಿದ್ದಾರೆ. ಈ ವರ್ಷ ನವೆಂಬರ್ 25ರ ಸೋಮವಾರ ಧಾರ್ಮಿಕ ಮತ್ತು ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ದಹಿಂಕಾಲ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ನಾಮಧಾರಿ ಸಮಾಜದ ದಹಿಂಕಾಲ ಉತ್ಸವ ಸಮಿತಿ ಅಂಕೋಲಾ ಇವರ ಆಶ್ರಯದಲ್ಲಿ ನಡೆದ ಈ ಉತ್ಸವದಲ್ಲಿ ಸಾವಿರಾರು ಜನರು ಪಾಲ್ಗೊಂಡು ಉತ್ಸವದ ಸೊಬಗನ್ನು ವೀಕ್ಷಿಸಿದರು. ಪಟ್ಟಣದ ಮುಖ್ಯ ರಸ್ತೆಯ ಕೆಲವೆಡೆ ಎಲ್ ಇ ಡಿ ಸ್ಟ್ರೀನ್ ಅಳವಡಿಸಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು.

ಉತ್ಸವದ ಅಂಗವಾಗಿ ಬೆಳಿಗ್ಗೆ ಪಟ್ಟಣದ ಶ್ರೀವೆಂಕಟರಮಣ ದೇವಾಲಯದಲ್ಲಿ ಸಮಾಜದ ಮತ್ತು ಸಂಭoದಿಸಿದ ಮನೆತನದ ಪ್ರಮುಖರ ನೇತೃತ್ವದಲ್ಲಿ ದೇವರ ಅಭಿಷೇಕ ಮತ್ತು ಪೂಜಾ ಕಾರ್ಯಕ್ರಮಗಳು ನೆರವೇರಿದವು. ಸಂಪ್ರದಾಯದoತೆ ಶ್ರೀ ಶಾಂತಾದುರ್ಗಾ ದೇವಿಯ ಪಲ್ಲಕ್ಕಿ ಮೆರವಣಿಗೆ ಶ್ರೀ ವೆಂಕಟರಮಣ ದೇವಾಲಯಕ್ಕೆ ತೆರಳಿ ಅಲ್ಲಿಂದ ವೆಂಕಟರಮಣ ದೇವರರೊಡಗೂಡಿ ರಥದ ಮೂಲಕ ಅದ್ದೂರಿ ಮೆರವಣಿಗೆಯಲ್ಲಿ ಶಾಂತಾದುರ್ಗಾ ದೇವಸ್ಥಾನಕ್ಕೆ ಆಗಮಿಸಿತು. ರಥ ಬೀದಿಯಿಂದ ಝೇಂಡಾ ಕಟ್ಟೆ ವರೆಗೆ ಮೆರವಣಿಗೆ ಸಾಗುವ ಮುಖ್ಯ ರಸ್ತೆಗಳನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು.,ದೊಡ್ಡ ದೊಡ್ಡ ಸ್ವಾಗತ ಕಮಾನುಗಳು,ರಸ್ತೆಯ ಇಕ್ಕೆಲಗಳಲ್ಲಿ ವಿದ್ಯುತ್ ದೀಪಲಂಕಾರ,ಭಾರಿ ಗಾತ್ರದ ಕಟೌಟ್ ಗಳು ರಾರಾಜಿಸಿದವು.

ವೆಂಕಟರಮಣ ದೇವಸ್ಥಾನದ ರಥ ಬೀದಿಯಿಂದ ಹೊರಟ ಭವ್ಯ ಮೆರವಣಿಗೆಯಲ್ಲಿ ಈ ವರ್ಷದ ದಹಿಂಕಾಲ ಉತ್ಸವದ ಪ್ರಮುಖ ಆಕರ್ಷಣೆಯಾಗಿ ಪೌರಾಣಿಕ , ಸಾಮಾಜಿಕ , ಜನಪದ ಮತ್ತಿತರ ಸ್ತಬ್ಧ ಚಿತ್ರಗಳು, ರೂಪಕ ಹಾಗೂ ಕಣ್ಣಿಗೆ ಕಟ್ಟು ವಂತ ಕೆಲ ದೃಶ್ಯಾವಳಿಗಳು,ವೇಷ ಭೂಷಣಗಳು ,ವಾದ್ಯ ಮೇಳ , ಕೀಲು ಗೊಂಬೆ ಪ್ರದರ್ಶನ ಮೊದಲಾದ ಪ್ರಕಾರಗಳು ಭವ್ಯ ಮೆರವಣಿಗೆ ಅಂದ ಹೆಚ್ಚಿಸಿದವು . ಶಾಸಕರಾದ ಸತೀಶ ಸೈಲ್ ರಥಾರೂಢ ಭೂಮಿ ತಾಯಿ ಶಾಂತಾ ದುರ್ಗೆ ಮತ್ತು ದೊಡ್ಡ ದೇವರಾದ ಶ್ರೀ ವೆಂಕಟರಮಣ ನ ದರ್ಶನ ಪಡೆದುಕೊಂಡು ನಾಮಧಾರಿ ದಹಿಂಕಾಲ ಉತ್ಸವ ಮತ್ತು ಸಂಘಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಾಜಿ ಶಾಸಕಿ ರೂಪಾಲಿ ನಾಯ್ಕ ಸೇರಿದಂತೆ ಇತರ ಪ್ರಮುಖರು ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version